ADVERTISEMENT

ತಾಕತ್ತಿದ್ದರೆ ಯೋಗೇಶ್ವರ್ 2 ಕಡೆ ಸ್ಪರ್ಧಿಸಲಿ

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಹೇಳಿಕೆಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 11:04 IST
Last Updated 7 ಏಪ್ರಿಲ್ 2018, 11:04 IST
ಜೆಡಿಎಸ್ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಜೆಡಿಎಸ್ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಚನ್ನಪಟ್ಟಣ: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧಿಸಲಿ ಎಂದು ಹೇಳಲು ಯೋಗೇಶ್ವರ್ ಯಾರು ಎಂದು ಮಾಜಿ ಶಾಸಕ ಎಂ.ಸಿ.ಅಶ್ವಥ್ ಪ್ರಶ್ನಿಸಿದರು.

ಪಟ್ಟಣದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕುಮಾರಸ್ವಾಮಿ ಅವರು ಇಡೀ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಲು ಸರ್ಮರ್ಥರು. ಅವರ ಬಗ್ಗೆ ಮಾತನಾಡುವ ಹಕ್ಕು ಇವರಿಗೆ ಇಲ್ಲ. ತಾಕತ್ತಿದ್ದರೆ ಯೋಗೇಶ್ವರ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಮತಿಭ್ರಮಣೆಗೆ ಒಳಗಾದವರಂತೆ ಯೋಗೇಶ್ವರ್ ಮಾತನಾಡುತ್ತಿದ್ದಾರೆ. ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಜೆಡಿಎಸ್ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಕುಮಾರ ಪರ್ವದ ಮೂಲಕ ಸಾಬೀತು ಮಾಡಲಾಗಿದೆ. ಜೆಡಿಎಸ್ ಸಮಾವೇಶದಲ್ಲಿ ಸೇರಿದ್ದ ಸಾವಿರಾರು ಜನರನ್ನು ನೋಡಿ ಅವರು ಹತಾಶರಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ADVERTISEMENT

ಕುಮಾರಸ್ವಾಮಿ ವಿರುದ್ಧ ಅಕ್ರಮ ಆರೋಪ ಮಾಡುತ್ತಿರುವ ಯೋಗೇಶ್ವರ್ ತಮ್ಮ ಅಕ್ರಮಗಳನ್ನು ಮರೆತಿದ್ದಾರೆ. ಮೆಗಾಸಿಟಿ ಮೂಲಕ ಮಾಡಿದ ವಂಚನೆಯನ್ನು ಜನ ಮರೆತಿಲ್ಲ. ನೀರಾವರಿ ಪೈಪ್ ಲೈನ್ ಕಾಮಗಾರಿಯಲ್ಲಿ ಪಡೆದ ಕಮಿಷನ್ ವ್ಯವಹಾರ ಎಲ್ಲರಿಗೂ ಗೊತ್ತಿದೆ. ಪ್ರತಿ ಗುತ್ತಿಗೆದಾರರ ಬಳಿ ಕೆಲಸ ಆರಂಭಿಸಲು ಕಮಿಷನ್ ಪಡೆದಿರುವ ಅವರು ಅಕ್ರಮದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಜಯಮುತ್ತು ಮಾತನಾಡಿ, ಜೆಡಿಎಸ್ ಗೆ ₹30 ಕೋಟಿ ನೀಡುವ ಪ್ರಸ್ತಾವ ಬಂದಿದೆ ಎಂದು ಅಪಪ್ರಚಾರ ಆರಂಭಿಸಿದ್ದು ಯೋಗೇಶ್ವರ್. ತಮ್ಮ ಹಿಂಬಾಲಕರ ಮೂಲಕ ಜಿಲ್ಲೆಯಾದ್ಯಂತ ಅಪಪ್ರಚಾರ ಮಾಡಿಸಿದ ಅವರು, ಈಗ ಕುಮಾರಸ್ವಾಮಿ ಅವರೇ ಸ್ಪರ್ಧಿ ಎಂಬುದನ್ನು ತಿಳಿದು ಭಯಗೊಂಡಿದ್ದಾರೆ ಎಂದು ದೂರಿದರು.

‘ನೀರಾವರಿ ವಿಚಾರದಲ್ಲಿ ಪದೇ ಪದೇ ದೇವೇಗೌಡರ ಬಗ್ಗೆ ಮಾತನಾಡುವುದು ಸರಿಯಲ್ಲ. ಇಗ್ಗಲೂರು ಬ್ಯಾರೇಜ್ ಮಾಡಿದ್ದು ಯಾರು ಎಂಬುದು ತಾಲ್ಲೂಕಿನ ಜನರಿಗೆ ತಿಳಿದಿದೆ. ಯಾರೋ ಮಾಡಿದ ಯೋಜನೆ ಬಳಸಿಕೊಂಡು ಈಗ ನನ್ನದೆ ಯೋಜನೆ ಎಂದು ಬಿಂಬಿಸಿಕೊಳ್ಳುವುದು ಶಾಸಕರ ಗೌರವಕ್ಕೆ ತಕ್ಕುದಲ್ಲ. ನೀರಾವರಿ ಯೋಜನೆ ತಾವೇ ಮಾಡಿದ್ದು ಎಂಬುದನ್ನು ಸಾಬೀತು ಮಾಡಲು ಅವರ ಬಳಿ ದಾಖಲೆಗಳಿದ್ದರೆ ನೀಡಲಿ’ ಎಂದು ಸವಾಲು ಹಾಕಿದರು.

ಮುಖಂಡ ಟಿ.ಪಿ.ಪುಟ್ಟಸಿದ್ದೇಗೌಡ ಮಾತನಾಡಿ, ತಾಲ್ಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿ ಹಲವಾರು ವರ್ಷಗಳೇ ಕಳೆದಿವೆ. ಅವುಗಳ ಬಗ್ಗೆ ಗಮನ ಹರಿಸಿಲ್ಲ. ಹಾಗೆಯೇ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನ ಕಾಮಗಾರಿ ಆರಂಭಗೊಡು 15 ವರ್ಷಕ್ಕೂ ಹೆಚ್ಚು ಸಮಯ ಕಳೆದಿದ್ದರೂ ಅದರ ಬಗ್ಗೆ ಗಮನ ನೀಡಿಲ್ಲ. ಮಹದೇಶ್ವರ ದೇವಸ್ಥಾನ ಕಾಮಗಾರಿ ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿದೆ ಎಂದು ಆರೋಪಿಸಿದರು.

18 ವರ್ಷಗಳಿಂದ ಶಾಸಕರಾಗಿರುವ ಅವರು ತಾಲ್ಲೂಕಿನ ಅಭಿವೃದ್ಧಿಗೆ ನೀಡಿರುವ ಕೊಡುಗೆ ಏನು ಎಂಬುದು ಜನರಿಗೆ ತಿಳಿದಿದೆ. ಈ ಬಾರಿ ಜನರು ಕುಮಾರಸ್ವಾಮಿ ಅವರನ್ನು ಬೆಂಬಲಿಸುವುದು ಖಚಿತ. ಅವರ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್, ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್, ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ, ಮುಖಂಡರಾದ ಸಿಂಗರಾಜಪುರ ರಾಜಣ್ಣ, ಹಾಪ್ ಕಾಮ್ಸ್ ದೇವರಾಜು, ಬೋರ್ ವೆಲ್ ರಾಮಚಂದ್ರು, ನಾಗವಾರ ರಂಗಸ್ವಾಮಿ, ಎಂಜಿಕೆ ಪ್ರಕಾಶ್, ವಕೀಲ ಕುಮಾರ್, ಗುರುಕುಮಾರ್, ಭಾನುಪ್ರಸಾದ್ ಇದ್ದರು.

ರಾಜಕೀಯ ನಿವೃತ್ತಿ: ಸವಾಲು ‘ಚನ್ನಪಟ್ಟಣ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಗೆಲ್ಲದಿದ್ದರೆ ನಾವೆಲ್ಲರೂ ರಾಜಕೀಯ ನಿವೃತ್ತಿ ಪಡೆಯುತ್ತೇವೆ’ ಎಂದು ತಾಲ್ಲೂಕು ಜೆಡಿಎಸ್ ಮುಖಂಡರು ಪ್ರಕಟಿಸಿದರು.‘ಅವರ ಗೆಲುವಿಗೆ ನಾವೆಲ್ಲರೂ ಅವಿರತವಾಗಿ ದುಡಿಯುತ್ತೇವೆ. ಯೋಗೇಶ್ವರ್ ಅವರು ಕುಮಾರಸ್ವಾಮಿ ಅವರನ್ನು ಸೋಲಿಸುವುದಾಗಿ ಪ್ರಕಟಿಸಿದ್ದಾರೆ. ಒಂದು ವೇಳೆ ಯೋಗೇಶ್ವರ್ ಸೋತರೆ ರಾಜಕೀಯ ನಿವೃತ್ತಿ ಪಡೆಯುತ್ತಾರೆಯೇ’ ಎಂದು ಮಾಜಿ ಶಾಸಕ ಎಂ.ಸಿ.ಅಶ್ವಥ್ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.