ADVERTISEMENT

ಆರ್‌ಟಿಇ ಸೀಟು ಉಳ್ಳವರ ಪಾಲು

ಸಚಿವ ಡಿ.ಕೆ.ಶಿವಕುಮಾರ್‌ ಅಸಮಾಧಾನ *ತಿದ್ದುಪಡಿಗೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 10:08 IST
Last Updated 1 ಮಾರ್ಚ್ 2014, 10:08 IST

ರಾಮನಗರ: ಆರ್ಥಿಕ ಬಡತನ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗಾಗಿ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ  ಖಾಸಗಿ ಶಾಲೆಗಳಲ್ಲಿ ಮೀಸಲಿಟ್ಟಿರುವ ಶೇ 25ರಷ್ಟು ಸೀಟು­ಗಳು ಬಹುತೇಕ ನಗರವಾಸಿಗಳು ಹಾಗೂ ಉಳ್ಳವರ ಪಾಲಾಗುತ್ತಿವೆ. ಗ್ರಾಮೀಣ ಭಾಗದ ಅರ್ಹ ವಿದ್ಯಾರ್ಥಿ­ಗಳು ಇದರಿಂದ ವಂಚಿತರಾಗುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಇಂಧನ ಸಚಿವ ಡಿ.ಕೆ.ಶಿವ­ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಮನಗರ ಜಿಲ್ಲಾ ಘಟಕವು ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪ­ದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರೌಢ­ಶಾಲಾ ಶಿಕ್ಷಕರ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ, ಪ್ರತಿಭಾ ಪುರಸ್ಕಾರ, ರಾಷ್ಟ್ರೀಯ ವಿಜ್ಞಾನ ದಿನಾ­ಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳು ಕಡಿಮೆ ಇವೆ. ಸಾಕಷ್ಟು ಕಡೆ ಖಾಸಗಿ ಶಾಲೆಗಳೇ ಇಲ್ಲ. ಈಗಿನ ಆರ್‌ಟಿಇ ನೀತಿಯಡಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಸೀಟು ದೊರೆಯುತ್ತದೆ. ಸ್ಥಳೀಯ ಮಟ್ಟದಲ್ಲಿ ಶಾಲೆಗಳೇ ಇಲ್ಲದಿರುವಾಗ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆರ್‌ಟಿಇ ಅನುಕೂಲ ದೊರೆಯುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೇಂದ್ರಕ್ಕೆ ಪ್ರಸ್ತಾವ: ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಆರ್‌ಟಿಇ ನೀತಿಗೆ ತಿದ್ದುಪಡಿ ತರಬೇಕಾದ ಅಗತ್ಯ ಇದೆ. ಈ ಕುರಿತು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಚರ್ಚೆಗಳು ನಡೆಯ­ಬೇಕಿದೆ. ಹಾಗಾಗಿ ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿ­ಕೊಡ­ಲಾಗಿದೆ ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ತಿನ ಸದಸ್ಯ ಪುಟ್ಟಣ್ಣ ಮಾತನಾಡಿ, ಶಾಲೆಯಲ್ಲಿ ಎಲ್ಲ ಕೆಲಸ­ವನ್ನೂ ಶಿಕ್ಷಕರಿಗೆ ವಹಿಸಲಾಗಿದೆ. ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಹಲವು ಕಾರ್ಯಕ್ರಮಗಳ ಉಸ್ತುವಾರಿ ಕೊಟ್ಟು, ಶಿಕ್ಷಕರನ್ನು ಗುಮಾಸ್ತರನ್ನಾಗಿ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು.

ಜಿ.ಪಂ ಉಪಾಧ್ಯಕ್ಷೆ ಎಸ್‌.ಬಿ.­ಗೌರಮ್ಮ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ರಘು­ಕುಮಾರ್‌, ತಾ.ಪಂ ಅಧ್ಯಕ್ಷೆ ಲಕ್ಷ್ಮಿ ಎ. ಮಂಜುನಾಥ್‌, ಜಿಲ್ಲಾಧಿಕಾರಿ ಡಾ.ಡಿ.ಎಸ್‌.­ವಿಶ್ವನಾಥ್‌, ಸಿಇಒ ಡಾ.ಎಂ.ವಿ.ವೆಂಕಟೇಶ್‌, ಎಸ್ಪಿ ಅನುಪಮ್‌ ಅಗ್ರವಾಲ್‌, ಡಿಡಿಪಿಐ ಪ್ರಹ್ಲಾದ್‌ಗೌಡ, ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಮಂಜುನಾಥ್‌, ರಾಜ್ಯ ಪದವೀಧರರ ವೇದಿಕೆ ಅಧ್ಯಕ್ಷ ರಾಮೋಜಿಗೌಡ, ಕಾಂಗ್ರೆಸ್‌ ಮುಖಂಡರಾದ ಮರಿದೇವರು, ಎ. ಮಂಜನಾಥ್‌, ಕೆ.ಶೇಷಾದ್ರಿ, ಎಲ್‌.ಚಂದ್ರಶೇಖರ್‌, ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಜಿ.ಪುಟ್ಟಸ್ವಾಮಿ, ಕಾರ್ಯದರ್ಶಿ ಜೆ.ಶಿವಶಂಕರ್‌, ಜಿಲ್ಲಾ ಘಟಕದ ಅಧ್ಯಕ್ಷ ಸಿ.ರಾಜಶೇಖರ್‌, ಕಾರ್ಯದರ್ಶಿ ಮಹದೇವಯ್ಯ, ಉಪಾಧ್ಯಕ್ಷ ಎಂ.ಎನ್‌,ದೇವರಾಜು, ಆರ್‌.ಕೆ.ಬೈರಲಿಂಗಯ್ಯ  ಇತರರು ಉಪಸ್ಥಿತರಿದ್ದರು.

ಅರ್ಧ ಗಂಟೆಗೂ ಮೀರಿದ ಸ್ವಾಗತ: ಸಚಿವರಿಗೆ ಸಿಟ್ಟು
ಶಿಕ್ಷಕರ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಸ್ವಾಗತಕಾರರು ಅರ್ಧ ಗಂಟೆಗೂ ಹೆಚ್ಚಿಗೆ ಕಾಲ ಸ್ವಾಗತ ಭಾಷಣ ಮಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಗರಂ ಆಗುವಂತೆ ಮಾಡಿತು.

ಇದಕ್ಕೆ ತಮ್ಮ ಭಾಷಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಶಿವಕುಮಾರ್‌, ಸ್ವಾಗತಕಾರರು ವೇದಿಕೆಯ ಮೇಲಿನ ಪ್ರಮುಖ ನಾಲ್ಕು–ಐದು ಜನರ ಹೆಸರೇಳಿದರೆ ಸಾಕು. ಅದನ್ನು ಬಿಟ್ಟು ಎಲ್ಲರನ್ನು ಮೆಚ್ಚಿಸುವ ಉದ್ದೇಶದಿಂದ ಅರ್ಧಗಂಟೆ ಸ್ವಾಗತ ಮಾಡುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಇಂತಹ ಎಡವಟ್ಟು ಆಗಬಾರದು. ಜಿಲ್ಲಾಧಿಕಾರಿ ಮತ್ತು ಡಿಡಿಪಿಐ ಅವರು ಈ ಬಗ್ಗೆ ನಿಗಾವಹಿಸಬೇಕು ಎಂದು ಸಚಿವರು ಅಲ್ಲಿಯೇ ನಿರ್ದೇಶನ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.