ADVERTISEMENT

ಆರೋಗ್ಯ ವಿ.ವಿ.ಸ್ಥಳಾಂತರ: ಗರಿಗೆದರಿದ ನಿರೀಕ್ಷೆ

ಅರ್ಚಕರಹಳ್ಳಿಯಲ್ಲಿ ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ಶೀಘ್ರ ನೆರವೇರುತ್ತಾ ಭೂಮಿ ಪೂಜೆ ?

ಆರ್.ಜಿತೇಂದ್ರ
Published 17 ಜೂನ್ 2018, 9:48 IST
Last Updated 17 ಜೂನ್ 2018, 9:48 IST
ರಾಜೀವ್‌ ಗಾಂಧಿ ಆರೋಗ್ಯ ವಿ.ವಿ. ತಾತ್ಕಾಲಿಕ ಕ್ಯಾಂಪಸ್‌ ಆಗಿರುವ ರಾಮನಗರದ ಕಂದಾಯ ಭವನ
ರಾಜೀವ್‌ ಗಾಂಧಿ ಆರೋಗ್ಯ ವಿ.ವಿ. ತಾತ್ಕಾಲಿಕ ಕ್ಯಾಂಪಸ್‌ ಆಗಿರುವ ರಾಮನಗರದ ಕಂದಾಯ ಭವನ   

ರಾಮನಗರ: ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದರೊಂದಿಗೆ ಜಿಲ್ಲೆಯಲ್ಲಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ ನಿರ್ಮಾಣದ ಕನಸು ಮತ್ತೆ ಗರಿಗೆದರಿದೆ. ತಮ್ಮದೇ ಕನಸಿನ ಯೋಜನೆ ಸಾಕಾರಕ್ಕೆ ಎಚ್‌ಡಿಕೆ ಒತ್ತಾಸೆಯಾಗಿ ನಿಲ್ಲಲಿದ್ದಾರೆ ಎನ್ನುವ ನಿರೀಕ್ಷೆ ಇಲ್ಲಿನ ಜನರದ್ದು.

ವಿಶ್ವವಿದ್ಯಾಲಯ ಕ್ಯಾಂಪಸ್ ಸ್ಥಾಪನೆ ಸಂಬಂಧ ಜಿಲ್ಲೆಯವರೇ ಆದ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಈಗಾಗಲೇ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಸಹ ಈ ಬಗ್ಗೆ ಅಧಿಕಾರಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ.

ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಆಡಳಿತಾತ್ಮಕ ಕಚೇರಿಯು ರಾಮನಗರಕ್ಕೆ ಸ್ಥಳಾಂತರಗೊಂಡು ವರ್ಷವೇ ಕಳೆದಿದೆ. ಈ ಹಿಂದಿನ ಜಿಲ್ಲಾಧಿಕಾರಿ ಕಚೇರಿಯಾಗಿದ್ದ ಕಂದಾಯ ಭವನವನ್ನು 2017ರ ಮಾರ್ಚ್‌ 19ರಂದು ಆರೋಗ್ಯ ವಿ.ವಿ.ಗೆ ಬಿಟ್ಟುಕೊಡಲಾಗಿದೆ. ಆದರೆ, ನಾನಾ ಕಾರಣಗಳನ್ನು ಮುಂದಿಟ್ಟು ವಿಶ್ವವಿದ್ಯಾಲಯದ ಸಿಬ್ಬಂದಿ ಇಲ್ಲಿಗೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕುತ್ತಲೇ ಇದ್ದಾರೆ.

ADVERTISEMENT

ಎಚ್‌ಡಿಕೆ ಕನಸು: 2007ರಲ್ಲಿ ರಾಜ್ಯದಲ್ಲಿ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದ್ದ ವೇಳೆ ಎಚ್‌.ಡಿ.ಕುಮಾರಸ್ವಾಮಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ನಿರ್ಧಾರ ಪ್ರಕಟಿಸಿದ್ದರು. ರಾಮನಗರ ತಾಲ್ಲೂಕಿನ ಅರ್ಚಕರಹಳ್ಳಿ ಬಳಿ ಸುಮಾರು 216.16 ಎಕರೆ ಭೂ ವಿಸ್ತೀರ್ಣದಲ್ಲಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್‌ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗಳನ್ನೂ ಘೋಷಣೆ ಮಾಡಿದ್ದರು. ಸುಮಾರು ₹330 ಕೋಟಿ ಹಣ ಇದಕ್ಕಾಗಿ ಘೋಷಿಸಿ, ಟೆಂಡರ್ ಪ್ರಕ್ರಿಯೆಗೂ ಚಾಲನೆ ನೀಡಿದ್ದರು.

ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಬಳಿಕ ಯೋಜನೆ ವಿಘ್ನಗಳನ್ನು ಎದುರಿಸುತ್ತಲೇ ಬಂದಿದೆ. ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರದ ತರುವಾಯ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಆ ಸಂದರ್ಭ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಚ್ಚೇಗೌಡ ವಿ.ವಿ.ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಅದೇ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪಿ.ಯೋಗೇಶ್ವರ್‌ ಭೂಸ್ವಾಧೀನ ಪ್ರಕ್ರಿಯೆ ಸಂಬಂಧ ರೈತರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಅಂದಿನ ವೈದ್ಯಕೀಯ ಶಿಕ್ಷಣ ಸಚಿವ ಎಸ್‌.ಎ.ರಾಮದಾಸ್ ಸಹ ಮಾತುಕತೆ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ.

ನಂತರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈಗಾಗಲೇ ಸ್ವಾಧೀನಪಡಿಸಿಕೊಂಡ ಜಮೀನು ಹಸ್ತಾಂತರಿಸಿಕೊಂಡು ಪರಿಷ್ಕೃತ ಯೋಜನಾ ವರದಿ ಸಲ್ಲಿಸುವಂತೆಯೂ ಸೂಚಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಒತ್ತಡ ಹೇರುತ್ತಾ ಆರೋಗ್ಯ ಸಚಿವ ರಮೇಶ್‌ಕುಮಾರ್, ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ ಅವರನ್ನು ಕರೆಯಿಸಿ ಇಲ್ಲಿನ ಕಂದಾಯ ಭವನ ವಿಶ್ವವಿದ್ಯಾಲಯದ ಆಡಳಿತ ಕಚೇರಿಗೆ ಹಸ್ತಾಂತರ ಸಹ ಮಾಡಿದ್ದರು.

ಇಷ್ಟೆಲ್ಲ ಕಾರ್ಯಗಳು ನಡೆದಿದ್ದರೂ ಅರ್ಚಕರಹಳ್ಳಿಯಲ್ಲಿ ಆರೋಗ್ಯ ವಿ.ವಿ.ಕ್ಯಾಂಪಸ್ ನಿರ್ಮಾಣ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ.

ನ್ಯಾಯಾಲಯದ ಮೆಟ್ಟಿಲೇರಿದ ರೈತರು: ಸರ್ಕಾರವು ವಶಪಡಿಸಿಕೊಂಡಿರುವ 216 ಎಕರೆ ಜಮೀನಿನ ಪೈಕಿ 72 ಎಕರೆ ಪ್ರದೇಶದ 17 ಮಂದಿ ಭೂಮಾಲೀಕರು ವಿವಿಧ ಹಂತದ ನ್ಯಾಯಾಲಯಗಳಲ್ಲಿ ಹೋರಾಟ ಮಾಡುತ್ತಾ ಬಂದಿದ್ದಾರೆ. ವಶಪಡಿಸಿಕೊಂಡ ಭೂಮಿಗೆ
ಸರ್ಕಾರ ನಿಗದಿಪಡಿಸಿರುವ ಮೊತ್ತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಇಲ್ಲ ಎನ್ನುವುದು ಅವರ ಆರೋಪ.

ಅರ್ಚಕರಹಳ್ಳಿಯ ಸುತ್ತಮುತ್ತ ಈಗಾಗಲೇ ಸಾಕಷ್ಟು ಲೇಔಟ್‌ಗಳು ತಲೆ ಎತ್ತುತ್ತಿವೆ. ಅಲ್ಲಿ ನಿವೇಶನವೊಂದಕ್ಕೆ ₹15–20 ಲಕ್ಷ ಬೆಲೆ ಇದೆ. ಹೀಗಿರುವಾಗ ಸರ್ಕಾರ ಎಕರೆಗೆ ₹30 ₹40 ಲಕ್ಷ ಪರಿಹಾರ ಕೊಟ್ಟರೆ ಏನು ಪ್ರಯೋಜನ ಎನ್ನುವುದು ಅವರ ಪ್ರಶ್ನೆ. ಕೇಂದ್ರ ಸರ್ಕಾರದ ಹೊಸ ಭೂಸ್ವಾಧೀನ ಮಸೂದೆಗೆ ಅನುಗುಣವಾಗಿ ಭೂಮಿಯ ಬೆಲೆ ಮೂರು ಪಟ್ಟು ಪರಿಹಾರ ನೀಡಬೇಕು ಎನ್ನುವುದು ಅವರ ಆಗ್ರಹವಾಗಿದೆ.

ಕ್ಯಾಂಪಸ್‌ನಲ್ಲಿ ಏನೇನು ಇರಲಿದೆ?
ಆಡಳಿತ ಭವನ, ವೈದ್ಯಕೀಯ, ದಂತ, ನರ್ಸಿಂಗ್ ಕಾಲೇಜುಗಳು, 750 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ಮತ್ತು 250 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿದ್ಯಾರ್ಥಿನಿಲಯಗಳು, ವಸತಿ ಗೃಹಗಳು ಸೇರಿದಂತೆ ಒಟ್ಟು 16 ಬೃಹತ್ ಕಟ್ಟಡಗಳನ್ನು ಈ ಆರೋಗ್ಯ ವಿ.ವಿ.ಕ್ಯಾಂಪಸ್‌ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

ಆರೋಗ್ಯ ವಿವಿಯಿಂದ ಯಾರಿಗೆ ಲಾಭ?

ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ ಕಾರ್ಯಾರಂಭ ಮಾಡಿದಲ್ಲಿ ರಾಮನಗರದ ಜೊತೆಗೆ ಮಂಡ್ಯ, ಮೈಸೂರು, ಚಾಮರಾಜನಗರ ಮೊದಲಾದ ಜಿಲ್ಲೆಗಳ ಜನರಿಗೂ ಹೆಚ್ಚಿನ ಅನುಕೂಲ ಆಗಲಿದೆ. ಉತ್ತಮ ಆರೋಗ್ಯ ಸೇವೆಗಾಗಿ ಮಹಾನಗರಿಗೆ ಅಲೆಯುವುದು ತಪ್ಪಲಿದೆ. ರಾಮನಗರ ಮತ್ತು ಚನ್ನಪಟ್ಟಣ ಅವಳಿ ನಗರದ ಬೆಳವಣಿಗೆ ದೃಷ್ಟಿಯಿಂದಲೂ ಈ ಯೋಜನೆ ಮಹತ್ವದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.