ADVERTISEMENT

ಕೆರೆಕಟ್ಟೆಗಳ ನಾಡಲ್ಲಿ ಕುಡಿವ ನೀರಿಗೆ ಬರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST
ಕೆರೆಕಟ್ಟೆಗಳ ನಾಡಲ್ಲಿ ಕುಡಿವ ನೀರಿಗೆ ಬರ
ಕೆರೆಕಟ್ಟೆಗಳ ನಾಡಲ್ಲಿ ಕುಡಿವ ನೀರಿಗೆ ಬರ   

ಮಾಗಡಿ: ತಾಲ್ಲೂಕಿನಲ್ಲಿ ಚಾಮರಾಜ ಸಾಗರದ ಮಂಚನಬೆಲೆ ಜಲಾಶಯ, ಎತ್ತಿನ ಮನೆ ಗುಲಗಂಜಿ ಗುಡ್ಡದ ಜಲಾಶಯ ಸೇರಿದಂತೆ 119 ಕೆರೆಗಳು ನೀರಿನ ಮೂಲವಾಗಿ ಇದ್ದರೂ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ತಲೆದೋರಿದೆ.

ತಿಪ್ಪಸಂದ್ರ ಹೋಬಳಿಯ ಚಿಕ್ಕಳ್ಳಿ, ವಿರುಪಾಪುರ, ಹಳೆಲಾಯ ಸೇರಿದಂತೆ ವಿವಿಧ ಹಳ್ಳಿಗಳ ಜನರು ಕುಡಿಯುವ ನೀರಿಗಾಗಿ ಸಮೀಪದ ತೋಟಗಳಲ್ಲಿರುವ ಖಾಸಗಿ ಕೊಳವೆ ಬಾವಿಗಳನ್ನು ಅವಲಂಬಿಸಬೇಕಿದೆ. ನೀರಿನ ಸಮಸ್ಯೆಯ ಜತೆಗೆ ವಿದ್ಯುತ್ತಿನ ಕೊರತೆಯೂ ನಾಗರಿಕರನ್ನು ಹೈರಾಣಾಗಿಸಿದೆ. ಳೆದ 20 ವರ್ಷಗಳಲ್ಲಿಯೇ ಅಧಿಕ ಎನ್ನಬಹುದಾದ ಉಷ್ಣಾಂಶ ಮಾರ್ಚ್ ತಿಂಗಳಿನಲ್ಲಿ ದಾಖಲಾಗಿರುವುದು ವಿಶೇಷ.

ಕಣ್ಣೂರು ಕಾಲೊನಿಯಲ್ಲಿ ಎರಡು ತಿಂಗಳಿನಿಂದ ಕುಡಿಯುವ ನೀರಿಗೆ ಪರದಾಟ ಕಂಡುಬರುತ್ತಿದೆ. ಕೆಲವು ಗ್ರಾಮಗಳಲ್ಲಿ ಪಂಚಾಯಿತಿ ವತಿಯಿಂದ ಕೊರೆಸಲಾಗಿದ್ದ ಕೊಳವೆಬಾವಿಗಳು ಕೆಟ್ಟು ಹೋಗಿವೆ. ಕಿರುನೀರು ಸರಬರಾಜು ಟ್ಯಾಂಕುಗಳನ್ನು ಕಟ್ಟಿಸಿದ್ದರೂ ಅವಕ್ಕೆ ಕೊಳವೆಬಾವಿಗಳ ಸೂಕ್ತ ಸಂಪರ್ಕ ಕಲ್ಪಿಸಲಾಗಿಲ್ಲ.

ಕುದೂರು ಹೋಬಳಿಯ ಚಿಕ್ಕಮಸ್ಕಲ್, ದೊಳ್ಳೆನಹಳ್ಳಿ, ಚೌಡಿಬೇಗೂರು, ಲಕ್ಕಯ್ಯನ ಪಾಳ್ಯ, ಬೆಟ್ಟಹಳ್ಳಿ ಕಾಲೊನಿ, ಹದರಂಗಿ, ಕುತ್ತಿನಗೆರೆ ಮತ್ತಿತರ ಹಳ್ಳಿಗಳಲ್ಲಿ ಹದಿನೈದು ದಿನ ಕಳೆದರು ಗ್ರಾಮ ಪಂಚಾಯ್ತಿಯವರು ನೀರು ಹರಿಸುತ್ತಿಲ್ಲ.

ಸೋಲೂರು ಹೋಬಳಿಯ ಬಾಣವಾಡಿ, ಬಿಟ್ಸಂದ್ರ, ವೀರಾಪುರ, ಕನ್ನಸಂದ್ರ ಕಾಲೊನಿ, ಎಣ್ಣಿಗೆರೆ, ಪಣಕನಕಲ್ಲು, ಕಲ್ಲೆಂಟೆಪಾಳ್ಯ, ತಿಮ್ಮಸಂದ್ರ, ಎರೆಪಾಳ್ಯ, ಅಡಕಮಾರನ ಹಳ್ಳಿ, ದೊಡ್ಡಮಸ್ಕಲ್, ಪೋಲೊಹಳ್ಳಿ, ಅಜ್ಜನಹಳ್ಳಿ, ಜೇನುಕಲ್ಲು ಪಾಳ್ಯದ ಸೋಲಿಗರ ಕಾಲೊನಿ, ಸಿದ್ದೇದೇವರ ಬೆಟ್ಟದ ಕಾಲೊನಿ, ಜೋಡುಗಟ್ಟೆ ಇರುಳಿಗರ ಕಾಲೊನಿ, ಕಲ್ಲುದೇವನ ಹಳ್ಳಿಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. 

`ಟ್ಯಾಂಕರ್ ಮೂಲಕ ನೀರು ಪೂರೈಸುತ್ತೇವೆ~
ಮಂಚನಬೆಲೆ ಜಲಾಶಯದಿಂದ ಸಿಗೇಕುಪ್ಪೆ, ಅಗಲಕೋಟೆ, ಮತ್ತೀಕೆರೆ ಗ್ರಾಮ ಪಂಚಾಯಿತಿ ಗ್ರಾಮಗಳಿಗೆ ಕೊಳವೆ ಮಾರ್ಗದ ಮೂಲಕ ನೀರು ಸರಬರಾಜು ಮಾಡಲು ನಡೆದಿರುವ ಕಾಮಗಾರಿ ಅಣ್ಣೇಕಾರನ ಹಳ್ಳಿಯವರೆಗೆ ಸಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಕೃಷ್ಣೇಗೌಡ ಪ್ರತಿಕ್ರಿಯಿಸಿದ್ದಾರೆ. `ಬೇಸಿಗೆಯಲ್ಲಿ ವಾಡಿಕೆಯಂತೆ ನೀರಿನ ಸಮಸ್ಯೆ ಇದ್ದರೂ ಆದಷ್ಟು ನೀರಿನ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಪಂಚಾಯತಿಗೆ ಕೋರಲಾಗಿದೆ. ಕೊಳವೆ ಬಾವಿಗಳನ್ನು ದುರಸ್ತಿ ಪಡಿಸಲಾಗುತ್ತಿದೆ. 

ನೀರಿನ ಸಮಸ್ಯೆ ಹೆಚ್ಚಿರುವ ಕಡೆಗಳಲ್ಲಿ ಟ್ಯಾಂಕರುಗಳ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುವುದು~ ಎನ್ನುತ್ತಾರೆ.

`ತಾಲ್ಲೂಕಿನಲ್ಲಿರುವ ಅರೆ ಅಲೆಮಾರಿ ಬುಡಕಟ್ಟು ಜನಾಂಗಗಳು ವಾಸಿಸುವ ಕಾಲೊನಿಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಪಶುಗಳಿಗೆ ನೀರು ಕುಡಿಯಲು ನೀರಿನ ತೊಟ್ಟಿಗಳನ್ನು ಕಟ್ಟಿಸಲಾಗುವುದು~ ಎಂದು ಹೇಳುತ್ತಾರೆ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.