ADVERTISEMENT

ನಾಳೆ ದೇವಾಲಯ ಕುಂಭಾಭಿಷೇಕ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 19:30 IST
Last Updated 17 ಜೂನ್ 2011, 19:30 IST

ಮಾಗಡಿ: ತಾಲ್ಲೂಕಿನ ಮುತ್ತುರಾಯನಗುಡಿ ಪಾಳ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಕೋಡಿ ಶನೇಶ್ವರಸ್ವಾಮಿ ದೇವಾಲಯದ ಕುಂಭಾಭಿಷೇಕ ಜೂ.19ರಂದು ಬೆಳಿಗ್ಗೆ10 ಗಂಟೆಗೆ ನಡೆಯಲಿದೆ. ಶಿರಾ ತಾಲ್ಲೂಕಿನ  ಪಟ್ಟನಾಯಕನಹಳ್ಳಿ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠಾಧೀಶರಾದ ನಂಜಾವದೂತ ಸ್ವಾಮಿ ದಿವ್ಯ ಸಾನಿದ್ಯವಹಿಸಲಿದ್ದಾರೆ.ವಿಶ್ವ ಒಕ್ಕಲಿಗರ ಮಠಾಧೀಶರಾದ ಕುಮಾರ ಚಂದ್ರಶೇಖರಸ್ವಾಮಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಎಚ್.ಸಿ.ಬಾಲಕೃಷ್ಣ ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಆಗ್ರಹ
ಮಾಗಡಿ: ಉತ್ತಮ ಬಾಲ್ಯ ಮತ್ತು ಬಾಳು ಎಲ್ಲ ಮಕ್ಕಳ ಹಕ್ಕು ಅದು ಅವರಿಗೆ ಸಲ್ಲಬೇಕು ಎಂದು ಸಮಾಜ ಸೇವಕ ಎಂ.ನಾಗರಾಜು ತಿಳಿಸಿದರು.

ಅವರು ಪಟ್ಟಣ ಮತ್ತು ತಾಲ್ಲೂಕಿನ ವಿವಿಧೆಡೆಗಳಲ್ಲಿ ದುಡಿಯುತ್ತಿರುವ ಮಕ್ಕಳನ್ನು ಭೇಟಿ ಮಾಡಿ `ಪತ್ರಿಕೆ~ಯೊಂದಿಗೆ ಮಾತನಾಡಿದರು.

ಮಕ್ಕಳ ಹಕ್ಕುಗಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಇಲಾಖೆಯ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ದುಡಿಯುವ ಮಕ್ಕಳ ರಕ್ಷಣೆಗೆ ಮುಂದಾಗುತ್ತಿಲ್ಲ. ಬಾರ್ ಮತ್ತು ಡಾಬಾ, ಡಿಸ್ಟಿಲರಿ,  ಹೊಟೇಲ್, ಗ್ಯಾರೆಜ್, ಇಟ್ಟಿಗೆ ಗೂಡು, ಹುರಿ ಕಾರ್ಖಾನೆ, ಗಾರ್ಮೆಂಟ್ಸ್, ಅಂಗಡಿ ಮತ್ತಿತರ ಕಡೆಗಳಲ್ಲಿ ಮಕ್ಕಳು ಇಂದಿಗೂ ಜೀತಗಾರರಂತೆ ದುಡಿಯುತ್ತಿದ್ದಾರೆ. ಆದಿವಾಸಿ, ಅಲೆಮಾರಿ,ಬುಡಕಟ್ಟು ಜನಾಂಗಗಳ ಕಡುಬಡವರು ತಮ್ಮ ಎಳೆಯ ಮಕ್ಕಳನ್ನು ಜೀತಕ್ಕೆ ಇಟ್ಟಿರುವ ನಿದರ್ಶನಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ ಅಧಿಕಾರಿಗಳು ತಕ್ಷಣ ಕಾರ್ಯೋನ್ಮಖರಾಗಿ ಎಳೆಯ ಮಕ್ಕಳ ದುಡಿಮೆಯನ್ನು ತಪ್ಪಿಸುವಂತೆ ಅವರು ಆಗ್ರಹ ಪಡಿಸಿದರು.

ಮುಖ್ಯ ಶಿಕ್ಷಕರ ಸಂಘ ಅಸ್ತಿತ್ವಕ್ಕೆ
ಕನಕಪುರ: ಪಟ್ಟಣದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಜರುಗಿದ ತಾಲ್ಲೂಕು ಮುಖ್ಯ ಶಿಕ್ಷಕರ ಸಭೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘವನ್ನು ಅಸ್ತಿತ್ವಕ್ಕೆ ತರಲಾಯಿತು.  

 ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

 ತಾಲ್ಲೂಕು ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾಗಿ ಸೋಮಸುಂದರ್, ಉಪಾಧ್ಯಕ್ಷರಾಗಿ ಕೌಶಲ್ಯದೇವಿ, ಗೌರವಾಧ್ಯಕ್ಷರಾಗಿ ಸರ್ವೇಶ್‌ಮೂರ್ತಿ, ಕಾರ್ಯದರ್ಶಿಯಾಗಿ ಕೆ.ಹೆಚ್.ಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಎಸ್.ರಮೇಶ್, ಸಹಕಾರ್ಯದರ್ಶಿಯಾಗಿ ನಾಗವೇಣಮ್ಮ, ಖಜಾಂಚಿಯಾಗಿ ನಟರಾಜು ರವರು ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ರಾಜ್ಯ ಸಂಘದ ಕಾರ್ಯದರ್ಶಿ ಅಶ್ವತ್ತಯ್ಯ ಗೌರವಾಧ್ಯಕ್ಷ ಶಂಕರಮೂರ್ತಿ, ಮಾಗಡಿ ತಾಲ್ಲೂಕು ಅಧ್ಯಕ್ಷ ನಂಜುಂಡಯ್ಯ ಹಾಜರಿದ್ದು, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.