ADVERTISEMENT

ಕಳ್ಳರಿಂದ ಪೊಲೀಸರ ಮೇಲೆ ಗುಂಡಿನ ದಾಳಿ

ರಾಮನಗರದಲ್ಲಿ ಜ್ಯುವೆಲರ್ಸ್‌ಗೆ ಕನ್ನಹಾಕಿ ಡಕಾಯಿತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2016, 9:53 IST
Last Updated 19 ಆಗಸ್ಟ್ 2016, 9:53 IST
ಡಕಾಯಿತಿ ಯತ್ನ ನಡೆದ ಎಸ್‌.ಬಿ. ಜ್ಯುವೆಲರ್ಸ್‌ ಕಟ್ಟಡದ ಹಿಂಭಾಗದ ದೃಶ್ಯ
ಡಕಾಯಿತಿ ಯತ್ನ ನಡೆದ ಎಸ್‌.ಬಿ. ಜ್ಯುವೆಲರ್ಸ್‌ ಕಟ್ಟಡದ ಹಿಂಭಾಗದ ದೃಶ್ಯ   

ರಾಮನಗರ: ನಗರದ ಎಂ.ಜಿ. ರಸ್ತೆಯಲ್ಲಿರುವ ಆಭರಣ ಮಳಿಗೆಯಲ್ಲಿ ಡಕಾಯಿತಿಗೆ ಯತ್ನಿಸಿದ ಕಳ್ಳರ ಗುಂಪೊಂದು ತಮ್ಮನ್ನು ಸೆರೆ ಹಿಡಿಯಲು ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಬಂದೂಕಿನಿಂದ ಗುಂಡು ಹಾರಿಸಿ ಪರಾರಿಯಾದ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಶಂಕಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಸ್‌.ಬಿ. ಜ್ಯುವೆಲರ್ಸ್‌ ಕಟ್ಟಡದ ಹಿಂಭಾಗದಲ್ಲಿ ಗುರುವಾರ ನಸುಕಿನ 1.30–2 ಗಂಟೆ ಸುಮಾರಿಗೆ ಸುಮಾರು 6–7 ಡಕಾಯಿತರು ಕನ್ನ ಕೊರೆಯಲು ಆರಂಭಿಸಿದ್ದಾರೆ.

ಇದರಿಂದ ಸದ್ದಾದಾಗ ಹತ್ತಿರದಲ್ಲಿಯೇ ಇದ್ದ ಬೀಟ್‌ ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್‌ ಬೆಟ್ಟಸ್ವಾಮಿ ಎಂಬುವರು ಸ್ಥಳಕ್ಕೆ ಧಾವಿಸಿದ್ದು, ಅವರು ಮೊಬೈಲ್ ಕರೆಯ ಮೂಲಕ ಸಹೋದ್ಯೋಗಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಕಾನ್‌ಸ್ಟೇಬಲ್‌ ಗೌರಿಶಂಕರ್‌ ಹಾಗೂ ಹೋಮ್‌ಗಾರ್ಡ್‌ ನರಸಿಂಹಮೂರ್ತಿ ಎಂಬುವರು ಧಾವಿಸಿದ್ದು, ಡಕಾಯಿತರನ್ನು ಹಿಡಿಯಲು ಮುಂದಾಗಿದ್ದಾರೆ.

ಈ ಸಂದರ್ಭ ಅವರು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದು, ತಮ್ಮ ಬಳಿ ಇದ್ದ ಬಂದೂಕಿನಿಂದ ಎರಡು ಗುಂಡು ಹಾರಿಸಿದ್ದಾರೆ. ಬಳಿಕ ಪೊಲೀಸರಿಗೆ ಬಂದೂಕು ತೋರಿಸಿ ಹೆದರಿಸುತ್ತಲೇ ಅಲ್ಲಿಂದ ಓಡಿಹೋಗಿದ್ದಾರೆ. ಈ ಸಂದರ್ಭ ನರಸಿಂಹಮೂರ್ತಿ ಅವರ ಕೈಗೆ ಗಾಯವಾಗಿದೆ.

ಬೆನ್ನುಹತ್ತಿದ ಜನರು: ಸದ್ದು ಕೇಳಿ ಸ್ಥಳಕ್ಕೆ ನೂರಾರು ಸಾರ್ವಜನಿಕರೂ ಬಂದಿದ್ದು, ದೊಣ್ಣೆಗಳನ್ನು ಹಿಡಿದು ಪೊಲೀಸರೊಂದಿಗೆ ಸೇರಿಕೊಂಡು ಡಕಾಯಿತರ ಬೆನ್ನು ಹತ್ತಿದ್ದಾರೆ. ಆದರೆ ಕತ್ತಲಲ್ಲಿ ಕಳ್ಳರು ಪರಾರಿಯಾಗಿದ್ದಾರೆ. ಟಿಪ್ಪುನಗರದ ಬಳಿ ಶಂಕಿತ ಆರೋಪಿಯೊಬ್ಬನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಡಕಾಯಿತರ ಗುಂಪಿನಲ್ಲಿದ್ದವರ ಪೈಕಿ ಬಹುತೇಕರು ಯುವಕರಾಗಿದ್ದಾರೆ. ಆರೋಪಿಗಳು  ಉತ್ತರ ಭಾರತ ಮೂಲದವರು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ 2 ಬುಲೆಟ್ ಹಾಗೂ 3 ಕಾಟ್ರಿಜ್‌ಗಳು ಪತ್ತೆಯಾಗಿವೆ ಎನ್ನಲಾಗಿದೆ.

ನಾಲ್ಕು ತಂಡ ರಚನೆ:  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಗುಪ್ತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‘ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ತನಿಖೆಗಾಗಿ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರ ಪತ್ತೆ ಮಾಡಲಾಗುವುದು’ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.

ಕಳ್ಳರ ಯತ್ನ ವಿಫಲಗೊಳಿಸಿ ಅವರಲ್ಲಿ ಒಬ್ಬನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಸಿಬ್ಬಂದಿಯನ್ನು ಅವರು ಅಭಿನಂದಿಸಿದರು.

ನಿಯೋಜಿತ ಕೃತ್ಯ?: ಡಕಾಯಿತಿಗೆ ಯತ್ನಿಸಿದ ಕಟ್ಟಡಕ್ಕೆ ಹೊಂದಿಕೊಂಡಂತೆ ಮತ್ತೊಂದು ಕಟ್ಟಡ ನಿರ್ಮಾಣ ಕಾಮಗಾರಿಯು ನಡೆಯುತ್ತಿದೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿರುವ ಆರೋಪಿಗಳು ಸದ್ದಾದರೂ ತಿಳಿಯುವುದಿಲ್ಲ ಎಂಬ ಕಾರಣಕ್ಕೆ ಹಿಂಬದಿಯಿಂದ ಕನ್ನ ಕೊರೆಯಲು ಮುಂದಾಗಿದ್ದರು ಎಂದು ವಿಶ್ಲೇಷಿಸಲಾಗಿದೆ. ಆದರೆ ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಕಳವು ತಪ್ಪಿದೆ.

***
ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚಿಸಲಾಗಿದ್ದು, ಕೆಲವು ಮಹತ್ವದ ಸುಳಿವು ದೊರೆತಿದ್ದು ಶೀಘ್ರವೇ ಅವರನ್ನು ಬಂಧಿಸಲಾಗುವುದು
-ಚಂದ್ರಗುಪ್ತ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

***
ರಾತ್ರಿ ಎಂದಿನಂತೆ ಮಳಿಗೆ ಬಾಗಿಲು ಹಾಕಿ ಮನೆಗೆ ತೆರಳಿದ್ದೆ. ಪೊಲೀಸರು ಸ್ಥಳಕ್ಕೆ ಬಂದಾಗಲೇ  ಇಲ್ಲಿ ಡಕಾಯಿತಿಗೆ ಯತ್ನ ನಡೆದಿರುವುದು ತಿಳಿಯಿತು
-ಶ್ರೀಚಂದ್‌ ಜೈನ್‌, ಎಸ್‌.ಬಿ. ಜ್ಯುವೆಲರ್ಸ್‌ ಮಾಲೀಕ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.