ADVERTISEMENT

ಮಾವಿಗೆ ಬೆಂಬಲ ಬೆಲೆ ಘೋಷಿಸಲಿ

ರಾಮನಗರ: ಸರಿಯಾದ ಬೆಲೆ ಸಿಗದ ಕಾರಣ ರೈತರಲ್ಲಿ ಮೂಡಿದ ಆತಂಕ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 10:50 IST
Last Updated 3 ಜೂನ್ 2018, 10:50 IST

ರಾಮನಗರ : ರಾಜ್ಯ ಸರ್ಕಾರ ಕೂಡಲೇ ಮಾವಿಗೆ ಬೆಂಬಲ ಬೆಲೆ ಘೋಷಿಸಬೇಕು. ಮುಂದಿನ ವರ್ಷದಿಂದ ಆಂದ್ರ ಮಾದರಿಯ ದರ ನಿಗದಿ ಮಾಡಬೇಕು ಎಂದು ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಹಕಾರ ಸಂಘದ ಲಿಂಗೇಗೌಡ ಒತ್ತಾಯಿಸಿದರು.

ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾವು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಾರಣರಾಗಿದ್ದಾರೆ. ಮಾವಿನ ಹೂವು ಕಚ್ಚುವ ಸಮಯದಲ್ಲಿ ತೋಟಕ್ಕೆ ಬರುವ ಅಧಿಕಾರಿಗಳು ಫಸಲು ಕಟಾವು ಮಾಡುವ ವೇಳೆಗೆ ನಾಪತ್ತೆಯಾಗುತ್ತಾರೆ. ಬೆಳೆಗಾರರಿಗೆ ಮಾವು ರಫ್ತಿನ ಬಗ್ಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ ಎಂದರು.

ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್. ಸಿದ್ದರಾಜು ಮಾತನಾಡಿ, ಮಾವು ದರ ಕುಸಿತದಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕೂಡಲೇ ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಮಾವು ಬೆಳೆಗಾರರ ರಕ್ಷಣೆಗೆ ಧಾವಿಸಬೇಕು. ಮೂರು ನಾಲ್ಕು ದಿನಗಳಿಂದ ಮಾವಿನ ಖರೀದಿ ದರ ಕುಸಿದಿದೆ. ಸರಿಯಾದ ಬೆಲೆ ಸಿಗದ ಕಾರಣ ಬೆಳೆಗಾರರು ಆತಂಕಗೊಂಡಿದ್ದಾರೆ. ಸರ್ಕಾರ ಕೂಡಲೇ ಬೆಳೆಗಾರರಿಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡುವ ಜತೆಗೆ ಬೆಂಬಲ ಬೆಲೆ ಘೋಷಿಸಿ ನೋವಿಗೆ ಸ್ಪಂದಿಸಬೇಕು ಎಂದು ಅವರು ಹೇಳಿದರು.

ADVERTISEMENT

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾವು ಬೆಳೆಗಾರರ ಕಷ್ಟಗಳನ್ನು ಅರಿತಿದ್ದಾರೆ. ಹಾಗಾಗಿ ಬೆಳೆಗಾರರ ಹಿತದೃಷ್ಟಿಯಿಂದ ಬೆಂಬಲ ಘೋಷಿಸುವುದರ ಜತೆಗೆ ಮಾವು ಸಂಸ್ಕರಣ ಘಟಕ ಸ್ಥಾಪನೆಗೂ ಗಮನ ಹರಿಸಬೇಕು ಎಂದು ತಿಳಿಸಿದರು.

ಪ್ರಗತಿಪರ ರೈತ ಬಿಳಗುಂಬ ವಾಸು ಮಾತನಾಡಿ ಕೋಲಾರ ಹೊರತು ಪಡಿಸಿದರೆ ರಾಮನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತಿದೆ. ಮಳೆ ಚೆನ್ನಾಗಿ ಸುರಿದು ಮಾವಿನ ಘಸಲು ರೈತರ ಕೈ ಹಿಡಿದಿದೆ. ಆದರೆ, ಮಾವಿನ ದರ ಕುಸಿದಿರುವುದು ದುರ್ದೈವದ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಬಾರಿ ಮಾವು ಉತ್ಪನ್ನವೂ ಹೆಚ್ಚಾಗಿದೆ. ಮೇ ತಿಂಗಳಲ್ಲಿ ಮುಗಿಯಬೇಕಿದ್ದ ಮಾವಿನ ವಹಿವಾಟು ಜೂನ್ ತಿಂಗಳಾದರೂ ನಡೆಯುತ್ತಿದೆ. ಮಾವಿಗೆ 25 ದಿನಗಳ ಹಿಂದಿದ್ದ ದರ ಇವತ್ತು ತೀರಾ ಕುಸಿದಿದೆ. ಹೀಗಾಗಿ ಬಹುತೇಕ ರೈತರು ಮಾವನ್ನು ಕಟಾವೇ ಮಾಡಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಮಾವು ಬೆಳೆಗಾರರ ಸಂಕಷ್ಟದತ್ತ ಗಮನ ಹರಿಸಬೇಕು. ಜತೆಗೆ ವಿರೋಧಪಕ್ಷವು ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಬೇಕು. ಯಾರೂ ಸಹ ರೈತರ ಪರವಾಗಿ ಧ್ವನಿ ಎತ್ತತ್ತಿರುವುದು ಆಕ್ರೋಶಕ್ಕೆ ಕಾರಣವಾಗುತ್ತಿದೆ ಎಂದರು. ಸಂಘದ ನಿರ್ದೇಶಕ ಶಿವಣ್ಣ, ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.