ADVERTISEMENT

ಪುರಸ್ಕಾರ ಉನ್ನತ ವ್ಯಾಸಂಗಕ್ಕೆ ಬುನಾದಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಕನಕಪುರ: ಶಾಲಾ ದಿನಗಳಲ್ಲಿ ಪ್ರತಿಭಾನ್ವಿತ ಪುರಸ್ಕಾರ ಪಡೆಯುವ ವಿದ್ಯಾರ್ಥಿಗಳು  ಮುಂದೆ ಐ.ಎ.ಎಸ್. ಐ.ಪಿ.ಎಸ್.ನಂತಹ ಉನ್ನತ ವ್ಯಾಸಂಗ ಮಾಡಿದರೆ ಪ್ರತಿಭೆಗೆ ಸಾರ್ಥಕತೆ ಉಂಟಾಗುತ್ತದೆ ಎಂದು ಬೆಂಗಳೂರಿನ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ತಿಳಿಸಿದರು.

ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ 2010-11ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಎಷ್ಟೋ ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಉನ್ನತ ಮಟ್ಟದಲ್ಲಿ ಅಧಿಕಾರ ಗಳಿಸಿಕೊಂಡಿದ್ದಾರೆ. ಅವರ ವ್ಯಾಸಂಗ ಇತರರಿಗೂ ಆದರ್ಶವಾಗಬೇಕು ಎಂದರು.

ಕನಕಪುರ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ಎಲ್ಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಈ ಒಂದು ಪ್ರತಿಭಾನ್ವಿತ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ಜೀವನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂದು ಆಶಿಸಿದರು. ಐದು ವರ್ಷಗಳಿಂದ ಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಟ್ರಸ್ಟ್ ವತಿಯಿಂದ ಪ್ರೋತ್ಸಾಹಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಪ್ರತಿಭಾನ್ವಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. 

 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಹೆಚ್ಚಿನ ವಿದ್ಯಾಭ್ಯಾಸ ಮಾಡಿಸಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿ ಉತ್ತಮ ವ್ಯಾಸಂಗ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದರೂ ಹಣತೆ ಕೊರತೆಯಿಂದ ವ್ಯಾಸಂಗವನ್ನು ಮೊಟಕುಗೊಳಿಸಿ ಕೈಚೆಲ್ಲಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ತಮ್ಮ ಕೈಲಾದ ಸಹಾಯ ಮಾಡಿ ಚೈತನ್ಯ ತುಂಬುವ ಉದ್ದೆೀಶದಿಂದಲೇ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

 ನಮ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಾ ಟ್ರಸ್ಟಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಕಿವಿಗೊಡದೆ ಟ್ರಸ್ಟ್‌ನ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶೇ 60 ಕ್ಕಿಂತ ಹೆಚ್ಚು ಅಂಕಗಳಿಸಿದ  ಎಸ್‌ಎಸ್‌ಎಲ್‌ಸಿಯ 1,250, ಪಿಯುಸಿಯ 224 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ಷೇತ್ರದ ನಿರುದ್ಯೋಗಿಗಳಿಗೆ ವಾಹನ ಚಾಲನಾ ಪರವಾನಗಿ ನೀಡಲಾಯಿತು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮಾದೇವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ ಸುರೇಶ್, ಮಾಜಿ ಅಧ್ಯಕ್ಷೆ ಸುಕನ್ಯಾ ರಂಗಸ್ವಾಮಿ, ಉಪಾಧ್ಯಕ್ಷ ವಿಶ್ವಪ್ರಿಯಾ, ಪುರಸಭೆ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಉಪಾಧ್ಯಕ್ಷೆ ನಿರ್ಮಲಾ ಗುಂಡಣ್ಣ, ತಹಶೀಲ್ದಾರ್ ದಾಕ್ಷಾಯಿಣಿ, ಇ.ಒ.ಜೆ.ಜಿ.ನಾಯಕ್, ಬಿ.ಇ.ಒ. ಶಿವರಾಮೇಗೌಡ, ಬಾಕ್ಲ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್, ಟ್ರಸ್ಟಿನ ಸಂಯೋಜಕ ವಿಶ್ವನಾಥ್, ಕಾರ್ಯದರ್ಶಿ ಚಿನ್ನರಾಜು, ಟ್ರಸ್ಟಿ ವೆಂಕಟಪ್ಪ ಸೇರಿದಂತೆ ಜಿಲ್ಲೆ, ತಾಲ್ಲೂಕು, ಪುರಸಭೆ ಸದಸ್ಯರು ಹಾಜರಿದ್ದರು.   

ಡಿ.ಕೆ.ಎಸ್.ಚಾರಿಟಬಲ್ ಇನ್‌ಸ್ಟಿಟ್ಯೂಟ್ ಟ್ರಸ್ಟ್ ಹಾಗೂ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ           ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.