ADVERTISEMENT

ಮಳೆ ನೀರು ಬಳಕೆಗೆ ಮಾದರಿ ಸರ್ಕಾರಿ ಶಾಲೆ

ಆರ್.ಜಿತೇಂದ್ರ
Published 6 ಜುಲೈ 2017, 10:28 IST
Last Updated 6 ಜುಲೈ 2017, 10:28 IST
ಮಳೆ ನೀರು ಬಳಕೆಗೆ ಮಾದರಿ ಸರ್ಕಾರಿ ಶಾಲೆ
ಮಳೆ ನೀರು ಬಳಕೆಗೆ ಮಾದರಿ ಸರ್ಕಾರಿ ಶಾಲೆ   

ರಾಮನಗರ: ಸರ್ಕಾರಿ ಶಾಲೆ ಎಂದರೆ ಸ್ವಚ್ಛತೆ, ಮೂಲ ಸೌಕರ್ಯಗಳೇ ಇಲ್ಲ ಎಂದು ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ಶಾಲೆ ಅಂಗೈ ಅಗಲದ ಜಾಗದಲ್ಲೇ  ಸುಂದರವಾಗಿ ನಿರ್ವಹಣೆ ಮಾಡುತ್ತಾ ಇತರರಿಗೆ ಮಾದರಿಯಾಗಿದೆ. ಇದು ತಾಲ್ಲೂಕಿನ ಕೈಲಾಂಚ ಹೋಬಳಿಯ ಮೊಟ್ಟೆದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಿತ್ರಣ. ಸುಂದರ ಕೈತೋಟ, ಮಳೆ ನೀರು ಸಂಗ್ರಹ ಮತ್ತು ಬಳಕೆ, ಶುಚಿತ್ವ ಕಾಪಾ ಡುವ ಮೂಲಕ ಈ ಶಾಲೆ ಸೈ ಎನಿಸಿಕೊಂಡಿದೆ.

ಕಳೆದ ಒಂಭತ್ತು ವರ್ಷಗಳಿಂದಲೂ ಇಲ್ಲಿ ಮಳೆ ನೀರು ಸಂಗ್ರಹಿಸಿ ಪುನರ್‌ ಬಳಕೆ ಮಾಡಲಾಗುತ್ತಿದೆ. ಕಟ್ಟಡದ ತಾರಸಿಯಿಂದ ಬೀಳುವ ನೀರಿಗೆ ಪೈಪ್‌ ಅಳವಡಿಸಲಾಗಿದ್ದು, ಅಲ್ಲಿಂದ ನೀರು ನೇರ ತೊಟ್ಟಿಗೆ ಬಂದು ಬೀಳುತ್ತದೆ. ಇದಕ್ಕಾಗಿ ಸುಮಾರು 400–500 ಲೀಟರ್‌ ಸಾಮರ್ಥ್ಯದ ನೀರಿನ ತೊಟ್ಟಿಯನ್ನು ನಿರ್ಮಿಸಲಾಗಿದೆ.

ಈ ತೊಟ್ಟಿಯಿಂದ ಸಣ್ಣ ಓವರ್‌ಹೆಡ್ ಟ್ಯಾಂಕ್‌ಗೆ ನೀರನ್ನು ಎತ್ತಿಕೊಂಡು ಅಲ್ಲಿಂದ ಅಡುಗೆ ಕಾರ್ಯಕ್ಕೆ, ಶೌಚಾಲಯಕ್ಕೆ ಮೊದಲಾದ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೆಚ್ಚುವರಿಯಾಗಿ ಬೀಳುವ ನೀರು ಗಿಡಗಳಿಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ತರಕಾರಿ ತೋಟ: ಮಕ್ಕಳ ಬಿಸಿ ಯೂಟಕ್ಕೆಂದು ಸರ್ಕಾರ ದಿನಕ್ಕೆ ಪ್ರತಿ ಮಗುವಿಗೆ ತರಕಾರಿಗೆಂದು ದಿನಕ್ಕೆ ₹ 1 ನೀಡುತ್ತಿದೆ. ಈ ದುಡ್ಡಿನಲ್ಲಿ ಕೊತ್ತಂಬರಿ ಸೊಪ್ಪು ಸಹ ಬಾರದು. ಹೀಗಾಗಿ ಶಾಲೆಗೆ ಅಗತ್ಯವಾದಷ್ಟು ತರಕಾರಿಗಳನ್ನು ಇಲ್ಲಿನ ಅಂಗಳದಲ್ಲಿಯೇ ಬೆಳೆಯಲಾಗುತ್ತಿದೆ. ಸದ್ಯ ಇಲ್ಲಿ ಮೂಲಂಗಿ, ಬೀನ್ಸ್‌, ಪಾಲಕ್, ಸಬ್ಬಸಿಗೆ ಮೊದಲಾದ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಇದಕ್ಕಾಗಿ ಮಳೆಯ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಇದಲ್ಲದೆ ಶಾಲೆ ಆವರಣದಲ್ಲಿ ಒಂದೆರಡು ತೆಂಗಿನ ಮರಗಳಿದ್ದು, ಉತ್ತಮ ಫಲ ನೀಡುತ್ತಿವೆ. ಅಲಲ್ಲಿ ಹೂವಿನ ಗಿಡಗಳು ನಳನಳಿಸುತ್ತಿವೆ. ಪರಂಗಿ, ದಾಳಿಂಬೆ, ಬಾಳೆ ಮೊದಲಾದ ಸಸಿಗಳು ಬೆಳೆಯುತ್ತಿವೆ.

ಶೌಚಾಲಯ ನಿರ್ವಹಣೆ: ಶಾಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇದ್ದು, ಎರಡೂ ಸುಸ್ಥಿತಿ ಯಲ್ಲಿವೆ. ಮಕ್ಕಳು ಇದನ್ನು ಬಳಕೆ ಮಾಡಿ ಕೊಳ್ಳುತ್ತಿದ್ದಾರೆ.

ಅಚ್ಚುಕಟ್ಟಾದ ಬಿಸಿಯೂಟ: ಶಾಲೆಯಲ್ಲಿ ಸದ್ಯ ಒಂದರಿಂದ ಐದನೇ ತರಗತಿವರೆಗೆ ಮಕ್ಕಳು ಕಲಿಯುತ್ತಿದ್ದಾರೆ. ಒಟ್ಟು 15 ವಿದ್ಯಾರ್ಥಿಗಳು ಇದ್ದು, ಅವರಿಗೆಂದು ಎರಡು ತರಗತಿಗಳಿವೆ. ತರಗತಿಯ ಒಳಗೆ ವಿದ್ಯುತ್ ದೀಪ ಮತ್ತು ಫ್ಯಾನಿನ ವ್ಯವಸ್ಥೆ ಇದೆ.

ಬಿಸಿಯೂಟ ತಯಾರಿಕೆಗೆಂದು ಪ್ರತ್ಯೇಕ ಕೊಠಡಿ ಇದೆ. ಅಡುಗೆ ಸಿಬ್ಬಂದಿ ರುಚಿಯಾದ ಊಟ ಸಿದ್ಧಪಡಿಸುವುದರ ಜೊತೆಗೆ ಶುಚಿತ್ವವನ್ನು ಕಾಪಾಡಿಕೊಂಡಿದ್ದಾರೆ.
ಗ್ರಾಮಸ್ಥರ ಸಹಕಾರ: ಕೆಲವೇ ಗುಂಟೆಗಳ ಅಳತೆಯಲ್ಲಿರುವ ಶಾಲೆಗೆ 12 ವರ್ಷದ ಹಿಂದೆ ನಿರ್ಮಿತಿ ಕೇಂದ್ರವು ಕಂಪೌಂಡ್‌ ನಿರ್ಮಿಸಿಕೊಟ್ಟಿದೆ, ಸ್ಥಳೀಯ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಉತ್ತಮ ಸಹಕಾರ ನೀಡುತ್ತಿದ್ದು, ಇದರಿಂದ ಶಾಲೆಯ ನಿರ್ವಹಣೆ ಸುಲಭವಾಗಿದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕ ಬಿ.ಎಲ್‌. ಶೈಲೇಂದ್ರ.

ಶಾಲೆಯ ಏಳಿಗೆಗೆ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡುತ್ತಿದ್ದಾರೆ. ಕಟ್ಟಡದ ಹೊರ ಜಗುಲಿ ಯು ಸದ್ಯ ಗಾರೆಯಿಂದ ಕೂಡಿದ್ದು, ಸದ್ಯದಲ್ಲಿಯೇ ಅಲ್ಲಿಗೆ ಗ್ರಾನೈಟ್‌ ಹಾಕಿಸಿಕೊಡಲು ಯುವಕರು ಮುಂದೆ ಬಂದಿದ್ದಾರೆ.

ಆದರೆ ಈಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಶಿಕ್ಷಕರನ್ನು ಚಿಂತೆಗೀಡು ಮಾಡಿದೆ. ಪೋಷಕರು ಖಾಸಗಿ ಶಾಲೆಗಳ ಮೋಹ ಬಿಟ್ಟು ಉತ್ತಮ ಪರಿಸರ, ಸೌಕರ್ಯಗಳು ಇರುವ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿದರೆ ಮಾತ್ರ ಇದು ಹೀಗೆ ಉಳಿದು ಬೆಳೆಯಲು ಸಾಧ್ಯ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

* * 

ಮಳೆಯ ನೀರನ್ನೇ ನಿತ್ಯ ಬಳಕೆ ಮಾಡುತ್ತಿದ್ದೇವೆ. ಇದರಲ್ಲೇ  ತರಕಾರಿ ಬೆಳೆಸಿದ್ದು, ಮಕ್ಕಳ ಬಿಸಿಯೂಟಕ್ಕೆ ಬಳಸಲಾಗುತ್ತಿದೆ
ಬಿ.ಎಲ್‌. ಶೈಲೇಂದ್ರ
ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.