ADVERTISEMENT

ಜನರ ಸಮಸ್ಯೆಗೆ ಸ್ಪಂದಿಸದ ಡಿ.ಕೆ ಸುರೇಶ್‌– ಆರೋಪ

ಸುಂಡಘಟ್ಟ: ಎಚ್‌ಡಿ ಕುಮಾರಸ್ವಾಮಿ ಗ್ರಾಮ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 8:54 IST
Last Updated 10 ಜನವರಿ 2014, 8:54 IST

ಕನಕಪುರ: ‘ಸ್ಥಳೀಯ ಸಂಸದರು ಪುಕ್ಕಟೆ ಪ್ರಚಾರ ಪಡೆದುಕೊಂಡಿದ್ದಾರೆಯೇ ಹೊರತು ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ’ ಎಂದು ಶಾಸಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ತಾಲ್ಲೂಕಿನ ಸುಂಡಘಟ್ಟ ಗ್ರಾಮದಲ್ಲಿ ಗ್ರಾಮ ಪ್ರವಾಸ ನಡೆಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರು ಉತ್ಸಾಹದಿಂದ ಲೋಕಸಭಾ ಕ್ಷೇತ್ರವ್ಯಾಪ್ತಿ ಪ್ರವಾಸ ಮಾಡುತ್ತಿದ್ದಾರೆ. ಮತದಾರರ ಮನೆಗಳಿಗೆ ವಿವಿಧ ಯೋಜನೆಯಡಿ ಲಭ್ಯವಿರುವ ಸವಲತ್ತುಗಳ ಬಗ್ಗೆ ಪರಿಚಯಿಸುವ ಪತ್ರವನ್ನು ಅಂಚೆ ಮೂಲಕ ಕಳಿಸಿಕೊಟ್ಟಿದ್ದಾರೆ. ಜನರಿಗೆ ಸರ್ಕಾರಿ ಯೋಜನೆಗಳ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ.

ಆದರೆ ಸಂಸದರಾಗಿ ಅವರ ಸಹೋದರ ಸಚಿವರಾಗಿ ರಾಜ್ಯ ಮತ್ತು ಕೇಂದ್ರದಲ್ಲಿ ಅವರದೇ ಸರ್ಕಾರವಿದ್ದು, ಕ್ಷೇತ್ರದ ಜನತೆಯ ಅಭಿವೃದ್ಧಿಗೆ ಎಷ್ಟು ಕೆಲಸ ಮಾಡಿದ್ದಾರೆ ಎಂಬುದು ಮುಖ್ಯ ಎಂದು ತಿಳಿಸಿದರು.

‘ಕಾಲುಬಾಯಿ ಜ್ವರದಿಂದ ಮೃತಪಟ್ಟ ರಾಸುಗಳಿಗೆ ಇಲ್ಲಿಯವರೆಗೂ ಪರಿಹಾರ ಕೊಟ್ಟಿಲ್ಲ. ಅಲ್ಲದೆ ಹಾರೋಹಳ್ಳಿ ಹೋಬಳಿ ಅಣ್ಣೇದೊಡ್ಡಿ ಗ್ರಾಮದಲ್ಲಿ ಡೆಂಗುವಿನಿಂದ ಮೃತಪಟ್ಟ ರಾಸುಗಳಿಗೆ ಪರಿಹಾರ ನೀಡಲ್ಲ’ ಎಂದು ಕಿಡಿಕಾರಿದರು.

ಪ್ರವಾಸಃ ತಾಲ್ಲೂಕಿನ ಮರಳವಾಡಿ ಹೋಬಳಿಯ ತೋಕಸಂದ್ರ ಮತ್ತು ಚಾಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಪಕ್ಷದ ಮುಖಂಡರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶಾಸಕ ಎಚ್.ಡಿ ಕುಮಾರಸ್ವಾಮಿ ಅವರು ಗ್ರಾಮ ಪ್ರವಾಸ ನಡೆಸಿ ಸಾರ್ವಜನಿಕರಿಂದ ಕುಂದು–ಕೊರತೆಗಳನ್ನು ಆಲಿಸಿದರು.

ಸುಂಡಘಟ್ಟ ಗ್ರಾಮದಲ್ಲಿ ನಡೆಸಿದ ಗ್ರಾಮ ಸಂದರ್ಶನದ ವೇಳೆ ಅಲ್ಲಿನ ಮಹಿಳೆಯರು ಮಾತನಾಡಿ, ‘ಅರಣ್ಯ ಪ್ರದೇಶದ ಮಧ್ಯದಲ್ಲಿರುವ ತಮಗೆ ಕಾಡು ಪ್ರಾಣಿ ಮತ್ತು ಕಾಡಾನೆಗಳ ಹಾವಳಿಯಿಂದ ತೊಂದರೆಯಾಗುತ್ತಿದೆ.

ಅರಣ್ಯ ಇಲಾಖೆಯವರು ಗ್ರಾಮದ ಸುತ್ತಲೂ ತಂತಿಬೇಲಿ ನಿರ್ಮಿಸಿದಿರುವುದರಿಂದ ನಮಗೆ ರಕ್ಷಣೆಯಿಲ್ಲ ದಂತಾಗಿದೆ. ಫಸಲುಗಳನ್ನು
ಆನೆಗಳು ನಾಶ ಮಾಡಿರುವುದರಿಂದ ತೀವ್ರ ತೊಂದರೆ ಯಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

ಗ್ರಾಮದಲ್ಲಿ ಮದುವೆ ಇತರೆ ಕಾರ್ಯ ಕ್ರಮಗಳನ್ನು ಮಾಡಲು ಒಂದು ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು. ಗ್ರಾಮದ ಕೆಲವು ಬಡಜನತೆಗೆ ನಿವೇಶನವಿಲ್ಲದಿರುವದರಿಂದ ನಿವೇಶನ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಸಂಬಂಧಪಟ್ಟ ಇಲಾಖೆಯಿಂದ ಜರೂರಾಗಿ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಎರಡು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಕುಮಾರಸ್ವಾಮಿಯವರು ಭೇಟಿ ನೀಡಿ ಜನತೆಯ ಸಮಸ್ಯೆಗಳನ್ನು ಆಲಿಸಿದರು. ಪಕ್ಷದ ತಾಲ್ಲೂಕು ಅಧ್ಯಕ್ಷ ಸಿದ್ದಮರೀಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ.ರಾಜಣ್ಣ, ಮಾಜಿ ಸದಸ್ಯ ಭುಜಂಗಯ್ಯ, ತಾ.ಪಂ. ಸದಸ್ಯ ಎಚ್.ಕೆ.ಸಿದ್ದರಾಮು, ಮಾಜಿ ಸದಸ್ಯರಾದ ರಾಮಕೃಷ್ಣ, ರಾಮು, ಈರೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಬಿ.ನಾಗರಾಜು, ಮಾಜಿ ಸದಸ್ಯ ಪುಟ್ಟರಾಜು, ಮುಖಂಡರುಗಳಾದ ಬಿ.ಎಸ್. ಗೌಡ, ತಿಮ್ಮೇಗೌಡ, ಸ್ಟುಡಿಯೊಚಂದ್ರ, ಸರ್ದಾರ್, ಪಂಚಲಿಂಗೇಗೌಡ, ರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರವಾಸದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.