ಕನಕಪುರ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಒತ್ತಾಯಿಸಿ ರಾಮನಗರ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಮಾರ್ಚ್ 19 ರಂದು ಎಲ್ಲಾ ತಾಲ್ಲೂಕು ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಮಾದಿಗ ದಂಡೋರ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಜಿ ರಾಜು ತಿಳಿಸಿದ್ದಾರೆ.
ಮಾದಿಗ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಮೀಸಲಾತಿ ಸೀಟುಗಳಿಂದ ವಂಚಿತರಾಗುತ್ತಿದ್ದಾರೆ. ಬ್ಯಾಕ್‌ಲಾಗ್ ಉದ್ಯೋಗಗಳಲ್ಲಿ ಸಮಪಾಲು ಸಿಗುತ್ತಿಲ್ಲ.
ವಿಶ್ವವಿದ್ಯಾಲಯಗಳಲ್ಲಂತೂ ಮಾದಿಗ ಪಧವೀಧರರಿಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ. ತಮಿಳುನಾಡು ಸರ್ಕಾರ ನ್ಯಾಯಮೂರ್ತಿ ಜನಾರ್ದನ ಅವರ ಆಯೋಗದ ವರದಿಯನ್ನು ಪಡೆದು ಮಿಸಲಾತಿ ವರ್ಗೀಕರಣ ಮಾಡಿರುವಂತೆ ಕರ್ನಾಟಕದಲ್ಲಿಯೂ ಎ.ಜೆ.ಸದಾಶಿವ ಆಯೋಗದ ವರದಿ ಅನುಸಾರ ಒಳಮೀಸಲಾತಿ ವರ್ಗಿಕರಣ ಮಾಡಬೇಕೆಂದು ಒತ್ತಾಯಿಸಲಾಗುವುದು ಎಂದರು.
ಪರಿಶಿಷ್ಟ ಜಾತಿ ವರ್ಗೀಕರಣಕ್ಕೆ ತಮಿಳುನಾಡು ರೀತಿ ತೀರ್ಮಾನ ತೆಗೆದುಕೊಳ್ಳಬೇಕು. ಪೌರ ಕಾರ್ಮಿಕರಿಗೆ ಸಂಬಳ ಹೆಚ್ಚಿಸಿ ಅವರನ್ನು ಕಾಯಂಗೊಳಿಸಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಪಡೆದಿರುವ ಪರಿಶಿಷ್ಟರ ಸಾಲವನ್ನು ಮನ್ನಾ ಮಾಡಲು ತೀರ್ಮಾನ ತೆಗೆದುಕೊಳ್ಳಬೇಕು. ಚರ್ಮಕುಶಲ ಕಾರ್ಮಿಕರಿಗೆ, ಕೊಳೆಗೇರಿ ನಿವಾಸಿಗಳಿಗೆ ಉಚಿತ ನಿವೇಶನವನ್ನು ನೀಡಿ ಮೂಲ ಸೌಕರ್ಯ ಒದಗಿಸಬೇಕು ಎಂಬುದೂ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.