ADVERTISEMENT

ಮಹಮದ್‌ ಆರಿಫ್‌ ಅಧ್ಯಕ್ಷ–ನಾಗೇಶ್‌ ಉಪಾಧ್ಯಕ್ಷ

ಕಾಂಗ್ರೆಸ್‌ ತೆಕ್ಕೆಗೆ ರಾಮನಗರ ನಗರಸಭೆ ಆಡಳಿತ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 11:04 IST
Last Updated 18 ಮಾರ್ಚ್ 2014, 11:04 IST
ರಾಮನಗರ ನಗರಸಭೆಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಮಹಮದ್ ಆರಿಫ್ ಖುರೇಷಿ ಮತ್ತು ನಾಗೇಶ್ ಅವರನ್ನು ಸಂಸದ ಡಿ.ಕೆ.ಸುರೇಶ್ ಮತ್ತಿತರರು ಅಭಿನಂದಿಸಿದರು
ರಾಮನಗರ ನಗರಸಭೆಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಮಹಮದ್ ಆರಿಫ್ ಖುರೇಷಿ ಮತ್ತು ನಾಗೇಶ್ ಅವರನ್ನು ಸಂಸದ ಡಿ.ಕೆ.ಸುರೇಶ್ ಮತ್ತಿತರರು ಅಭಿನಂದಿಸಿದರು   

ರಾಮನಗರ: ನಗರಸಭೆಯ ನೂತನ ಅಧ್ಯಕ್ಷರಾಗಿ ಮಹ­ಮದ್ ಆರಿಫ್ ಖುರೇಷಿ ಮತ್ತು ಉಪಾ­ಧ್ಯಕ್ಷರಾಗಿ ನಾಗೇಶ್ ಆಯ್ಕೆಯಾದರು.

ಸೋಮವಾರ ನಡೆದ ಚುನಾವಣೆ­ಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಮದ್ ಆರಿಫ್ ಖುರೇಷಿ ಹಾಗೂ ಉಪಾ­ಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗೇಶ್ ತಲಾ 20 ಮತ ಪಡೆದು ಆಯ್ಕೆಯಾದರು. ಜೆಡಿಎಸ್ ಪಕ್ಷದಿಂದ ಸ್ಪರ್ಧಿ­ಸಿದ್ದ ಮಹಮದ್ ರಫೀಕ್ ಮತ್ತು ಅಬ್ದುಲ್ ಬಾಸಿದ್  11 ಮತ ಪಡೆದು ಸೋಲು ಕಂಡರು.

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಎಂ 'ಎ' ವರ್ಗಕ್ಕೆ ಮೀಸಲಾಗಿತ್ತು. ಉಪವಿಭಾಗಾ­ಧಿಕಾರಿ ಬಿ.ಎಚ್.ಸಿದ್ದಪ್ಪ ಚುನಾವಣಾಧಿ­ಕಾರಿಯಾಗಿ ಕಾರ್ಯ ನಿರ್ವಹಿಸಿದರು.

ನಗರಸಭೆಯಲ್ಲಿ ಒಟ್ಟು 31 ಸದಸ್ಯರಿದ್ದು  29 ಸದಸ್ಯರು ಚುನಾವಣೆ­ಯಲ್ಲಿ ಭಾಗವಹಿಸಿದ್ದರು. ಮೂರನೇ ವಾರ್ಡಿನ ಸುಜಾತ ಮತ್ತು 4ನೇ ವಾರ್ಡಿನ ನಾಗರಾಜ್ ಅವರು ಚುನಾ­ವಣೆ­-­­ಯಲ್ಲಿ ಗೈರು ಹಾಜರಾಗಿದ್ದರು.

ಕಳೆದ ಹತ್ತು ದಿನಗಳಿಂದ ನಡೆದ ರಾಜ­ಕೀಯ ಬೆಳವಣಿಗೆಗಳಲ್ಲಿ ಬಿಜೆಪಿಯ ಇಬ್ಬರು ಸದಸ್ಯರು ಕಾಂಗ್ರೆಸ್ಸಿಗೆ ಬೆಂಬಲ ಸೂಚಿ­ಸುವ ಮೂಲಕ ಅಚ್ಚರಿ ಮೂಡಿ­ಸಿದರು. ಇದರಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿ ಸುಲಭ­-­ವಾಗಿ ಒಲಿಯಿತು. ಸಂಸದ ಡಿ.ಕೆ.ಸುರೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಅವರು ಸಹಾ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗ­ವಹಿಸಿ ತಮ್ಮ ಮತ ಚಲಾಯಿಸಿದರು.

ಅಧ್ಯಕ್ಷ ಸ್ಥಾನಕ್ಕೆ 1ನೇ ವಾರ್ಡಿನ ಎ.ಬಿ.ಚೇತನ್ ಕುಮಾರ್, 16ನೇ ವಾರ್ಡಿನ ಮಹಮದ್ ಆರಿಫ್ ಖುರೇಷಿ ಅವರು ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದರು. ಎ.ಬಿ.ಚೇತನ್ ಕುಮಾರ್ ತಮ್ಮ ನಾಮಪತ್ರ ಹಿಂದಕ್ಕೆ ಪಡೆದರು.

ಜೆಡಿಎಸ್ ಪಕ್ಷದಿಂದ 22ನೇ ವಾರ್ಡಿ­ನಿಂದ ಆಯ್ಕೆಯಾಗಿರುವ ಮಹಮದ್ ರಫೀಕ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ­ಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ 15ನೇ ವಾರ್ಡ್‌ನ ಮಹ­ಮದ್ ಅಸ್ಲಂ ಷರೀಫ್ ಮತ್ತು 26ನೇ ವಾರ್ಡಿನ ನಾಗೇಶ್ ಅವರು ನಾಮಪತ್ರ ಸಲ್ಲಿಸಿ ನಂತರ ಮಹ­ಮದ್ ಅಸ್ಲಂ ಷರೀಫ್ ಅವರು ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದರು. ಜೆಡಿಎಸ್ ಪಕ್ಷ­ದಿಂದ 11ನೇ ವಾರ್ಡಿನನ ಅಬ್ದುಲ್ ಬಾಸಿದ್ ನಾಮಪತ್ರ ಸಲ್ಲಿಸಿದ್ದರು.

ಜಿಲ್ಲೆಯ ಅಭಿವೃದ್ಧಿಗೆ ಅನುಕೂಲ: ಜಿಲ್ಲೆಯಲ್ಲಿ ನಾಲ್ಕು ಸ್ಥಳೀಯ ಸಂಸ್ಥೆ­ಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ­ಗಳನ್ನು ಕಾಂಗ್ರೆಸ್ ಪಕ್ಷ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿ­ಯಾಗಿದೆ. ಇದರಿಂದ ಇಡಿ ಜಿಲ್ಲೆಯನ್ನು ಅಭಿ­ವೃದ್ಧಿ­­ಪಡಿಸಲು ಅನುಕೂಲವಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿ­ದರು. 

ಚುನಾವಣೆ ನಂತರ ಸುದ್ದಿ ಗೋಷ್ಠಿ­ಯಲ್ಲಿ ಮಾತ­­ನಾಡಿದ ಅವರು, ಆಯ್ಕೆ­ಯಾಗಿ­ರುವ ಎಲ್ಲಾ ಅಧ್ಯಕ್ಷ ಮತ್ತು ಉಪಾ­ಧ್ಯಕ್ಷರುಗಳಿಗೆ ಪಕ್ಷಬೇಧ ಮರೆತು ಕೆಲಸ ಮಾಡುವಂತೆ ಸೂಚಿಸ­ಲಾಗಿದೆ ಎಂದು  ತಿಳಿಸಿದರು.

ಅಭಿನಂದನೆ: ಕಾಂಗ್ರೆಸ್‌ ಮುಖಂಡ ಸಿ.ಎಂ.ಲಿಂಗಪ್ಪ, ಕೆಎಂಎಫ್ ನಿರ್ದೇಶಕ ಪಿ.ನಾಗರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಜಿಯಾಉಲ್ಲಾ, ಪ್ರಧಾನ ಕಾರ್ಯದರ್ಶಿ ಮರಿ­ದೇವರು, ಕೆಪಿಸಿಸಿ ಸದಸ್ಯ ಕೆ.ರಮೇ­ಶ್, ಕೆ.ಶೇಷಾದ್ರಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿಎನ್ಆರ್‌ ವೆಂಕಟೇಶ್, ಉಪಾಧ್ಯಕ್ಷ ಪುಟ್ಟರಾಜು ಮತ್ತು  ಕಾರ್ಯಕರ್ತರು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.