ADVERTISEMENT

ಮತ ಮಾರುವ ಸರಕಲ್ಲ-

ಮಾಗಡಿ: ಮತದಾನ ಮಹತ್ವದ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 10:36 IST
Last Updated 18 ಏಪ್ರಿಲ್ 2018, 10:36 IST

ಮಾಗಡಿ: ಪ್ರತಿಯೊಬ್ಬ ವಯಸ್ಕರು ಮತದಾನ ಮಾಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತದಾನದ ಮಹತ್ವ ತಿಳಿಸಿ ಜಾಗೃತಿ ಮೂಡಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಟಿ.ಮುರುಡಯ್ಯ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾನದ ಮಹತ್ವದ ಜಾಗೃತಿ ಅಭಿಯಾನದ ಅಂಗವಾಗಿ ವಿವಿ ಪ್ಯಾಡ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಿಮ್ಮ ಮತ ಪ್ರಗತಿಯ ಪಥ ಎಂಬುದನ್ನು ಮತದಾರರಿಗೆ ತಿಳಿಸಿಕೊಡಬೇಕು. ಮತ ಮಾರುವ ಸರಕಲ್ಲ. ಬದಲಾಗಿ ಸಂಸದೀಯ ಸರ್ಕಾರ
ವೊಂದರ ನಿರ್ಮಾಣಕ್ಕೆ ನಾಂದಿಯಾಗಲಿದೆ. ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಹೆಚ್ಚಿನ ಮಹತ್ವವಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯೊಬ್ಬನ ಭವಿಷ್ಯ ನಿರ್ಧಾರವಾಗುವುದು ಆತ ಪಡೆಯುವ ಮತದ ಸಂಖ್ಯೆ ಆಧಾರದ ಮೇಲೆ, ಒಂದೇ ಒಂದು ಮತ ಹೆಚ್ಚಿಗೆ ಬಂದರೂ ಅಭ್ಯರ್ಥಿ ವಿಜೇತನಾಗುತ್ತಾನೆ’ ಎಂದರು.

ADVERTISEMENT

ಸ್ವಾತಂತ್ರ್ಯಕ್ಕೆ ಮುನ್ನ ಜಮೀನ್ದಾರರು, ಸಿರಿವಂತರಿಗೆ ಮಾತ್ರ ಮತದಾನದ ಅವಕಾಶವಿತ್ತು. ಡಾ.ಬಿ.ಆರ್‌.ಅಂಬೇಡ್ಕರ್‌ ಸಂವಿಧಾನ ರಚಿಸಿದ ಮೇಲೆ ಮುಕ್ತ ಚುನಾವಣೆ ನಡೆಯುತ್ತಿದೆ. ಚುನಾವಣೆ ಯಶಸ್ವಿಯಾಗಲು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವದ ಅಳಿವು – ಉಳಿವು ಮತದಾನದ ಮೇಲೆ ನಿಂತಿದೆ ಎಂಬುದನ್ನು ಮತದಾರರಿಗೆ ತಿಳಿಸುವ ಅಗತ್ಯವಿದೆ ಎಂದು ತಿಳಿಸಿದರು.

ನರೇಗಾ ಯೋಜನೆ ಅಧಿಕಾರಿ ನವೀನ್‌ ಕುಮಾರ್‌, ಕುದೂರು ಪಿಡಿಒ ಎಚ್‌.ವೆಂಕಟೇಶ್‌, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರಾಮಯ್ಯ, ಮುತ್ತುರಾಜು, ನಾಗರಾಜು, ಸಚ್ಚಿದಾನಂದ ಮೂರ್ತಿ, ಜಯರಾಮು ಮತದಾನದ ಮಹತ್ವದ ಬಗ್ಗೆ ಮಾತನಾಡಿದರು.

32ಗ್ರಾಮ ಪಂಚಾಯಿತಿಗಳ ಪಿಡಿಒಗಳು ಮತ್ತು ತಾಲ್ಲೂಕು ಪಂಚಾಯಿತಿ ಕಚೇರಿ ಸಿಬ್ಬಂದಿ ಇದ್ದರು. ಮತದಾನ ಖಾತರಿ ಯಂತ್ರ ಮತ್ತು ವಿದ್ಯುನ್ಮಾನ ಮತಯಂತ್ರದ ಬಳಕೆ ಬಗ್ಗೆ ತರಬೇತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.