ADVERTISEMENT

ಚನ್ನಪಟ್ಟಣದಲ್ಲೇ ಸ್ಪರ್ಧಿಸಲು ಎಚ್‌ಡಿಕೆಗೆ ಯೋಗೇಶ್ವರ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 10:46 IST
Last Updated 6 ಏಪ್ರಿಲ್ 2018, 10:46 IST

ರಾಮನಗರ: ‘ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದಲೇ ಸ್ಪರ್ಧಿಸಬೇಕು’ ಎಂದು ಶಾಸಕ ಸಿ.ಪಿ.ಯೋಗೇಶ್ವರ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಎರಡೆರಡು ಕಡೆ ಸ್ಪರ್ಧೆಯಿಂದ ಹಣ, ಸಮಯ ಎರಡೂ ಪೋಲು. ಹೀಗಾಗಿ, ರಾಮನಗರದಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬನನ್ನು ಸ್ಪರ್ಧೆಗೆ ನಿಲ್ಲಿಸಿ, ಚನ್ನಪಟ್ಟಣದಿಂದ ಮಾತ್ರ ಅವರು ಕಣಕ್ಕೆ ಇಳಿಯಲಿ. ನಾನೂ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಗೆದ್ದು ತೋರಿಸುತ್ತೇನೆ. ಇಲ್ಲವೇ ಅವರಿಗೆ ತಾಕತ್ತಿದ್ದಲ್ಲಿ ಕನಕಪುರಕ್ಕೆ ಹೋಗಿ ನಿಲ್ಲಲಿ’ ಎಂದು ಸವಾಲು ಹಾಕಿದರು.‘ಚನ್ನಪಟ್ಟಣದಲ್ಲಿಯೂ ನಾಲ್ಕೈದು ಮಂದಿ ಹೆಸರಲ್ಲಿ ಅವರು ಬೇನಾಮಿ ಆಸ್ತಿ ಹೊಂದಿದ್ದಾರೆ. ಮಲೇಷ್ಯಾ, ಸಿಂಗಪುರದಲ್ಲಿಯೂ ಆಸ್ತಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ಅತಿಥಿ ಉಪನ್ಯಾಸಕ: ‘ಕುಮಾರಸ್ವಾಮಿ ರಾಮನಗರಕ್ಕೆ ಬಂದು ಹೋಗುವ ಅತಿಥಿ ಉಪನ್ಯಾಸಕ. ಆ ಕ್ಷೇತ್ರ ಅವರ ಗುಲಾಮಗಿರಿಗೆ ಒಳಪಟ್ಟು ದಶಕವೇ ಕಳೆದಿದೆ. ಆಗಾಗ್ಗೆ ಕಣ್ಣೀರು ಸುರಿಸುತ್ತಾ, ಜನರನ್ನು ಮಾನಸಿಕವಾಗಿ ಬೆದರಿಸುವ ತಂತ್ರಗಾರಿಕೆ ನಡೆಸಿದ್ದಾರೆ’ ಎಂದು ದೂರಿದರು.

ADVERTISEMENT

‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಇಲ್ಲಿನ ನೀರಾವರಿ ಯೋಜನೆ ಬಗ್ಗೆ ಸುಳ್ಳು ಹೇಳುವುದು ಶೋಭೆ ತರುವ ವಿಚಾರವಲ್ಲ. ಒಕ್ಕಲಿಗ ಸಮುದಾಯದ ಬೇರೆಯವರು ತಮ್ಮ ಸಮನಾಗಿ ಬೆಳೆಯುವುದು ಅವರಿಗೆ ಇಷ್ಟವಿಲ್ಲ. ಈಗಾಗಲೇ 15–20 ಪ್ರಭಾವಿ ಒಕ್ಕಲಿಗ ಮುಖಂಡರ ಕಥೆ ಮುಗಿಸಿದ್ದಾರೆ. ಮೈಸೂರು ಭಾಗದಲ್ಲಿ ನನ್ನ ಏಳಿಗೆ ಸಹಿಸದೆ ನನ್ನನ್ನು ಕಟ್ಟಿಹಾಕುವ ತಂತ್ರ ಮಾಡುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.