ಮಾಗಡಿ: ನೀರಿನ ಪೈಪ್‌ಗಳನ್ನು ಒಡೆದು ಹಾಕಿದ ಬಗ್ಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ದೂರು ನೀಡಿದ ನಾರಾಯಣ ನಾಯ್ಕ ಮತ್ತು ಆತನ ಪತ್ನಿ ಪಾರ್ವತಿ ಬಾಯಿ ಮೇಲೆ ಗ್ರಾ.ಪಂ. ಸದಸ್ಯರಾದ ಚನ್ನುನಾಯ್ಕ, ಶಿವಮೂರ್ತಿ ಹಾಗೂ ಮತ್ತಿತರರು ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದೆ. ಚಿಕ್ಕತೊರೆ ಪಾಳ್ಯ ಲಂಬಾಣಿ ತಾಂಡ್ಯಾದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಹಲ್ಲೆ ವೇಳೆ ನಾರಾಯಣ ನಾಯ್ಕ ಅವರು ಪ್ರಜ್ಞೆ ತಪ್ಪಿದ್ದಾರೆ. ಪಾರ್ವತಿ ಬಾಯಿ ಅವರಿಗೂ ತೀವ್ರ ಗಾಯಗಳಾಗಿವೆ. ಗಾಯಾಳುಗಳು ಮಾಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾರಾಯಣ ನಾಯ್ಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಭೇಟಿ: ಘಟನೆ ಸಂಬಂಧ ಸರ್ಕಲ್ ಇನ್ಸ್‌ಪೆಕ್ಟರ್ ಎನ್.ಬಿ.ರಾಮಚಂದ್ರಪ್ಪ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಿನ್ನಮಾರಯ್ಯ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಖಂಡನೆ: ಸಮಾಜ ಸೇವಕ ನಾರಾಯಣ ನಾಯ್ಕ ದಂಪತಿಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆಯನ್ನು ತಾಲ್ಲೂಕು ಲಂಬಾಣಿ ಹಿತ ರಕ್ಷಣಾ ಸಮಿತಿ ಸಂಚಾಲಕ ಎನ್.ಮೂರ್ತಿ ನಾಯ್ಕ, ರಾಜು ನಾಯ್ಕ, ಸಮಾಜ ಸೇವಕ ಕಲ್ಕೆರೆ ಶಿವಣ್ಣ, ಮುದ್ದಮ್ಮ, ಭಾಗ್ಯಬಾಯಿ ಇತರರು ಖಂಡಿಸಿದ್ದಾರೆ. ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ: ಚಿಕ್ಕತೊರೆ ಲಂಬಾಣಿ ತಾಂಡ್ಯಾದಲ್ಲಿ ರಸ್ತೆ ಕಾಮಗಾರಿ ಮಾಡುವಾಗ ನೀರನ ಪೈಪ್ ಹೊಡೆದಿತ್ತು, ಗ್ರಾ.ಪಂ. ಸದಸ್ಯ ಚನ್ನುನಾಯ್ಕ ಸ್ಥಳಕ್ಕೆ ಬಂದಾಗ ಪಾರ್ವತಿಬಾಯಿ ಆತನನ್ನು ಕೆಟ್ಟ ಮಾತುಗಳಿಂದ ನಿಂದಿಸಿದರು. ಅವರಿಬ್ಬರ ನಡುವೆ ನಡೆದ ಗದ್ದಲವನ್ನು ಬಿಡಿಸಿದೆ. ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದು ಗ್ರಾ.ಪಂ. ಸದಸ್ಯ ಶಿವಮೂರ್ತಿ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.