ADVERTISEMENT

ದೇಶದ ರಕ್ಷಣೆಗೆ ಸಿದ್ಧರಿರಲು ಯುವಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 4:56 IST
Last Updated 12 ಸೆಪ್ಟೆಂಬರ್ 2013, 4:56 IST

ರಾಮನಗರ: ‘ಅಗತ್ಯ ಸಂದರ್ಭಗಳಲ್ಲಿ ದೇಶವನ್ನು ರಕ್ಷಿಸಲು ಮತ್ತು ದೇಶಕ್ಕಾಗಿ ಹೋರಾಡಲು ಯುವ ಜನಾಂಗ ಸದಾ ಸಿದ್ಧರಿರಬೇಕು’ ಎಂದು ಶಿಕ್ಷಕ ಚನ್ನಬೀರಪ್ಪ ಕರೆ ನೀಡಿದರು.

ಸ್ವಾಮಿ ವಿವೇಕಾನಂದರ 150ನೇ ವರ್ಷದ ಆಚರಣೆಯ ಅಂಗವಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಜಿಲ್ಲಾ ಘಟಕದ ಬುಧವಾರ ನಗರದ ರೋಟರಿ ಆಸ್ಪತ್ರೆ ಬಳಿಯ ಸ್ವಾಮಿ ವಿವೇಕಾನಂದ ಪ್ರತಿಮೆ ಹತ್ತಿರ ಏರ್ಪಡಿಸಿದ್ದ ’ಭಾರತಕ್ಕಾಗಿ ಓಟ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದ ವಿರುದ್ಧ ಬೇರೆ ದೇಶಗಳು ನಿರಂತರವಾಗಿ ಕುತಂತ್ರ ನೀತಿ ಅನುಸರಿಸುತ್ತಿವೆ. ಆದ್ದರಿಂದ ಎಂತಹ ಕಠಿಣ ಸಂದರ್ಭ ಎದುರಾದರು ಅದನ್ನು ಸಮರ್ಥವಾಗಿ ಎದುರಿಸಲು ಯುವ ಪಡೆ ಸಜ್ಜಾಗಿರಬೇಕು’ ಎಂದು ಅವರು ತಿಳಿಸಿದರು.

ದೇಶದ ಶಕ್ತಿ ಯುವ ಜನಾಂಗ ಎಂದು ಸ್ವಾಮಿ ವಿವೇಕಾನಂದರು ಶತಮಾನದ ಹಿಂದೆಯೇ ಹೇಳಿದ್ದರು. ಅವರ ಈ ಕರೆ ಸದಾ ಸ್ಮರಣೆಯಲ್ಲಿರಲಿ ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ರೀಡಾಪಟು ಶ್ವೇತಾ ಮಾತನಾಡಿ, ‘ಯುವ ಜನಾಂಗ ಭಾರತದ ಕೀರ್ತಿ ಬೆಳೆಗಲು ಸದಾ ಮುಂದಾಗಬೇಕು. ಕ್ರೀಡಾ ಕ್ಷೇತ್ರ ಮಾತ್ರವಲ್ಲದೆ, ಎಲ್ಲಾ ಕ್ಷೇತ್ರಗಳಲ್ಲೂ ಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ಬೆಳಗಿಸಬೇಕು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆಯ ಸಮಿತಿ ಸಹ ಸಂಚಾಲಕ ಅನಿಲ್ ಬಾಬು, ನಗರಸಭೆಯ ಸದಸ್ಯ ಬಾಬು ಮಾತನಾಡಿದರು. ಎಬಿವಿಪಿ ರಾಜ್ಯ ಸಂಚಾಲಕ ಸುನಿಲ್, ರವೀಂದ್ರನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಓಟದಲ್ಲಿ ಭಾಗವಹಿಸಿದ್ದರು. ವಿವೇಕಾನಂದ ನಗರದ ಬಳಿಯಿಂದ ಐಜೂರು ವೃತ್ತ, ಮುಖ್ಯ ರಸ್ತೆ, ಹಳೇ ಬಸ್ ನಿಲ್ದಾಣ, ಎಂ.ಜಿ.ರಸ್ತೆ, ಕಾಮಣ್ಣನಗುಡಿ ವೃತ್ತದ ಮಾರ್ಗವಾಗಿ ಓಟ ನಡೆಸಿದ ವಿದ್ಯಾರ್ಥಿಗಳು ನೀರಿನ ಟ್ಯಾಂಕ್ ವೃತ್ತ (ಡಾ.ಜಯರಾಂ ರಾವ್ ವೃತ್ತ)ದಲ್ಲಿ ಓಟವನ್ನು ಕೊನೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.