ADVERTISEMENT

ಬೀದಿಬದಿ ವ್ಯಾಪಾರ ಸಾಂವಿಧಾನಿಕ ಹಕ್ಕು

ಪರ್ಯಾಯ ವ್ಯವಸ್ಥೆ ಮಾಡದೇ ಒಕ್ಕಲೆಬ್ಬಿಸುವಂತಿಲ್ಲ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 10:26 IST
Last Updated 12 ಜನವರಿ 2017, 10:26 IST
ದೊಡ್ಡಬಳ್ಳಾಪುರದ ಲಯನ್ಸ್‌ ಭವನದಲ್ಲಿ ನಡೆದ ನಗರ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಿಐಟಿಯು ವತಿಯಿಂದ ಸಂಘದ ಗುರುತಿನ ಚೀಟಿಗಳನ್ನು  ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜೀಬ್ ವಿತರಣೆ ಮಾಡಿದರು.
ದೊಡ್ಡಬಳ್ಳಾಪುರದ ಲಯನ್ಸ್‌ ಭವನದಲ್ಲಿ ನಡೆದ ನಗರ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಿಐಟಿಯು ವತಿಯಿಂದ ಸಂಘದ ಗುರುತಿನ ಚೀಟಿಗಳನ್ನು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜೀಬ್ ವಿತರಣೆ ಮಾಡಿದರು.   
ದೊಡ್ಡಬಳ್ಳಾಪುರ: ಬೀದಿಬದಿ ವ್ಯಾಪಾರಿಗಳಿಗೂ ವ್ಯಾಪಾರ ಮಾಡಿ ಜೀವನ ಸಾಗಿಸಲು ಸಂವಿಧಾನ ಬದ್ಧ ಹಕ್ಕಿದೆ, ಸ್ಥಳೀಯ ಸಂಸ್ಥೆಗಳು ಬೀದಿಬದಿ ವ್ಯಾಪಾರಿಗಳ ಸಮಿತಿಗಳನ್ನು ರಚಿಸಬೇಕು ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜೀಬ್ ಹೇಳಿದರು.
 
ಅವರು ಲಯನ್ಸ್‌ ಭವನದಲ್ಲಿ ನಡೆದ ನಗರ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಿಗಳ ಸಿಐಟಿಯು ಸೇರ್ಪಡೆಗೊಂಡಿರುವ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.  
 
ಬೀದಿ ಬದಿಯಲ್ಲಿನ ವ್ಯಾಪಾರಿಗಳನ್ನು ಒಳಗೊಂಡಂತೆ ವರ್ಷದಲ್ಲಿ 34 ಬಾರಿಯಾದರೂ ಸಭೆಗಳನ್ನು ನಡೆಸಬೇಕು ಮತ್ತು ಕಾನೂನು ತಿಳಿದ ಒಬ್ಬರನ್ನು ಸಮಿತಿಯಲ್ಲಿ ಸೇರಿಸಬೇಕು. ಎಲ್ಲೆಲ್ಲಿ ವ್ಯಾಪಾರಕ್ಕೆ ಅವಕಾಶ ಇದೆಯೋ ಅಲ್ಲಿ ವ್ಯಾಪಾರ ಸುಸೂತ್ರವಾಗಿ ನಡೆಯಲು ಬೇಕಾದ ವ್ಯವಸ್ಥೆ ಮಾಡಬೇಕು. ವ್ಯಾಪಾರಿ ವಲಯಗಳನ್ನು ಸೃಷ್ಟಿಸಬೇಕು. ಪರ್ಯಾಯ ವ್ಯವಸ್ಥೆ ಮಾಡದೆ ಬೀದಿಬದಿ ವ್ಯಾಪಾರಿಗಳನ್ನು ಕಾಯ್ದೆ ಪ್ರಕಾರ ಒಕ್ಕಲ್ಲೆಬ್ಬಿಸುವಂತಿಲ್ಲ, ವಿನಾಕಾರಣ ‘ಪೆಟ್ಟಿ ಕೇಸ್‌’ಗಳನ್ನು  ಪೊಲೀಸರು ಹಾಕುವಂತಿಲ್ಲ ಎಂದರು.
 
ಮುದ್ರಾ ಯೋಜನೆಯಡಿ ಸಣ್ಣ ವ್ಯಾಪಾರಿಗಳಿಗೆ ಸಾಲ ಸೌಲಭ್ಯಗಳ ಯೋಜನೆಗಳು ಇದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನಗರ ಸಭೆ ಯಿಂದ ಇವುಗಳನ್ನು ದೂರಕಿಸಿಕೊಡಲು ಸ್ಥಳೀಯ ಸಂಸ್ಥೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
 
ಸಭೆಯಲ್ಲಿ ಮಾತನಾಡಿದ ಸಿಪಿಎಂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ಈ ಹಿಂದೆ 2014 ರಲ್ಲಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಗರ ಸಭೆ ಮಾಡಿದ್ದು ಆ ಪ್ರಕಾರ 350 ಜನ ಬೀದಿ ಬದಿ ವ್ಯಾಪಾರಿಗಳು ಇದ್ದು ಅದರ ವಿವರ ಈ ನಗರ ಸಭೆಯಲ್ಲಿ ಲಭ್ಯ ಇಲ್ಲ. ಎರಡು ವರ್ಷ ಆದರೂ ಕಾಯ್ದೆ ಪ್ರಕಾರ ಎಲ್ಲರಿಗೂ ಗುರುತಿನ ಚೀಟಿ ವಿತರಿಸಿಲ್ಲ. ವ್ಯಾಪಾರಿಗಳ ಸಮಿತಿಯ ಸಭೆ ಸೇರುತ್ತಿಲ್ಲ.
 
ಆದ್ದರಿಂದ ಅಸಂಘಟಿತರು, ಅತ್ಯಂತ ಬಡವರಾದ ಬೀದಿಬದಿ ವ್ಯಾಪಾರಿಗಳು ನಗರಸಭೆ ಅಧಿಕಾರಿಗಳು ಮತ್ತು ಪೊಲೀಸ್‌ಅವರಿಂದ ಪದೇ ಪದೇ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದರು.
 
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಬಾಜಾನ್ ವಹಿಸಿದ್ದರು. ಸಂಘದ ಕಾರ್ಯದರ್ಶಿ ನರೇಶ್‌ ಕುಮಾರ್, ತಾಲ್ಲೂಕು ಸಮಿತಿ ಗೌರವ ಅಧ್ಯಕ್ಷ ವಕೀಲರಾದ ರುದ್ರಾರಾಧ್ಯ, ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಪಿ.ಎ.ವೆಂಕಟೇಶ್, ಸಂಘದ ತಾಲ್ಲೂಕು ಪದಾಧಿಕಾರಿಗಳಾದ  ಸೈಯದ್ ಆಲಿ, ನಿಸರ್ ಅಹಮದ್, ಮುದ್ದಣ್ಣ ಸಭೆಯಲ್ಲಿ ಭಾಗವಹಿಸಿದ್ದರು.
 
***
ನಮ್ಮ ಪ್ರಕಾರ ಸುಮಾರು ಒಂದು  ಸಾವಿರಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳಿದ್ದು ಎಲ್ಲರೂ ಸಂಘಟನೆಯ ಸದಸ್ಯರಾಗಲು ಮನವಿ ಮಾಡಲಾಗಿದೆ.
-ಆರ್.ಚಂದ್ರತೇಜಸ್ವಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.