ADVERTISEMENT

ಭಾರ್ಗವತಿ ಕೆರೆಯ ಉಳಿವಿಗೆ ಮೊರೆ

ಪ್ರಜಾವಾಣಿ ವಿಶೇಷ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST

ಮಾಗಡಿ: ಮಾಗಡಿ ಪಟ್ಟಣದ ಐತಿಹಾಸಿಕ ಭಾರ್ಗವತಿ ಕೆರೆ ವಿನಾಶದ ಅಂಚಿನಲ್ಲಿದ್ದು ಇದರ ಸಂರಕ್ಷಣೆಗೆ ನೆರವಾಗಲು `ಸಹೃದಯ ಪ್ರತಿಷ್ಠಾನ~ ರಾಜ್ಯಪಾಲರ ಮೊರೆ ಹೋಗಿದೆ.

ಜಲಮೂಲ: ಭಾರ್ಗವತಿ ಕೆರೆ ಮಾಗಡಿಯಿಂದ ಹೊಂಬಾಳಮ್ಮನ ಪೇಟೆಯನ್ನು ದಾಟಿ ಮುನ್ನೆಡದರೆ ಸಮೀಪದಲ್ಲೇ ಮಾಡಂಬಾಳ್‌ಗೆ ಹೋಗುವ ರಸ್ತೆಯ ಪಶ್ಚಿಮ ದಿಕ್ಕಿನಲ್ಲಿ ಪರಂಗಿಚಿಕ್ಕನ ಪಾಳ್ಯದ ಬಳಿ ಇದೆ. ಈ ಪ್ರದೇಶವು ಸುತ್ತಲೂ ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು, ಸಹಸ್ರಾರು ಪ್ರಾಣಿ ಪಕ್ಷಿ, ಸಸ್ಯ ಸಂಕುಲಗಳ ಆವಾಸ ಸ್ಥಾನವಾಗಿದೆ.

 ಪೂರ್ವ ಪಶ್ಚಿಮವಾಗಿ 2 ಕಿ.ಮಿ.ಉದ್ದದ ಏರಿಯನ್ನು ಹೊಂದಿರುವ ಈ ಭಾರ್ಗವತಿ ಕೆರೆಯು ಕಣ್ವ ಮತ್ತು ಕುಮುದ್ವತಿ ನದಿಗಳ ತಲಪುರಿಗೆ ನೀರು ಹರಿಯುವ ಸ್ಥಳದಲ್ಲಿ ನಿರ್ಮಿಸಲ್ಪಟ್ಟಿದೆ.

ಚಾರಿತ್ರಿಕ ಹಿನ್ನೆಲೆ: ಗಗನಧಾರ್ಯರ ಪ್ರೇರಣೆಯಂತೆ ಭಾರ್ಗವತಿಯನ್ನು ಮದುವೆಯಾದ ಇಮ್ಮಡಿ ಕೆಂಪೇಗೌಡ ತನ್ನ ಪತ್ನಿಯ ಮನದಾಳದಂತೆ ಕ್ರಿ.ಶ.1711ರಲ್ಲಿ ಈ ಕೆರೆ ನಿರ್ಮಿಸಿ ಇದಕ್ಕೆ ಭಾರ್ಗವತಿ ಎಂದು ಹೆಸರಿಟ್ಟಿದ್ದ.

ಕೆರೆಯ ಆಗ್ನೇಯ ದಿಕ್ಕಿನಲ್ಲಿ ಚೋಳರ ರಾಜೇಂದ್ರ ಕಟ್ಟಿಸಿರುವ ಕೋಡಿ ಮಲ್ಲೇಶ್ವರ ಸ್ವಾಮಿ ದೇವಾಲಯವನ್ನು ಇಮ್ಮಡಿ ಕೆಂಪೇಗೌಡ ಜೀರ್ಣೋದ್ಧಾರ ಮಾಡಿಸಿದ ಬಗ್ಗೆ ಇಲ್ಲಿ ಶಾಸನಾಧಾರಗಳಿವೆ. ಕೆರೆಯ ತೂಬಿನ ಮೇಲೆ ಕಲಾತ್ಮಕ ಚಿತ್ರಗಳಿವೆ.

ಕ್ರಿ.ಶ. 1800ರಲ್ಲಿ ಮಾಗಡಿ ಸೀಮೆಯೆ ಕೆರೆಕಟ್ಟೆ ಮತ್ತಿತರೆ ಮೂಲಗಳನ್ನು ಗುರುತಿಸಲು ಪ್ರವಾಸ ಕೈಗೊಂಡಿದ್ದ ಫ್ರಾನ್ಸಿಸ್ ಬುಕಾನಿನ್ ಭಾರ್ಗವತಿ, ಕೆಂಪಸಾಗರ, ಬಿಸ್ಕೂರು, ತಿಪ್ಪಸಂದ್ರ, ನಾರಸಂದ್ರ, ಗುಡೇಮಾರನ ಹಳ್ಳಿ, ನಾಯಕ ಪಾಳ್ಯ, ಹುಲಿಕಲ್ ಇನ್ನಿತರೆ ಕೆರೆಗಳ ಬಗ್ಗೆ ದಾಖಲಿಸಿ, ಕೆರೆಯ ರಕ್ಷಣೆಗಾಗಿ ಕೆಂಪೇಗೌಡರ ವಂಶಸ್ಥರು ಕೈಗೊಂಡಿದ್ದ ಆಡಳಿತಾತ್ಮಕ ಕ್ರಮಗಳ ಬಗ್ಗೆ ವಿವರಿಸಿರುವುದು ಗಮನಾರ್ಹ.

ಅಚ್ಚುಕಟ್ಟು: ಕೆರೆಯ ಒಳಾವರಣ 380ಹೆಕ್ಟೇರ್ ಪ್ರದೇಶವಿದೆ. ವರ್ಷದ ಎಲ್ಲಾ ದಿನಗಳಲ್ಲೂ ನೀರಿರುತ್ತದೆ. 456 ಎಕರೆ ಅಚ್ಚಕಟ್ಟು ಪ್ರದೇಶವನ್ನು ಒಳಗೊಂಡಿದೆ. ಕೆರೆಯ ಏರಿಯ ಕೆಳಗಿನ ಫಲವತ್ತಾದ ಭೂಮಿ ಮಾಡಂಬಾಳ್, ಉಡುವೆಗೆರೆ, ಮಾನಗಲ್ ಗ್ರಾಮಗಳ ರೈತರಿಗೆ ಸೇರಿದೆ.

ಕೆರೆ ತುಂಬಿದರೆ ಕೋಡಿಯ ನೀರು ಮಾನಗಲ್, ಬಾಳೇನ ಹಳ್ಳಿಗಳ ಮೂಲಕ ಎತ್ತಿನ ಮನೆ ಗುಲಗಂಜಿ ಗುಡ್ಡದ ಜಲಾಶಯ ಸೇರುತ್ತದೆ. ಕೆರೆಯ ಕೆಳಗಿನ ಭೂಮಿಯಲ್ಲಿ ಭತ್ತ, ರಾಗಿ, ಅವರೆ, ಹೆಸರು, ಅಲಸಂದಿ, ಜೋಳ, ತೊಗರಿ, ತೋಟದ ಬೆಳೆಗಳನ್ನು ಬೆಳೆಯಲಾಗುತ್ತದೆ.

ಸಿಹಿ ನೀರು: ಪುರಸಭೆಯವರು ಪರಂಗಿ ಚಿಕ್ಕನ ಪಾಳ್ಯದ ಬಳಿ ಜಲ ಶುದ್ಧೀಕರಣ ನಿರ್ಮಿಸಿ, ಕುಡಿವ ನೀರನ್ನು ಪಟ್ಟಣದ ಜನತೆಯ ಉಪಯೋಗಕ್ಕಾಗಿ 20 ವರ್ಷ ಕಾಲ ಬಳಸಿದ್ದರು. ಬೆಟ್ಟಗುಡ್ಡಗಳ ನಡುವಿನ ಈ ಕೆರೆಯ ನೀರು ಗಿಡಮೂಲಿಕೆಗಳ ಅಡಿಯಲ್ಲಿ ಹರಿದು ಬಂದು ಔಷಧಿ ಗುಣವನ್ನು ಒಳಗೊಂಡು ಸಿಹಿ ನೀರು ಲಭಿಸುತ್ತಿತ್ತು.

ವಿನಾಶ: ಇತ್ತೀಚೆಗೆ ಪಟ್ಟಣದ ಶೌಚಾಲಯದ ಕಲುಷಿತ ನೀರನ್ನು ಈ ಕೆರೆಗೆ ಹರಿಯ ಬಿಡಲಾಗುತ್ತಿದೆ.  ಇದರಿಂದ ಕೆರೆಯ ನೀರು ಸಾಕಷ್ಟು ಕಲುಷಿತವಾಗಿದೆ. ನಡುವೆ ವಿಷಕಾರಿ ಬಳ್ಳಿಯೂ ಬೆಳೆದಿದೆ.
ಏರಿಯ ಕ್ಲ್ಲಲುಗಳನ್ನು ಕಿತ್ತುಕೊಂಡು ಹೋಗಲಾಗುತ್ತಿದೆ. ಏರಿಯ ಮೇಲೆ ದಟ್ಟವಾಗಿ ಬೆಳೆದ ಗಿಡಗಳು ಪೊದೆಗಳಾಗಿವೆ. ಭೂದಾಹಿಗಳ ಕೆಂಗಣ್ಣಿಗೆ ಗುರಿಯಾಗಿರುವ ಕೆರೆ ಸುತ್ತಮುತ್ತಲೂ ಒತ್ತುವರಿಯಾಗುತ್ತಿದೆ. 

ಗೋಕಟ್ಟೆ, ಕೆರೆ ಕಟ್ಟೆ ಕಲ್ಯಾಣಿ, ನೀರಿನ ತಟಾಕಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ಕೂಡಲೇ ಈ ಕೆರೆಯನ್ನು ರಕ್ಷಿಸಬೇಕಿದೆ ಎಂದು ಪ್ರತಿಷ್ಠಾನ ತನ್ನ ಮನವಿಯಲ್ಲಿ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.