ADVERTISEMENT

ಪೊಲೀಸರೇ ಬೆದರಿಕೆ ಹಾಕುತ್ತಿದ್ದಾರೆ!

ಜನಸ್ಪಂದನ ಸಭೆಯಲ್ಲಿ ದೂರು ದುಮ್ಮಾನಗಳ ಕಂತೆ....

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 8:39 IST
Last Updated 9 ಜನವರಿ 2014, 8:39 IST

ರಾಮನಗರ: ‘ತಾಲ್ಲೂಕಿನ ಕೂಟಗಲ್ ಹೋಬಳಿ ತಿಮ್ಮಸಂದ್ರ ಗೇಟ್‌ನಿಂದ ಜೋಗಿದೊಡ್ಡಿ ಗ್ರಾಮಕ್ಕೆ ರಸ್ತೆ ನಿರ್ಮಿಸಲೆಂದು ಮೂರು ವರ್ಷಗಳ ಹಿಂದೆ  6 ಗುಂಟೆ ಜಮೀನನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ. ಆದರೆ   ಈತನಕ ಯಾವುದೇ ಪರಿಹಾರ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲು ಹೋದರೆ, ಸ್ವೀಕರಿಸು ವುದಿಲ್ಲ. ಪೊಲೀಸರ ಮೂಲಕ ಬೆದರಿಕೆ ಹಾಕಿಸುತ್ತಿ ದ್ದಾರೆ’ ಎಂದು ಮೆಳೆಹಳ್ಳಿಯ ಶಿವಣ  ಶಾಸಕ ಎಚ್‌.ಸಿ. ಬಾಲಕೃಷ್ಣ ಅವರಲ್ಲಿ ಅಲವತ್ತುಕೊಂಡರು.

ಮಿನಿ ವಿಧಾನಸೌಧ ಸಭಾಂಗಣದಲ್ಲಿ ಮಂಗಳವಾರ ಶಾಸಕರು ನಡೆಸಿದ ಜನಸ್ಪಂದನ ಸಭೆ ಯಲ್ಲಿ  ಅವರು ತಮ್ಮ ಸಮಸ್ಯೆ ವಿವರಿಸಿದರು.

‘ರಸ್ತೆಗಾಗಿ ಜಮೀನು ಕಳೆದುಕೊಂಡಿರುವ ಮೆಳೆ ಹಳ್ಳಿ ಶಿವಣ್ಣ ಅವರಿಗೆ ತಿಂಗಳ ಒಳಗೆ ಪರಿಹಾರ ನೀಡುವಂತೆ’ ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲ್ಲೂಕಿನ ಹಲವೆಡೆ ಕುಡಿಯುವ ನೀರಿಗೆ ಅಭಾವ ಎದುರಾಗಿದ್ದು, ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಜನರ ಸಮಸ್ಯೆ ಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಅವರು ಎಚ್ಚರಿಸಿದರು.

ಬಿಡದಿ ಹೋಬಳಿ ಆವರೆಗೆರೆ ಗ್ರಾಮದ ರೈತ ನಾರಾ ಯಣಸ್ವಾಮಿ ಎಂಬುವವರು, ತಮ್ಮ ತಾಯಿ ರುದ್ರಮ್ಮ ಅವರ ಪಿತ್ರಾರ್ಜಿತ ಆಸ್ತಿಯ 8 ಗುಂಟೆ ಜಮೀನನ್ನು ಕಂದಾಯ ನಿರೀಕ್ಷಕರು ಅಕ್ರಮವಾಗಿ ಬೇರೆಯವರಿಗೆ ನೋಂದಣಿ ಮಾಡಿದ್ದಾರೆ. ತಪ್ಪನ್ನು ಸರಿಪಡಿಸುವಂತೆ ಅರ್ಜಿ ನೀಡಿದರೂ, ಕ್ರಮ ಕೈಗೊಂಡಿಲ್ಲ. ಆದ್ದರಿಂದ ಇದನ್ನು ಸರಿಪಡಿಸಿಕೊಡುವಂತೆ ಆರ್‌.ಐ ಅವರಿಗೆ ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರ್ಥಿ ವೇತನ ನೀಡಿಲ್ಲ : ಮುಖ್ಯಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಾಲೆ ಮುಗಿಸಿ ಒಂದು ವರ್ಷ ಕಳೆದರೂ ತಮ್ಮ ಮಗ ಳಿಗೆ ವಿದ್ಯಾರ್ಥಿ ವೇತನ ದೊರೆತಿಲ್ಲ ಎಂದು ತಾಲ್ಲೂಕಿನ ಕೇತೋಹಳ್ಳಿ ಗ್ರಾಮದ ಸಿದ್ದರಾಜು ಎಂಬುವವರು ಮನವಿ ಮಾಡಿದರು.

ಮಗಳು 2012– -13ನೇ ಸಾಲಿನಲ್ಲಿ ಮಾಯಗಾನ ಹಳ್ಳಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಪೂರೈಸಿದ್ದಾಳೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿಡುವ ವಿದ್ಯಾರ್ಥಿ ವೇತನಕ್ಕೆ ಜೂನ್‌ 12, 2012ರಲ್ಲಿ ಅರ್ಜಿ ಸಲ್ಲಿಸಿದ್ದಳು. ಆದರೆ ಇದುವರೆಗೂ ವಿದ್ಯಾರ್ಥಿ ವೇತನ ಬಂದಿಲ್ಲ. ಇತರೆ 13  ವಿದ್ಯಾರ್ಥಿಗಳಿಗೂ  ದೊರೆತಿಲ್ಲ ಎಂದರು. ಈ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸು ವಂತೆ ಶಾಸಕರು ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು.  

ತಾಲ್ಲೂಕು ಪಂಚಾಯಿತಿ  ಸಾಮಾಜಿಕ ನ್ಯಾಯ ಸಮಿತಿ ಅದ್ಯಕ್ಷ ವಿ.ವೆಂಕಟರಂಗಯ್ಯ, ಎಚ್. ಶಿವಪ್ರಸಾದ್, ತಾಲ್ಲೂಕು ಪಂಚಾಯಿತ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶ್ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.