ADVERTISEMENT

ಬಿಸ್ಕೂರು: ಮರಡಿಗುಡ್ಡದ ಅರಣ್ಯಕ್ಕೆ ಮತ್ತೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 6:35 IST
Last Updated 16 ಮಾರ್ಚ್ 2011, 6:35 IST

ಮಾಗಡಿ: ತಾಲ್ಲೂಕಿನ ಬಿಸ್ಕೂರು ಬಳಿ ಇರುವ ಮರಡಿಗುಡ್ಡ ಅರಣ್ಯಕ್ಕೆ ಬೆಂಕಿ ಬಿದ್ದ ಪರಿಣಾಮ ವಿವಿಧ ಜಾತಿಯ ಕಾಡು ಮರಗಳು ಮತ್ತು  ಪಕ್ಷಿಸಂಕುಲ ನಾಶವಾಗಿದೆ.
ಕಳೆದ 10 ದಿನಗಳ ಹಿಂದೆ ಆರಂಭವಾದ ಈ ಬೆಂಕಿ ಅನಾಹುತ ಇಂದಿಗೂ ಮುಂದುವರಿದಿದೆ. ಅಂದು ಬೆಂಗಳೂರು ಮತ್ತು ಕುಣಿಗಲ್ ಹಾಗೂ ಮಾಗಡಿಯಿಂದ ಅಗ್ನಿಶಾಮಕ ವಾಹನಗಳನ್ನು ಕರೆಸಿ ಬೆಂಕಿ ನಂದಿಸಲಾಗಿತ್ತು. ಆದರೆ ರಾತ್ರಿಯಾದೊಡನೆ ಯಾರೋ ದುಷ್ಕರ್ಮಿಗಳು ಕಾಡಿಗೆ ಬೆಂಕಿ ಹಚ್ಚುತ್ತಿದ್ದಾರೆ ಇದರಿಂದಾಗಿ ನಿರಂತರವಾಗಿ ಕಾಡು ನಾಶವಾಗುತ್ತಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ.

ಚೀಲೂರು, ಕೋಡಿಪಾಳ್ಯ ಸುತ್ತಮುತ್ತಲಿನ ಅರಣ್ಯಕ್ಕೆ ಸೋಮವಾರ ಬೆಂಕಿ ಬಿದ್ದಿತ್ತು. ನಾಗರಿಕರಲ್ಲಿ ಕಾಳ್ಗಿಚ್ಚಿನ ಬಗ್ಗೆ ಅರಿವು ಮೂಡಿಸಲಾಗಿದೆ. ಆದರೆ ಈಗ ಬಿದ್ದಿರುವ ಬೆಂಕಿ ಕಾಳ್ಗಿಚ್ಚಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. 

ಬೆಂಕಿ ನಂದಿಸುವ ಯತ್ನ: ಬಿಸ್ಕೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್.ಸುಹೇಲ್ ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಕಾಳ್ಗಿಚ್ಚು ನಂದಿಸಲು ಸಹಕರಿಸುತ್ತಿದ್ದಾರೆ. ಆದರೂ ನೂರಾರು ಎಕರೆ ಪ್ರದೇಶದಲ್ಲಿದ್ದ ಅರಣ್ಯ ಸುಟ್ಟು ನಾಶವಾಗಿದೆ. ಇನ್ನೂ ಬೆಂಕಿ ಉರಿಯುತ್ತಲೇ ಇದೆ. ಜಿಲ್ಲಾಧಿಕಾರಿಗಳು ಮರಡಿ ಗುಡ್ಡ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಬೇಕು. ಹೊತ್ತಿಕೊಂಡಿರುವ ಬೆಂಕಿ ಶಮನಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.