ADVERTISEMENT

ನನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಮುಕ್ತಿ

ಕನಕಪುರ: ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 11:39 IST
Last Updated 2 ಮಾರ್ಚ್ 2018, 11:39 IST
ಕನಕಪುರ ನಗರದ ತಾಲ್ಲೂಕು ಕಚೇರಿ ಸಂಕೀರ್ಣದ ನೂತನ ಕಟ್ಟಡದ ಉದ್ಘಾಟನೆಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು
ಕನಕಪುರ ನಗರದ ತಾಲ್ಲೂಕು ಕಚೇರಿ ಸಂಕೀರ್ಣದ ನೂತನ ಕಟ್ಟಡದ ಉದ್ಘಾಟನೆಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು   

ಕನಕಪುರ: ನಗರದ ಹಳೆಯ ತಾಲ್ಲೂಕು ಕಚೇರಿ ಕಟ್ಟಡ ತೆರವುಗೊಳಿಸಿ ₹19. 57ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ನೂತನ ತಾಲ್ಲೂಕು ಕಚೇರಿ ಸಂಕೀರ್ಣ (ಮಿನಿ ವಿಧಾನಸೌಧ) ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಿದರು.

ಕಳೆದ ಒಂದು ವರ್ಷದ ಹಿಂದೆ ಕಟ್ಟಡ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಪ್ರಾರಂಭಗೊಂಡಿತ್ತು. ಒಂದು ವರ್ಷದ ಅವಧಿಯಲ್ಲಿ ಅತಿ ಶೀಘ್ರವಾಗಿ ಕಟ್ಟಡಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ನೀಡಲಾಗಿದೆ.

ನೂತನ ಸಂಕೀರ್ಣ ಕಟ್ಟಡದಲ್ಲಿ ಉಪ ನೋಂದಣಿ ಮತ್ತು ಅಬಕಾರಿ ಹೊರತುಪಡಿಸಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಹಳೆಯ ಕಚೇರಿ ಹಾಗೂ ತಾಲ್ಲೂಕು ಪಂಚಾಯಿತಿ ಇಲ್ಲಿ ಕಾರ್ಯನಿರ್ವಹಿಸಲಿದೆ.

ADVERTISEMENT

ಈ ಹಿಂದೆ ಇದ್ದ ಪುರಸಭೆ ಕಾರ್ಯಾಲಯದ ಕಟ್ಟಡ ತೆರವುಗೊಳಿಸಿ ₹8.3ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ನಗರಸಭೆ ಕಾರ್ಯಾಲಯದ ನೂತನ ಕಟ್ಟಡವನ್ನು ಕಾನೂನು ಸಚಿವ ಟಿ.ಬಿ.ಜಯಚಂದ್ರ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.

ಈ ಕಟ್ಟಡ ಕೂಡ ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಿ ಉದ್ಘಾಟನೆಗೊಂಡಿದೆ. ಇದರ ಜತೆಗೆ ನಗರಸಭೆ ವತಿಯಿಂದ ನಿರ್ಮಾಣ ಮಾಡಿದ್ದ ಕನಕ ವಾಣಿಜ್ಯ ಸಂಕಿರ್ಣ, ಹೌಸಿಂಗ್‌ ಬೋರ್ಡ್‌ ಬಡಾವಣೆ ಬಳಿಯ ಕಾನಕಾನಹಳ್ಳಿ ಉದ್ಯಾನ, ತರಕಾರಿ ಮಾರುಕಟ್ಟೆ ಕೂಡ
ಸಂದರ್ಭದಲ್ಲಿ ಉದ್ಘಾಟನೆಗೊಂಡಿತು.

ಅಂಬೇಡ್ಕರ್ ಭವನಕ್ಕೂ ಮುಕ್ತಿ: ಜನರ ಬಹುದಿನಗಳ ಬೇಡಿಕೆಯಾಗಿದ್ದ ₹10.56 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಪೂರ್ಣವಾಗಿದ್ದ ಅಂಬೇಡ್ಕರ್‌ ಭವನದ ಉದ್ಘಾಟನೆಯನ್ನು ಮುಖ್ಯಮಂತ್ರಿ ನೆರವೇರಿಸಿದರು.

ಹಲವು ವರ್ಷಗಳಿಂದ ಅಂಬೇಡ್ಕರ್‌ ಭವನ ನಿರ್ಮಾಣ ಕಾರ್ಯ ಅನುದಾನದ ಕೊರತೆಯಿಂದ ಪೂರ್ಣಗೊಳ್ಳದೆ ಬಾಕಿ ಉಳಿದಿತ್ತು. 2017–18ನೇ ಸಾಲಿನಲ್ಲಿ ಕಟ್ಟಡ ಪೂರ್ಣಗೊಳಿಸಲು ಬೇಕಿರುವಷ್ಟು ಅನುದಾನ ಸರ್ಕಾರ ಬಿಡುಗಡೆ ಮಾಡಿದ್ದರಿಂದ ಪೂರ್ಣಗೊಳಿಸಿರುವುದಾಗಿ ಲೋಕೋಪಯೋಗಿ ಇಲಾಖೆಯ ಎ.ಇ.ಇ. ಜಗದೀಶ್‌ ತಿಳಿಸಿದರು.

ಮುಖ್ಯಮಂತ್ರಿ ಹೆಲಿಕಾಪ್ಟರ್‌ ಮೂಲಕ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಬಂದಿಳಿದರು. ಅಲ್ಲಿಂದ ವಾಹನದಲ್ಲಿ ತಾಲ್ಲೂಕು ಕಚೇರಿ, ನಗರಸಭೆ, ಅಂಬೇಡ್ಕರ್‌ ಭವನಕ್ಕೆ ತೆರಳಿದರು. ನಂತರ ಶಿವನಹಳ್ಳಿ ಬಳಿ ₹ 500 ಕೋಟಿ ವೆಚ್ಚದಲ್ಲಿ ನಿರ್ಮಾಣದ ನಂದಿನಿ ಹಾಲಿನ ಉತ್ಪನ್ನಗಳ ಸಂಕೀರ್ಣದ ಮೆಗಾ ಡೇರಿ ಉದ್ಘಾಟನೆಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.