ADVERTISEMENT

`ಅವನತಿಯ ಹಾದಿಯಲ್ಲಿ ದೇಶೀಯ ಕಲೆ'

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 6:06 IST
Last Updated 2 ಜುಲೈ 2013, 6:06 IST

ರಾಮನಗರ: `ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಇಂದಿನ ಯುವ ಜನತೆ ದೇಶೀಯ ಕಲೆಗಳನ್ನು ಮರೆಯುತ್ತಿದ್ದಾರೆ' ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರಿದೇವರು ವಿಷಾದ ವ್ಯಕ್ತಪಡಿಸಿದರು.

ನಗರದ ಸ್ಫೂರ್ತಿ ಭವನದಲ್ಲಿ ಓಂಜೈಶ್ರಿ ಟ್ರಸ್ಟ್‌ನ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ ನಡೆದ ನವವಿಧ ಸಂಗೀತ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಳಿವಿನಂಚಿಗೆ ತಲುಪಿರುವ ದೇಶೀಯ ಕಲೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ದೇಶೀಯ ಕಲೆಗಳು ಮಾನವೀಯ ಮೌಲ್ಯಗಳ ಕಣಜಗಳು. ಮನರಂಜನೆ ನೀಡುವ ಜತೆಗೆ ಮನಸ್ಸಿನ ಕಲ್ಮಶಗಳನ್ನು ತೊಡೆದು ಮಾನವೀಯ ಭಾವನೆಗಳನ್ನು ಬಿತ್ತುತ್ತವೆ. ಜನಪದ ಕಲೆಗಳು ದೇಶೀಯ ನೃತ್ಯ ಪ್ರಕಾರಗಳು, ಗಾಯನ, ನಾಟಕಗಳು ಮನಸ್ಸಿಗೆ ಮುದ ನೀಡುತ್ತವೆ. ಅಲ್ಲದೆ ಜೀವನ ರೂಪಿಸಿಕೊಳ್ಳುವ ಪಾಠವನ್ನು ಕಲಿಸುತ್ತದೆ ಎಂದರು.

`ದೂರದರ್ಶನದ ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಂದ ಸಾಮಾಜಿಕ ವ್ಯವಸ್ಥೆ ಅಧಃಪತಕ್ಕೆ ಕಾರಣವಾಗಿದೆ. ಕೌಟುಂಬಿಕ ಮನಸ್ತಾಪಗಳು ಹಾಗೂ ಕ್ರೌರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ಪ್ರೇಕ್ಷಕರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ' ಎಂದರು.

`ಕೇವಲ ಹಣ ಗಳಿಸುವುದನ್ನೇ ಕಾಯಕವಾಗಿಸಿಕೊಂಡ ಜನರು, ಒತ್ತಡದಲ್ಲಿ ಸಿಲುಕಿ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಗೂ ತುತ್ತಾಗುತ್ತಿದ್ದಾರೆ. ಇಂತಹವರಿಗೆ ಜಾನಪದ ಕಲೆಗಳು ಔಷಧಿಯಾಗಿವೆ' ಎಂದು ತಿಳಿಸಿದರು.

ರಾಮನಗರ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ಶೇಷಾದ್ರಿ ಮಾತನಾಡಿ,`ಯುವಜನರು ಟಿಕೆಟ್ ಪಡೆಯಲು ಸಿನಿಮಾ ಮಂದಿರಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ರಂಗ ಕಲೆ, ಜಾನಪದ ಕಲೆ ಸೇರಿದಂತೆ ದೇಶೀಯ ಕಲೆಗಳ ಪ್ರದರ್ಶನಕ್ಕೆ ಪ್ರೇಕ್ಷಕರ ಕೊರತೆ ಎದುರಾಗಿದೆ. ನಶಿಸುತ್ತಿರುವ ದೇಶೀಯ ಕಲೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ' ಎಂದು ತಿಳಿಸಿದರು.

ನವರಸ ಕಲಾವಿದರಿಂದ ನವವಿಧ ಸಂಗೀತ ಸಂಗಮ ಕಾರ್ಯಕ್ರಮ ನಡೆಯಿತು. ಟಿ.ರಂಗರಾಜು, ದಿವಾಕರ್, ಎಂ.ಪ್ರಭುದಾಸ್, ಟ್ರಸ್ಟ್‌ನ ಅಧ್ಯಕ್ಷ ಎಸ್.ಸಿದ್ದರಾಜು, ಕಾರ್ಯದರ್ಶಿ ಎಸ್.ಜಗದೀಶ ಮೂರ್ತಿ, ಲಾವಣ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.