ADVERTISEMENT

ದಲಿತರ ಮೇಲೆ ದೌರ್ಜನ್ಯ: ಧರಣಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ರಾಮನಗರ: ಜಿಲ್ಲೆಯಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ರಾಜ್ಯ ಆದಿಜಾಂಬವ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಶನಿವಾರ ಕಂದಾಯ ಭವನದ ಮುಂಭಾಗ ಧರಣಿ ನಡೆಸಿದರು.
ರಾಜ್ಯ ಸರ್ಕಾರ ಎಲ್ಲರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ಗರ್ಜಿಸುತ್ತಿದೆಯೇ ಹೊರತು ಆದಿ ಜಾಂಬವ ಜನಾಂಗವನ್ನು ಕಡೆಗಣಿಸುತ್ತಲೇ ಇದೆ. ದಲಿತ ವರ್ಗಗಳಿಗೆ ನಿರಂತರ ಅನ್ಯಾಯವಾಗುತ್ತಲೇ ಇದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಿಡದಿ ಹೋಬಳಿ ಹೆಜ್ಜಾಲ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ 5ರಲ್ಲಿ ಒಟು ವಿಸ್ತೀಣ 51 ಎಕರೆ ವರ್ಸ್ತೀಣದ ಪೈಕಿ 15 ಎಕರೆ ವಿಸ್ತೀರ್ಣದಲ್ಲಿ ಆಶ್ರಯ ನಿವೇಶನ ಯೋಜನೆಯಡಿಯಲ್ಲಿ ನಿವೇಶನ ರಹಿತರಿಗೆ ಉಚಿತ ನಿವೇಶನಗಳನ್ನು ನೀಡಲು ಮಂಚನಾಯ್ಕನಹಳ್ಳಿ ಗ್ರಾಮಪಂಚಾಯ್ತಿ ತಾಲ್ಲೂಕು ಪಂಚಾಯ್ತಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಅದೀಗ ಅಧಿಕಾರಿಗಳ ಖಾಸಗಿ ಬಡಾವಣೆಯಾಗಿ ಮಾರಾಟವಾಗುವ ಹುನ್ನಾರ ನಡೆಯುತ್ತಿದೆ ಎಂದು ಪ್ರತಿಭನಾಕಾರರು ದೂರಿದರು.

ಸಫಾಯಿ ಕರ್ಮಚಾರಿಗಳಾಗಿ ಹೀನ ಸ್ಥಿತಿಯಲ್ಲಿ ಜೀವಿಸುತ್ತಿರುವ ಈ ಸಮುದಾಯದ ಬಹುತೇಕ ಕುಟುಂಬಗಳಿಗೆ ಮನೆಯಿಲ್ಲ. ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯವನ್ನು ತಡೆಗಟ್ಟಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಆದಿಜಾಂಬವ ಸಂಘದ ಅಧ್ಯಕ್ಷ ಸಿ.ಸಿದ್ದರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ವಿ.ರಮೇಶ್ ಕುಮಾರ್, ಜಿಲ್ಲಾಧ್ಯಕ್ಷ ಎಚ್.ಎಚ್. ಬಸವರಾಜು ಮುಂತಾದವರು ಭಾಗವಹಿಸಿದ್ದರು. ಆದಿಜಾಂಬವ ಮಹಾ ಸಂಸ್ಥಾನದ ಷಡಕ್ಷರಿ ಮುನಿಸ್ವಾಮಿಗಳು ಹಾಜರಿದ್ದರು.

 ಕಂದಾಯ ಭವನದ ಮುಂದೆ ಪ್ರತಿಭಟನೆಗೂ ಮುನ್ನ ಪ್ರತಿಭಟನಾಕಾರರು ನಗರದ ಮಿನಿ ವಿಧಾನಸೌಧದ ಬಳಿಯಿಂದ ಕಂದಾಯ ಭವನಕ್ಕೆ ಪಾದಯಾತ್ರೆ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.