ADVERTISEMENT

ಗೋದಾಮಿಗೆ ಭೇಟಿ; ಆಹಾರ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ಚನ್ನಪಟ್ಟಣ: ತಾಲ್ಲೂಕಿನ ಅಕ್ಷರ ದಾಸೋಹಕ್ಕೆ ಕಳಪೆ  ಆಹಾರ ಸಾಮಗ್ರಿಗಳು ಪೂರೈಕೆಯಾಗುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಮಲ್ಲಿಕಾರ್ಜುನಗೌಡ ಶನಿವಾರ ಸಂಜೆ ಸಾತನೂರು ಸರ್ಕಲ್‌ನಲ್ಲಿರುವ ಆಹಾರ ನಿಗಮದ ಗೋದಾಮಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

 ಅಧ್ಯಕ್ಷರ ಭೇಟಿಯ ಸಮಯದಲ್ಲಿ ಗೋದಾಮಿನಲ್ಲಿರುವ ಸಾಕಷ್ಟು ನ್ಯೂನತೆಗಳು ಬೆಳಕಿಗೆ ಬಂದವು. ಗೋದಾಮಿನ ಅಧಿಕಾರಿಗಳು ಟೆಂಡರ್‌ನಲ್ಲಿರುವಂತೆ ಗುಣಮಟ್ಟದ ಬೇಳೆ ಮತ್ತು ಎಣ್ಣೆಯನ್ನು ಪೂರೈಸದೇ, ಕಳಪೆ ಪದಾರ್ಥಗಳನ್ನು ಸರಬರಾಜು ಮಾಡುತ್ತಿರುವ ಕುರಿತು ಎಂದು ಜಿ.ಪಂ. ಅಧ್ಯಕ್ಷರು ನಿಗಮದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. `ಮಕ್ಕಳು ತಿನ್ನುವ ಆಹಾರದ ಬಗ್ಗೆ ನಿಮಗೆ ಕಾಳಜಿ ಇಲ್ಲವೇ~ ಎಂದು ಪ್ರಶ್ನಿಸಿದ ಅವರು, ನಿಮಗೆ ಮಕ್ಕಳ ಆರೋಗ್ಯದ ಬಗ್ಗೆ ಕನಿಷ್ಠ ಪರಿಜ್ಞಾನವೂ ಇಲ್ಲ~ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

 ಜೂನ್ ತಿಂಗಳಲ್ಲಿ ದಾಸ್ತಾನಾದ ಬೇಳೆಯನ್ನೇ ಇದುವರೆಗೂ ವಿತರಿಸುತ್ತಿದ್ದು, ಇವೆಲ್ಲ ಹುಳು ಹಿಡಿದಿದೆ. ಇದರಿಂದಾಗಿ ಬಹುತೇಕ ಶಾಲೆಗಳಲ್ಲಿ ಅಕ್ಷರದಾಸೋಹ ಯೋಜನೆ ನೆನೆಗುದಿಗೆ ಬಿದ್ದಿದೆ. ಕೂಡಲೇ ಈ ಬೇಳೆಯನ್ನು ಹಿಂದಕ್ಕೆ ಕಳುಹಿಸಿ ಎಂದು ಸೂಚಿಸಿದರು. ಇದಕ್ಕೆ `ಒಮ್ಮೆ ದಾಸ್ತಾನಾದ ಬೇಳೆಯನ್ನು ಹಂಚಿಕೆ ಮಾಡಬೇಕು. ಹಂಚಿಕೆ ಮಾಡದೆ ಹಿಂದಕ್ಕೆ ಕಳುಹಿಸಿದರೆ ನನ್ನ ಸಂಬಳ ಕಟ್ ಮಾಡುತ್ತಾರೆ~ ಎಂದು ಪ್ರತಿಕ್ರಿಯಿಸಿದರು. ಇದರಿಂದ ಕುಪಿತಗೊಂಡ ಅಧ್ಯಕ್ಷರು ಈ ಬಗ್ಗೆ ಸರಕಾರಕ್ಕೆ ವರದಿ ಬರೆಯುವುದಾಗಿ  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.