ADVERTISEMENT

`ಚುನಾವಣೆ ಎಂದರೆ ಪುಂಡರ ಸಂತೆಯಲ್ಲ'

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 13:49 IST
Last Updated 17 ಏಪ್ರಿಲ್ 2013, 13:49 IST

ರಾಮನಗರ: `ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಎಚ್.ಎಂ.ಕೃಷ್ಣಮೂರ್ತಿ ಅವರು ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಜೆಡಿಎಸ್‌ಗೆ ಲಾಭ ತರುವ ವಿಷಯವೇನೂ ಅಲ್ಲ. ಚುನಾವಣೆ ಎಂಬುದು ಪುಂಡರ ಸಂತೆಯಲ್ಲ. ಇಲ್ಲಿ ಯಾರು ಉತ್ತಮರು ಎಂಬುದನ್ನು ಜನ ಸರಿಯಾಗಿಯೇ ತೀರ್ಮಾನಿಸಲಿದ್ದು, ಉತ್ತಮರನ್ನು ಮಾತ್ರ ಆಯ್ಕೆ ಮಾಡುತ್ತಾರೆ' ಎಂದು ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.

ತಾಲ್ಲೂಕಿನ ದೊಡ್ಡಗಂಗವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ಚುನಾವಣಾ ಪ್ರಚಾರ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕೃಷ್ಣಮೂರ್ತಿ ಸ್ಪರ್ಧೆಗೆ ಇಳಿದಿರುವುದರಿಂದ ಜೆಡಿಎಸ್ ಗೆಲುವಿಗಾಗಿ ಹೋರಾಟ ನಡೆಸಬೇಕಾದ ಅಗತ್ಯವಿದೆ' ಎಂದು ಹೇಳಿದರು.

ಕೃಷ್ಣಮೂರ್ತಿ ಅವರು ಕಾಂಗ್ರೆಸ್ ಪಕ್ಷದಿಂದ ಬೇಸತ್ತು ಕೆಜೆಪಿ ಸೇರಿದ್ದಾರೆ. ಇದರಿಂದ ಪೂರ್ಣ ಪ್ರಮಾಣದಲ್ಲಿ ಜೆಡಿಎಸ್‌ಗೆ ಲಾಭವಾಗಲಿದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮಾಗಡಿ ಪಟ್ಟಣ, ತಿಪ್ಪಸಂದ್ರ ಹೋಬಳಿ, ಕುದೂರು ಹೋಬಳಿ ವ್ಯಾಪ್ತಿಯಲ್ಲಿ ಅವರು ಜೆಡಿಎಸ್‌ಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ. ಅಲ್ಲದೆ ಬಿಡದಿ ಮತ್ತು ಕೂಟಗಲ್ ಹೋಬಳಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜುನಾಥ್ ಪೈಪೋಟಿ ನೀಡುತ್ತಿದ್ದಾರೆ. ಇದರಿಂದಾಗಿ ಜೆಡಿಎಸ್ ಎರಡು ಪಕ್ಷಗಳ ವಿರುದ್ಧ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ತಾಯಿಯನ್ನೇ ಮರೆತವರು:
`ವೈಯುಕ್ತಿಕ ಬದುಕಿನಲ್ಲಿ ಯಶಸ್ಸು ಸಾಧಿಸದ ಯಾವ ವ್ಯಕ್ತಿಯೂ ಸಮಾಜ ಸೇವೆ ಮಾಡಲು ಯೋಗ್ಯರಲ್ಲ. ಇಂತವರನ್ನು ಜನರು ಯಾವುದೇ ಕಾರಣಕ್ಕೂ ಆಯ್ಕೆ ಮಾಡುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಎ.ಮಂಜುನಾಥ್ ತಮ್ಮ ತಾಯಿಯನ್ನು ಎಷ್ಟರ ಮಟ್ಟಿಗೆ ನೋಡಿಕೊಳ್ಳುತ್ತಿದ್ದಾರೆ ಎಂಬುದನ್ನು ಜನರು ಪ್ರಶ್ನಿಸುವಂತಾಗಿದೆ. ಇಂತಹವರು ತಮ್ಮ ಕ್ಷೇತ್ರಕ್ಕೆ ಯಾವ ರೀತಿಯಲ್ಲಿ ಮಾದರಿಯಾಗಲು ಸಾಧ್ಯ. ಅಲ್ಲದೆ ಇಂತಹವರಿಂದ ಎಂತಹ ಅಭಿವೃದ್ಧಿಯನ್ನು ಜನ ನಿರೀಕ್ಷಿಸಬಹುದು' ಎಂದು ಅವರು ವ್ಯಂಗ್ಯವಾಡಿದರು.

ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಹಿಂದಿನಿಂದಲೂ ಕಡೆಗಣಿಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷ ಇಂದಿಗೂ ತನ್ನ ಚಾಳಿಯನ್ನು ಮುಂದುವರೆಸಿದೆ. ಯಾದವ ಜನಾಂಗದ ನಾಯಕ ಎ.ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡದೆ ಮೋಸ ಮಾಡಿದೆ. ಇದೀಗ ಇವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಪಕ್ಷದ ಶಕ್ತಿಯನ್ನು ಹೆಚ್ಚಿಸಿದೆ. ಇದರಿಂದ ಜಾತ್ಯತೀತ ನಿಲುವಿನ ಪಕ್ಷಕ್ಕೆ ಮೊತ್ತೊಂದು ಗರಿ ಸೇರಿದಂತಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರೆ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದ ಅವರು, ಇಂದಿಗೂ ನಾನು ಮಾಗಡಿಯಲ್ಲಿ ಕಾಂಗ್ರೆಸ್ ಪಕ್ಷದ ರೇವಣ್ಣ ವಿರುದ್ಧ ಸೆಣೆಸುತ್ತಿದ್ದೇನೆಯೇ ವಿನಃ ನಿನ್ನೆ ಮೊನ್ನೆ ಬಂದ ನಾಯಕರ ವಿರುದ್ಧವಲ್ಲ ಎಂದರು.

ಮಾಗಡಿ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಉತ್ತಮ ಕೆಲಸಗಳನ್ನು ಮಾಡಿರುವ ಎಚ್.ಎಂ.ರೇವಣ್ಣ ಅವರು ಇಂದಿಗೂ ಉತ್ತಮ ಜನ ನಾಯಕರಾಗಿ ಉಳಿದುಕೊಂಡಿದ್ದಾರೆ. ಇಂತವಹರು ಪಕ್ಷಕ್ಕೆ ಸೇರುವುದರಿಂದ ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸುಲಭವಾಗುವುದರ ಜತೆಗೆ ರಾಜ್ಯದಲ್ಲಿಯೂ ಅವರ ಸಮುದಾಯದ ಮತಗಳು ಜೆಡಿಎಸ್ ಕಡೆಗೆ ಹೆಚ್ಚು ಬರಲಿವೆ ಎಂದು ಅವರು ಪ್ರತಿಕ್ರಿಯಿಸಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಹಿರಿಯ ಕಾಂಗ್ರೆಸ್ ಮುಖಂಡ ಮಹದೇವಯ್ಯ ಅವರನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಬರ ಮಾಡಿಕೊಂಡರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಮಿತ್ರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಚ್.ಶಿವಪ್ರಸಾದ್, ವಿ. ವೆಂಕಟರಂಗಯ್ಯ, ಜೆಡಿಎಸ್ ಮುಖಂಡರಾದ ಅಕ್ಕೂರು ಪುಟ್ಟರಾಮಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಗದೀಶ್, ಹುಣಸೆದೊಡ್ಡಿ ಸದಾ  ಉಪಸ್ಥಿತರಿದ್ದರು.

ಅಭ್ಯರ್ಥಿಯ ಆಸ್ತಿ - ಪಾಸ್ತಿ ವಿವರ
ಹೆಸರು: ಎಚ್.ಡಿ.ಕುಮಾರಸ್ವಾಮಿ
ಕ್ಷೇತ್ರ: ರಾಮನಗರ
ಪಕ್ಷ: ಜೆಡಿಎಸ್
ಸ್ಥಿರಾಸ್ತಿ: ರೂ.16.60 ಕೋಟಿ
ಚರಾಸ್ತಿ: ರೂ. 2.53 ಕೋಟಿ
ಬ್ಯಾಂಕ್ ಖಾತೆಗಳಲ್ಲಿ: ರೂ. 3.60 ಲಕ್ಷ
ಚಿನ್ನ: ರೂ. 25 ಲಕ್ಷ
ನಗದು: ರೂ. 15.79 ಲಕ್ಷ
ವಾಹನಗಳು: ಇಲ್ಲ
ಹೂಡಿಕೆ: ರೂ.1.76 ಕೋಟಿ
ಒಟ್ಟು ಆಸ್ತಿ: ರೂ. 19.13 ಕೋಟಿ
ಸಾಲ: ರೂ1 ಕೋಟಿ (ಪತ್ನಿಯಿಂದ ಪಡೆದದ್ದು)ಕ್ರಿಮಿನಲ್ ಮೊಕದ್ದಮೆಗಳು: ಇಲ್ಲ

ಅಭ್ಯರ್ಥಿಯ ಆಸ್ತಿ - ಪಾಸ್ತಿ ವಿವರ
ಹೆಸರು: ಅನಿತಾ ಕುಮಾರಸ್ವಾಮಿ
ಕ್ಷೇತ್ರ: ಚನ್ನಪಟ್ಟಣ
ಪಕ್ಷ: ಜೆಡಿಎಸ್
ಸ್ಥಿರಾಸ್ತಿ: ರೂ. 12.87 ಕೋಟಿ
ಚರಾಸ್ತಿ: ರೂ. 106 ಕೋಟಿ
ಬ್ಯಾಂಕ್ ಖಾತೆಗಳಲ್ಲಿ: ರೂ. 8.42 ಕೋಟಿ
ಚಿನ್ನ: ರೂ. 0,00,00,000.
ಬೆಳ್ಳಿ: ರೂ. 32 ಲಕ್ಷ
ವಾಹನಗಳು: ಇಲ್ಲ
ಹೂಡಿಕೆ: ರೂ. 95.59 ಕೋಟಿ
ಒಟ್ಟು ಆಸ್ತಿ: ರೂ. 119  ಕೋಟಿ
ಸಾಲ: ರೂ. 4.08 ಕೋಟಿ
ಕ್ರಿಮಿನಲ್ ಮೊಕದ್ದಮೆಗಳು: ಇಲ್ಲ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.