ಕನಕಪುರ: ‘ಕುವೆಂಪು ಅವರ ಮಂತ್ರಮಾಂಗಲ್ಯ ಪದ್ಧತಿಯನ್ನು ಇಂದು ಸಮಾಜದಲ್ಲಿ ಹೆಚ್ಚು ಪ್ರಚುರಪಡಿಸಬೇಕಿದೆ’ ಎಂದು ಖ್ಯಾತ ವಿಮರ್ಶಕ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ರೂರಲ್ ಪದವಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರಕಾಲೇಜು ಶ್ರೀ ರಾಮಾಯಣ ದರ್ಶನಂ ಕಾವ್ಯ ವಾಚನ ಮತ್ತು ಕನ್ನಡ ಭಾವಗೀತೆಗಳ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮದುವೆಗಳನ್ನು ಆಡಂಬರದಿಂದ ಮಾಡದೆ ಸರಳವಾಗಿ ಆಚರಿಸಬೇಕೆಂಬುದೇ ಮಂತ್ರಮಾಂಗಲ್ಯದ ಹಿಂದಿನ ಮುಖ್ಯ ಉದ್ದೇಶ. ಪ್ರತಿ ಕುಟುಂಬವೂ ಮಂತ್ರಮಾಂಗಲ್ಯ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಕುವೆಂಪು ಅವರಂತಹ ಮಹಾನ್ ವ್ಯಕ್ತಿಯ ಹೆಸರನ್ನು ಉಳಿಸಬೇಕು. ಯುವ ಪೀಳಿಗೆ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಕೃಷ್ಣಕುಮಾರ್ ಮನವಿ ಮಾಡಿದರು.
ಕುವೆಂಪು ಹೆಸರಿನಲ್ಲಿ ಕಾಲೇಜು ಆಡಳಿತ ಮಂಡಳಿಯು ಪ್ರತಿ ವರ್ಷ ರಾಜ್ಯಮಟ್ಟದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಸಂಸ್ಥೆಯ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್.ಕರಿಯಪ್ಪನವರ ಕುರಿತು ನಿವೃತ್ತ ಉಪಾಧ್ಯಾಯ ಚಿಕ್ಕಮರೀಗೌಡರು ಬರೆದ ‘ಬಿಂಬ’ ಪುಸ್ತಕವನ್ನು ಬೆಂಗಳೂರಿನ ಚಿತ್ರಕಲಾ ಪರಿಷತ್ ಕಾರ್ಯದರ್ಶಿ ಡಿ.ಕೆ.ಚೌಟ ಬಿಡುಗಡೆ ಮಾಡಿದರು.
ಪ್ರತಿ ವಿಷಯದಲ್ಲೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ ₨ 5 ಸಾವಿರ ಹಾಗೂ ರ್‍ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ ₨ 10 ಸಾವಿರ ನೀಡಲಾಯಿತು.ಬೆಂಗಳೂರಿನ ವಿಜಯ ಪದವಿ ಕಾಲೇಜು ಪ್ರಥಮ ಸ್ಥಾನ ಹಾಗೂ ಕನಕಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಕಾವ್ಯವಾಚನಕ್ಕೆ 25 ಕಾಲೇಜುಗಳ 50 ವಿದ್ಯಾರ್ಥಿಗಳು ಹಾಗೂ ಕನ್ನಡ ಭಾವಗೀತೆ ಸ್ಪರ್ಧೆಯಲ್ಲಿ 27 ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ದ್ದರು. ಸಂಸ್ಥೆಯ ಉಪಾಧ್ಯಕ್ಷ ಲಕ್ಷ್ಮಣ್,ಕಾರ್ಯದರ್ಶಿ ರಮೇಶ್, ಖಂಜಾಚಿ ಎಂ.ಎಲ್.ಶಿವಕುಮಾರ್, ಪ್ರಾಂಶುಪಾಲ ಶಿವಬಸವೇಗೌಡ, ಡಾ. ಭುವನೇಶ್ವರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.