ADVERTISEMENT

ಕನ್ನಡ ವಿರೋಧಿ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹ

ಜಿಲ್ಲಾ ಕಂದಾಯ ಭವನದ ಮುಂದೆ ಕಸಾಪ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 9:24 IST
Last Updated 13 ಡಿಸೆಂಬರ್ 2013, 9:24 IST

ರಾಮನಗರ:  ಕನ್ನಡ ವಿರೋಧಿ ಮತ್ತು ಅಖಂಡ ಕರ್ನಾಟಕ ವಿರೋಧಿ ಧೋರಣೆ ಹೊಂದಿರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸದಸ್ಯರು ಗುರುವಾರ ಜಿಲ್ಲಾ ಕಂದಾಯ ಭವನದ ಮುಂದೆ ಪ್ರತಿಭಟನೆ ನಡೆಸಿದರು.

ಬೆಳಗಾವಿಯಲ್ಲಿ ಜರುಗಿದ ಕಳೆದ ವಿಧಾನಸಭಾ ಅಧಿವೇಶನದಲ್ಲಿ ಕನ್ನಡ ಭಾಷೆ ಮತ್ತು ರಾಜ್ಯ ಸರ್ಕಾರದ ಬಗ್ಗೆ ಅಸಂಬದ್ಧವಾಗಿ ಮಾತನಾಡಿದ ಶಾಸಕ ಸಂಭಾಜಿ ಪಾಟೀಲ ಅವರ ಧೋರಣೆ ಖಂಡನೀಯ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಿಗರಿಂದ ಆಯ್ಕೆಯಾಗಿ ಶಾಸಕರಾಗಿ, ಸಚಿವರಾಗಿಯೂ ಸೇವೆ ಸಲ್ಲಿಸಿರುವ ಉಮೇಶ್‌ ಕತ್ತಿ ಅವರು ಅಖಂಡ ಕರ್ನಾಟಕ ವಿಭಜಿಸುವ ನಿಟ್ಟಿನಲ್ಲಿ ಮಾತುಗಳನ್ನಾಡುತ್ತಿರುವುದು ಸೂಕ್ತವಲ್ಲ. ಉತ್ತರ ಕರ್ನಾಟಕದ ಶಾಸಕರಾಗಿರುವ ಅವರು ಅಲ್ಲಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸದೆ, ಇದೀಗ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸಿ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ ಎಂದು ಅವರು ದೂರಿದರು.

ಭಾಷಾವಾರು ಪ್ರಾಂತ್ಯ ವಿಂಗಡಣೆಯ ನಂತರ ಅಖಂಡ ಕರ್ನಾಟಕ ಪರಿಕಲ್ಪನೆಯಲ್ಲಿ ರಾಜ್ಯವನ್ನು ಮುನ್ನಡೆಸಿದ ಸರ್ಕಾರಗಳು, ಅಖಂಡತೆಗೆ ಶ್ರಮಿಸಿದ ಮತ್ತು ಶ್ರಮಿಸುತ್ತಿರುವ ಹಲವು ರಾಜಕಾರಣಿಗಳು, ಸಾಹಿತಿಗಳು, ಬುದ್ಧಿಜೀವಿಗಳು, ಚಿಂತಕರು ಇದ್ದಾರೆ. ಆದರೆ ಇವರಿಗೆ ವ್ಯತಿರಿಕ್ತ ಎಂಬಂತೆ ಉಮೇಶ್‌ ಕತ್ತಿ ಅವರು ಪ್ರತ್ಯೇಕತೆಯ ಧ್ವನಿಯೆತ್ತಿ ಕನ್ನಡಿಗರಿಗೆ ವಂಚಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಇಬ್ಬರು ಶಾಸಕರ ವರ್ತನೆಯನ್ನು ಕಸಾಪ ತೀವ್ರವಾಗಿ ವಿರೋಧಿಸುತ್ತದೆ ಎಂದ ಅವರು,  ಸಾಂವಿಧಾನಿಕ ವ್ಯವಸ್ಥೆಯಡಿ ಇಬ್ಬರೂ ಶಾಸಕರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು. ಜಿಲ್ಲಾಧಿಕಾರಿಯ ಕಚೇರಿ ಸಹಾಯಕರಾದ ರಮೇಶ್‌ ಅವರು ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು.

ಚನ್ನಪಟ್ಟಣ ಕಸಾಪ ಅಧ್ಯಕ್ಷ ಶಿವಮಾದು, ಪದಾಧಿಕಾರಿಗಳಾದ ಸಿ.ರಾಜಶೇಖರ್‌, ಶಿವಸ್ವಾಮಿ, ಮಹೇಶ್‌, ಕನಕಪುರ ಕಸಾಪ ಅಧ್ಯಕ್ಷ ಶಿವಲಿಂಗಯ್ಯ, ಬೇವೂರು ಯೋಗೇಶ್‌, ಚೌ.ಪು.ಸ್ವಾಮಿ, ಲಕ್ಷ್ಮಣ ಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.