ADVERTISEMENT

ಭಿನ್ನಾಭಿಪ್ರಾಯ ಬಿಡಿ: ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ರಾಮನಗರ: ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗೊತ್ತಿ ಸೈದ್ಧಾಂತಿಕ ನೆಲಗಟ್ಟಿನಲ್ಲಿ ರೈತ ಪರ ಹೋರಾಟ ಮುಂದುವರೆಸಲು ಎಲ್ಲ ರೈತ ಮುಖಂಡರು ಒಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ (ಗ್ರಾಮ ಸ್ವರಾಜ್ಯ ಸಮಿತಿ) ಸಂಚಾಲಕ ಜಿ.ಎ.ಲಕ್ಷ್ಮಿ ನಾರಾಯಣಗೌಡ ಕರೆ ನೀಡಿದರು.

`ರೈತ ಮುಖಂಡರು ಮತ್ತು ಸಂಘಟನೆಗಳಲ್ಲಿರುವ ಒಡಕಿನಿಂದಾಗಿ ಇಂದು ರೈತ ಚಳವಳಿ ಮೊನಚು ಕಳೆದುಕೊಂಡಿದೆ. ರೈತ ಹೋರಾಟಗಳು ತಣ್ಣಗಾಗಿವೆ. ಕಾರ್ಯಕರ್ತರಲ್ಲಿ ಉತ್ಸಾಹ ಕಡಿಮೆಯಾಗಿದೆ~ ಎಂದು ಅವರು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಪರಿಣಾಮಕಾರಿಯಾಗಿ ರೈತ ಚಳವಳಿಯನ್ನು ಸಂಘಟಿಸಬೇಕಾದ ಅಗತ್ಯ ಇದೆ. ಸಂಘಟನೆಗಳನ್ನು ಹಲವು ಭಾಗಗಳನ್ನು ಮಾಡಿ ರೈತರ ಶಕ್ತಿ ಕ್ಷೀಣಿಸುವ ಬದಲಿಗೆ ಒಗ್ಗೂಡಿ, ಸಾಮೂಹಿಕ ನಾಯಕತ್ವದಲ್ಲಿ ಚಳವಳಿಗಳನ್ನು ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸಂಚಾಲನ ಸಮಿತಿ ರಚಿಸಿ, ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ತೆಗೆದು ಎಲ್ಲರೂ ಒಂದೇ ಎನ್ನುವ ತತ್ವ, ಸಿದ್ದಾಂತದ ಆಧಾರದ ಮೇಲೆ ಚಳವಳಿ ರೂಪಿಸೋಣ. ಆಗ ಮಾತ್ರ ರೈತ ಚಳವಳಿಗಳು ಯಶಸ್ವಿಯಾಗುತ್ತವೆ. ಸರ್ಕಾರ ಮತ್ತು ರಾಜಕೀಯ ಪಕ್ಷಗಳು ರೈತರ ಕೆಲಸಗಳನ್ನು ತುರ್ತಾಗಿ ಮಾಡಿಕೊಡುತ್ತವೆ. ಆಡಳಿತ ಸುಧಾರಣೆಯಾಗುತ್ತದೆ ಎಂದು ಅವರು ಹೇಳಿದರು.

ಈಗಿನ ರೈತ ಮುಖಂಡರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಹಾಗೂ ಚುನಾವಣೆಯಿಂದ ದೂರ ಇರಬೇಕು ಎಂಬ ಎರಡೂ ವರ್ಗದವರು ಇದ್ದಾರೆ. ಚುನಾವಣೆಗಿಳಿದು ಅಧಿಕಾರ ಹಿಡಿಯುವುದು ಸುಲಭ ಮಾರ್ಗ. ಆದರೆ ರೈತರನ್ನು, ಬಡವರನ್ನು, ಕೂಲಿ ಕಾರ್ಮಿಕರನ್ನು, ಹಿಂದುಳಿದ ವರ್ಗದವರನ್ನು, ದಲಿತರನ್ನು, ಅಲ್ಪ ಸಂಖ್ಯಾತರನ್ನು ಒಗ್ಗೂಡಿಸಿ, ರೈತ ಚಳವಳಿಗಳನ್ನು ರೂಪಿಸಬೇಕಾದ ಕಾರ್ಯ ಮೊದಲಿಗೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ರೈತ ಸಂಘ ಈಗಲೇ ರಾಜಕೀಯ ಪ್ರವೇಶಿಸುವುದು ಬೇಡ. ಒಂದು ವೇಳೆ ರಾಜಕೀಯಕ್ಕಿಳಿದರೆ, ಇತರ ರಾಜಕೀಯ ಪಕ್ಷಗಳಂತೆ ದುರ್ಗುಣಗಳನ್ನು ಮೈಗೂಡಿಸಿಕೊಂಡು, ಪುಡಾರಿಗಳಾಗಿ, ರೈತ ವಿರೋಧಿಗಳಾಗಿ, ಸ್ವಾರ್ಥಿಗಳಾಗುವ ಸಾಧ್ಯತೆ ಹೆಚ್ಚು ಎಂದು ಅವರು ಕಿವಿಮಾತು ಹೇಳಿದರು. ರೈತ ಮುಖಂಡರಾದ ಪುಟ್ಟರಾಜು, ರಾಜು, ರವಿ, ಮಾದೇಶಗೌಡ, ಶಿವರುದ್ರಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.