ADVERTISEMENT

ನೆಮ್ಮದಿ ಕೇಂದ್ರದಲ್ಲಿ ಸಕಾಲಕ್ಕೆ ಬೆಲೆಯಿಲ್ಲ!

​ಪ್ರಜಾವಾಣಿ ವಾರ್ತೆ
Published 13 ಜೂನ್ 2012, 5:40 IST
Last Updated 13 ಜೂನ್ 2012, 5:40 IST

ಕನಕಪುರ: ನೆಮ್ಮದಿ ಕೇಂದ್ರಗಳಲ್ಲಿ ಸರಿಯಾದ ಸಮಯಕ್ಕೆ ಜಾತಿ ಮತ್ತು ಆದಾಯ ದೃಢೀಕರಣ ಪ್ರಮಾಣ ಪತ್ರಗಳನ್ನು ನೀಡುತ್ತಿಲ್ಲ. ಇದರಿಂದ ಶಾಲಾ- ಕಾಲೇಜುಗಳಿಗೆ ದಾಖಲಾಗಲು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಶಾಲೆಗಳಲ್ಲಿ ದಾಖಲಾತಿ ಆರಂಭವಾಗಿದ್ದು ವಿದ್ಯಾರ್ಥಿಗಳು ಜಾತಿ ಮತ್ತು ಆದಾಯ ದೃಢೀಕರಣ ಪ್ರಮಾಣ ಪತ್ರ ನೀಡುವಂತೆ ನೆಮ್ಮದಿ ಕೇಂದ್ರಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೂಕ್ತ ಸಮಯಕ್ಕೆ ಕೆಲಸ ಕಾರ್ಯಗಳಾಗುತ್ತಿಲ್ಲ. ಸಾರ್ವಜನಿಕರು ಮತ್ತು ಪೋಷಕರು ಪ್ರಮಾಣ ಪತ್ರಗಳನ್ನು ಪಡೆಯಲು ನೆಮ್ಮದಿ ಕೇಂದ್ರಗಳ ಮುಂದೆ ಬೆಳಿಗ್ಗೆ 8 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಿತ್ಯದ ಕೆಲಸಗಳಿಗೆ ಕುಂದುಂಟಾಗುತ್ತಿದೆ.

ಸರ್ಕಾರವು ಜಾರಿ ಮಾಡಿರುವ `ಸಕಾಲ~ ಯೋಜನೆಯಡಿ ಅರ್ಜಿ ಸಲ್ಲಿಸಿದ ಇಂತಿಷ್ಟು ದಿನಕ್ಕೆ ದಾಖಲಾತಿಗಳನ್ನು ಒದಗಿಸಬೇಕು ಎಂದು ಹೇಳಲಾಗಿದೆ. ಆದರೆ ಇಲ್ಲಿನ ನೆಮ್ಮದಿ ಕೇಂದ್ರಗಳಲ್ಲಿ ಪ್ರಮಾಣ ಪತ್ರಗಳು `ಸಕಾಲ~ದಲ್ಲಿ ದೊರೆಯುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ ವಿದ್ಯುತ್ ಸಮಸ್ಯೆ,  ಸರ್ವರ್ ಸಮಸ್ಯೆ ಮತ್ತಿತರ ಕಾರಣಗಳನ್ನು ಹೇಳುತ್ತಾರೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಾತಿ ಮತ್ತು ಆದಾಯ ದೃಢೀಕರಣದ ಪ್ರಮಾಣ ಪತ್ರ ಪಡೆಯಲು ಜನರು ಗುಂಪು ಗುಂಪಾಗಿ ನೆಮ್ಮದಿ ಕೇಂದ್ರದ ಮುಂದೆ ಜಮಾಯಿಸುತ್ತಿದ್ದಾರೆ. ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದ್ದರೂ ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸೇವಾ ಸಮಿತಿ ತಾಲ್ಲೂಕು ಅಧ್ಯಕ್ಷ ಎಂ. ಮಂಜುನಾಥ್ ದೂರುತ್ತಾರೆ.

ಪ್ರವೇಶ ನೀಡುವ ಸಂದರ್ಭದಲ್ಲಿ ಪ್ರತಿಯೊಂದು ಶಾಲಾ ಕಾಲೇಜುಗಳಿಗೆ ಕಡ್ಡಾಯವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕು. ಇಲ್ಲವಾದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ.

ಶಾಲಾ ದಾಖಲಾತಿ ಅವಧಿ ಮುಗಿದರೆ ದಂಡ ಪಾವತಿಸಿ ಶಾಲೆಗೆ ಸೇರಬೇಕಾಗುತ್ತದೆ. ಪ್ರಮಾಣ ಪತ್ರಗಳನ್ನು ನೀಡದಿದ್ದರೆ ಶುಲ್ಕದಲ್ಲಿ ರಿಯಾಯಿತಿ ಸಹ ದೊರೆಯುವುದಿಲ್ಲ. ಇದನ್ನು ಸಂಬಂಧಪಟ್ಟವರು ಗಮನಿಸಿ ಸಮಸ್ಯೆಯನ್ನು ಶೀಘ್ರವಾಗಿ ಸರಿಪಡಿಸಬೇಕು, ಇಲ್ಲವಾದಲ್ಲಿ ಸಂಘಟನೆಯು ಹೋರಾಟ ನಡೆಸುತ್ತದೆ ಎಂದು ಅವರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.