ADVERTISEMENT

ನೀರು ಪೂರೈಕೆ ಸಮಸ್ಯೆ ಉಲ್ಬಣ

ರಾಮನಗರದ ಕೆಲವು ವಾರ್ಡುಗಳಲ್ಲಿ ವಾರಕ್ಕೆ ಒಮ್ಮೆ ನೀರು ಸರಬರಾಜು

​ಪ್ರಜಾವಾಣಿ ವಾರ್ತೆ
Published 7 ಮೇ 2018, 13:36 IST
Last Updated 7 ಮೇ 2018, 13:36 IST
ರಾಮನಗರಕ್ಕೆ ನೀರು ಪೂರೈಕೆಗಾಗಿ ದ್ಯಾವರಸೇಗೌಡನದೊಡ್ಡಿಯ ಬಳಿ ತಡೆಗೋಡೆ ನಿರ್ಮಿಸಲಾಗಿದೆ
ರಾಮನಗರಕ್ಕೆ ನೀರು ಪೂರೈಕೆಗಾಗಿ ದ್ಯಾವರಸೇಗೌಡನದೊಡ್ಡಿಯ ಬಳಿ ತಡೆಗೋಡೆ ನಿರ್ಮಿಸಲಾಗಿದೆ   

ರಾಮನಗರ: ನಗರದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದೆ. ಹಾಗೆಯೇ ನೀರಿನ ಅಭಾವವೂ ಹೆಚ್ಚುತ್ತಿದೆ. ‘ನೀರಿನ ಶುಲ್ಕ ನೀಡುತ್ತೇವೆ. ಆದರೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ’ ಎನ್ನುವುದು ಇಲ್ಲಿನ ಜನರ ಆರೋಪವಾಗಿದೆ.

ಯಾರಬ್‌ನಗರ, ರೆಹಮಾನಿಯನಗರ, ವಿನಾಯಕ ನಗರ, ನಾಲಬಂದವಾಡಿ, ಕೊತ್ತೀಪುರ, ಹನುಮಂತನಗರ ಸೇರಿದಂತೆ ಇಲ್ಲಿನ ಬಹುತೇಕ ಪ್ರದೇಶಗಳಲ್ಲಿ ಜನರು ನೀರಿಗಾಗಿ ಪರದಾಡುವಂತಾಗಿದೆ.

ಮೊದಲು 2 ದಿನಕ್ಕೊಮ್ಮೆ ನೀರು ಬಿಡುತ್ತಿದ್ದರು. ಕೆಲವು ದಿನಗಳ ಬಳಿಕ ನಾಲ್ಕು ದಿನಗಳಿಗೊಮ್ಮೆ ಬಿಡಲಾರಂಭಿಸಿದರು. ಪ್ರಸ್ತುತ 8ರಿಂದ 10 ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಕೆಲವೊಂದು ಬಾರಿ ಪೈಪ್‌ಲೈನ್‌ ದುರಸ್ತಿ ಇದೆ ಎಂದು ತಿಂಗಳಿಗೆ 2 ರಿಂದ 3 ಬಾರಿ ಮಾತ್ರ ನೀರು ಸರಬರಾಜು ಮಾಡುತ್ತಾರೆ. ಅಲ್ಲದೆ ಯಾವುದೋ ಸಮಯದಲ್ಲಿ ನೀರು ಬಿಡುತ್ತಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ADVERTISEMENT

‘ಈ ಕುರಿತು ಮಾಹಿತಿ ಪಡೆಯಲು ಕರೆ ಮಾಡಿದರೆ ನಗರಸಭೆ ಸಿಬ್ಬಂದಿ ಕರೆ ಸ್ವೀಕರಿಸುವುದಿಲ್ಲ. ಇದರಿಂದ ಬಹಳಷ್ಟು ತೊಂದರೆ ಆಗಿದೆ. ಬೇಸಿಗೆ ಸಮಯ ಆಗಿರುವುದರಿಂದ ನೀರಿನ ಬೇಡಿಕೆ ಕೊಂಚ ಹೆಚ್ಚಿದೆ. ನಗರಸಭೆಯ ಈ ನಡೆ ಬೇಸರ ತರಿಸಿದೆ’ ಎಂದು ಕೆಂಪೇಗೌಡ ವೃತ್ತ ನಿವಾಸಿ ಚಂದ್ರಮೌಳಿ ಆರೋಪಿಸಿದರು.

‘ಬೇಸಿಗೆಯನ್ನು ಸಮರ್ಪಕವಾಗಿ ನಿಭಾಯಿಸಲು ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಟ್ಯಾಂಕರ್‌ ವ್ಯವಸ್ಥೆ ಮಾಡಿಲ್ಲ. ನಗರದಲ್ಲಿ ಹಲವು ಕಡೆ ತಿಂಗಳಲ್ಲಿ ಕೆಲವು ಬಾರಿ ಅಲ್ಲಲ್ಲಿ ಪೈಪ್‌ ಹೊಡೆದು ಹೋಗುತ್ತಿರುತ್ತದೆ. ಇದರಿಂದ ನೀರು ಪೋಲಾಗಿ ಹರಿಯುತ್ತಿದೆ. ಇದನ್ನು ಸರಿಪಡಿಸಬೇಕು’ ಎನ್ನುತ್ತಾರೆ ನಿವೃತ್ತ ಮುಖ್ಯಶಿಕ್ಷಕ ಮಹದೇವಪ್ಪ.

‘ಅಧಿಕಾರಿಗಳು, ನಗರಸಭಾ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸಮಸ್ಯೆ ಹೇಳಲು ಹೋದರೆ ಚುನಾವಣೆ ಸಮಯ ಎಂದು ನೆಪ ಹೇಳುತ್ತಿದ್ದಾರೆ. ಇದರಿಂದ ನಗರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ’ ಎನ್ನುತ್ತಾರೆ ಗೀತಾಮಂದಿರ ಬಡಾವಣೆಯ ನಿವಾಸಿ ಎಲ್.ಎಸ್. ರಂಜಿತಾ.

ಆಡಳಿತ ವರ್ಗದ ನಿರ್ಲಕ್ಷ್ಯ: ‘ನಗರಸಭೆ ಹಾಗೂ ನಗರ ನೀರು ಸರಬರಾಜು ಮಂಡಳಿಯ ದುರಾಡಳಿತದಿಂದ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಗುಣಟ್ಟದ ನೀರನ್ನು ಪೂರೈಸುವುದಾಗಿ ಹೇಳಿದ್ದ ಇವರು ತಿಂಳಿಗೆ ₹230 ಬಿಲ್‌ ಅನ್ನು ಪಡೆಯುತ್ತಿದ್ದಾರೆಯೇ ಹೊರೆತು ನೀರಿನ ಸಮಸ್ಯೆಯನ್ನು ಪರಿಹರಿಸುವ ಕಡೆ ಗಮನ ನೀಡುತ್ತಿಲ್ಲ’ ಎಂದು ಗೋವಿಂದರಾಜುಕೊತ್ತಿಪುರ ದೂರಿದರು.

‘ಬಡವರು ಕಿಲೋಮೀಟರ್‌ ಗಟ್ಟಲೆ ನಡೆದು ಹೋಗಿ ಶುದ್ಧ ನೀರಿನ ಘಟಕಗಳಿಂದ ನೀರನ್ನು ತರಲಾಗುತ್ತಿಲ್ಲ. ಅನಿವಾರ್ಯವಾಗಿ ಇವರು ಅರ್ಕಾವತಿ ನದಿ ಕಲುಷಿತ ನೀರನ್ನೆ ಬಳಸುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಹದಗೆಟ್ಟು ಆಸ್ಪತ್ರೆಗೂ ಹೋಗಲಾರದ ಸ್ಥಿತಿ ಇದೆ. 21 ರಿಂದ 27ನೇ ವಾರ್ಡ್‌ನ ಜನರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಜಲಮಂಡಳಿ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ 
– ಎಸ್. ರುದ್ರೇಶ್ವರ

**
ಜಲಮಂಡಳಿಯವರು ಅರ್ಕಾವತಿ ನದಿಯ ಕೊಳಕು ನೀರನ್ನೇ ಪೂರೈಸುತ್ತಿದ್ದಾರೆ. ಜನರು ಕುಡಿಯುವ ನೀರಿಗೆ ಶುದ್ಧ ಘಟಕ, ಟ್ಯಾಂಕರ್ ಅವಲಂಬಿಸುವಂತಾಗಿದೆ – ರಾಜೇಶ್ವರಿ, ಗೃಹಿಣಿ ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.