ADVERTISEMENT

ಬಾನಂದೂರು: ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 4:35 IST
Last Updated 22 ಆಗಸ್ಟ್ 2012, 4:35 IST

ರಾಮನಗರ: ಬಿಡದಿ ಹೋಬಳಿಯ ಬಾನಂದೂರು ಗ್ರಾಮದಲ್ಲಿ ಅಂದಾಜು ರೂ 1.25 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು.

ಸುವರ್ಣ ಗ್ರಾಮ ಯೋಜನೆಯಡಿ ಗ್ರಾಮದಲ್ಲಿ ಸಿಮೆಂಟ್ ರಸ್ತೆ, ಚರಂಡಿ, ಎಸ್.ಸಿ ಕಾಲೊನಿಯಲ್ಲಿ ಸಿಮೆಂಟ್ ಮತ್ತು ಚರಂಡಿ ನಿರ್ಮಾಣ, ಓವರ್ ಹೆಡ್ ಟ್ಯಾಂಕ್, ಅಂಗನವಾಡಿ ಕಟ್ಟಡ ನಿರ್ಮಾಣದ ಕಾಮಗಾರಿಗೆ ಗುದ್ದಲಿಪೂಜೆ ಮಾಡಿದರು.

ಆದಿ ಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹುಟ್ಟೂರಾದ ಬಾನಂದೂರು ಅಭಿವೃದ್ಧಿಗೆ ಅಗತ್ಯ ಒತ್ತು ನೀಡಲಾಗುವುದು ಎಂದರು.

`ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಬಾನಂದೂರು, ಲಕ್ಕಪ್ಪನಹಳ್ಳಿ (ಕೆಂಗಲ್ ಹನುಮಂತಯ್ಯ ಹುಟ್ಟೂರು), ವೀರಾಪುರ (ಡಾ. ಸಿದ್ದಗಂಗಾ ಸ್ವಾಮೀಜಿ ಹುಟ್ಟೂರು) ಗ್ರಾಮ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವುದಾಗಿ ಹೇಳಿದ್ದಾರೆ.
 
15 ದಿನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಈ ಗ್ರಾಮಕ್ಕೆ ಕರೆತರಲಾಗುವುದು.ಆ ಸಂದರ್ಭದಲ್ಲಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಆಗಬೇಕಿರುವ ಕಾಮಗಾರಿಗಳ ವಿವರ ನೀಡಿದರೆ, ಸಚಿವರು ಸರ್ಕಾರದಿಂದ ವಿಶೇಷ ಅನುದಾನ ತಂದು ಕೆಲಸ ಮಾಡಿಸಿಕೊಡುವರು~ ಎಂದರು.

ಬರ ನಿರ್ವಹಣೆಗೆ ಪ್ರಾಶಸ್ತ್ಯ: ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದ ಬರಗಾಲ ಬಂದಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿಯ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಲ್.ಚಂದ್ರು ಮಾತನಾಡಿ, ಶಾಸಕ ಬಾಲಕೃಷ್ಣ ಮತ್ತು ಸಂಸದ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಯತ್ನದಿಂದ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.

ಜಿ.ಪಂ ಸದಸ್ಯೆ ಶಾಂತಮ್ಮ ವೆಂಕಟೇಶ್, ತಾ.ಪಂ ಅಧ್ಯಕ್ಷೆ ಬಿ.ಎನ್.ಭಾನುಮತಿ ಚಿಕ್ಕಬೋರೇಗೌಡ, ಸದಸ್ಯ ಮಹಿಪತಿ, ಬಿಡದಿ ಗ್ರಾ.ಪಂ ಅಧ್ಯಕ್ಷ ಬಿ.ಸಿ.ಶಿವಕುಮಾರ್, ಮುಖಂಡ ಬಿ.ಎಂ.ಕುಮಾರ್ ಮಾತನಾಡಿದರು. ಜಿ.ಪಂ ಮಾಜಿ ಸದಸ್ಯರಾದ ಜಿ.ರಾಮಯ್ಯ, ಪುಟ್ಟಣ್ಣ, ಮುಖಂಡ ಬ್ಯಾಟಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.