ADVERTISEMENT

ಮೂರು ಸಾವಿರ ಹೆಕ್ಟೇರ್‌ನಲ್ಲಿ ಹನಿ ನೀರಾವರಿ ಗುರಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 7:53 IST
Last Updated 5 ಜುಲೈ 2013, 7:53 IST

ರಾಮನಗರ: `ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಅಂದಾಜು ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ' ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ.ಬಿ.ಕೃಷ್ಣ ತಿಳಿಸಿದರು.

ತೋಟಾಗಾರಿಕೆ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಎಲ್ಲ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಬಹುದು. ಪ್ರತಿ ಎಕರೆಗೆ ಕನಿಷ್ಠ ರೂ.. 15,056ರಿಂದ ಗರಿಷ್ಠ  ರೂ..78,078 ರವರೆಗೆ ಸಹಾಯಧನ ದೊರೆಯಲಿದೆ ಎಂದು ಅವರು ಹೇಳಿದರು.

ಐದು ಎಕರೆಗೆ ಶೇ 80 ಹಾಗೂ ನಂತರದ 12 ಎಕರೆವರೆಗೆ ಶೇ 50ರಷ್ಟು ಸಹಾಯಧನವನ್ನು ರೈತರು ಪಡೆಯಬಹುದು ಎಂದು ಅವರು ವಿವರಿಸಿದರು.

ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆ ಕಾರ್ಯಗಳಿಗೆ ರೈತರು ಖರೀದಿಸಿದ ವಿವಿಧ ಯಂತ್ರೋಪಕರಣಗಳಿಗೆ ನಿಗದಿತ ದರಗಳಿಗೆ ಅನುಗುಣವಾಗಿ ಸಾಮಾನ್ಯ ವರ್ಗದವರಿಗೆ ಶೇ 50ರಷ್ಟು (ಗರಿಷ್ಠ ರೂ. 50 ಸಾವಿರ) ಹಾಗೂ ಎಸ್ಸಿ, ಎಸ್ಟಿ ಸಮುದಾಯದವರಿಗೆ ಶೇ 75ರಷ್ಟು (ರೂ. 75 ಸಾವಿರ) ಸಹಾಯಧನ ನೀಡಲು ಅವಕಾಶವಿದೆ ಎಂದರು.

ಬಾಳೆ ಮತ್ತು ತರಕಾರಿ ನಿಖರ ಬೇಸಾಯ ಯೋಜನೆಯಡಿ ಎಸ್ಸಿ, ಎಸ್ಟಿ ಸಮುದಾಯದ ಫಲಾನುಭವಿಗಳಿಗೆ ವೈಜ್ಞಾನಿಕವಾಗಿ ಬಾಳೆ ಅಥವಾ ತರಕಾರಿ ಬೆಳೆ ಬೆಳೆಯಲು ಸಹಾಯಧನ ದೊರೆಯಲಿದೆ. ಬಾಳೆ ಬೆಳೆಗೆ ಪ್ರತಿ ಎಕರೆಗೆ ರೂ. 45 ಸಾವಿರ ಮತ್ತು ತರಕಾರಿ ಬೆಳೆಗೆ ಪ್ರತಿ ಎಕರೆಗೆ ರೂ..25 ಸಾವಿರ ರೂಪಾಯಿ ದೊರೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಹೂವು ಮತ್ತು ತರಕಾರಿಗಳ ಸಂರಕ್ಷಿತ ಬೇಸಾಯ ಯೋಜನೆಯಡಿ ಪ್ರತಿ ಫಲಾನುಭವಿ ರೈತರಿಗೆ ಕನಿಷ್ಠ 1000 ಚ.ಮೀ ವಿಸ್ತೀರ್ಣದಿಂದ ಗರಿಷ್ಠ 4000 ಚ.ಮೀ ವಿಸ್ತೀರ್ಣದಲ್ಲಿ ವಾಣಿಜ್ಯ ಹೂವು ಮತ್ತು ತರಕಾರಿ ಬೆಳೆಯಲು ಪಾಲಿ ಮನೆ ನಿರ್ಮಾಣ ಮಾಡಲು ಪ್ರತಿ ಚ.ಮೀಗೆ  ರೂ..41 ಸಹಾಯಧನ ಸರ್ಕಾರದಿಂದ ದೊರೆಯಲಿದೆ. ಅಲ್ಲದೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಣ್ಣ ಮತ್ತು ದೊಡ್ಡ ಪ್ರಮಾಣದ ಸಗಟು ಮಾರುಕಟ್ಟೆ ನಿರ್ಮಾಣ ಮಾಡಲು ಖಾಸಗಿ ಸಂಘ ಸಂಸ್ಥೆಗಳಿಗೆ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಶೇ 25ರಷ್ಟು ಸಹಾಯಧನ ದೊರೆಯುತ್ತದೆ ಎಂದು ವಿವರಿಸಿದರು.

ಮಾವು ಮೇಳದಿಂದ ಹೆಚ್ಚಿದ ಆದಾಯ: ಮಾವು ಮೇಳದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಮಾವು ಬೆಳೆಗಾರ ಸಿದ್ದರಾಜು ಮಾತನಾಡಿ, `ನನ್ನ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದ ಮಾವನ್ನು ಮಾವು ಮೇಳದ ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದ್ದೇನೆ. ದಲ್ಲಾಳಿ ಅಥವಾ ಮಾರುಕಟ್ಟೆಗೆ ಮಾರಿದ್ದರೆ ನನ್ನ 6 ಟನ್ ಮಾವಿಗೆ ರೂ.. 90 ಸಾವಿರ ದೊರೆಯುತ್ತಿತ್ತು. ಆದರೆ ನಾನೇ ಸ್ವಾಭಾವಿಕವಾಗಿ ಹಣ್ಣು ಮಾಡಿ, ನೇರವಾಗಿ ಗ್ರಾಹಕರಿಗೆ ಮಾರಿದ್ದರಿಂದ ರೂ.. 3 ಲಕ್ಷ ಆದಾಯ ದೊರೆಯಿತು ಎಂದರು.

ಮತ್ತೊಬ್ಬ ಮಾವು ಬೆಳೆಗಾರ ರಾಮಕೃಷ್ಣಪ್ಪ ಮಾತನಾಡಿ, `ನನ್ನ ಐದು ಎಕರೆ ಜಮೀನಿನಲ್ಲಿ ಬೆಳೆದ ಮಾವಿಗೆ ದಲ್ಲಾಳಿಗಳು ಒಂದು ಲಕ್ಷ ಕೊಡುತ್ತಿದ್ದರು. ಆದರೆ ಈ ಬಾರಿ ನಾನೇ ಹಣ್ಣು ಮಾಡಿ ಮಾರಿದ್ದರಿಂದ ರೂ..3 ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ' ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನೊಬ್ಬ ಬೆಳೆಗಾರ ವಾಸು ಮಾತನಾಡಿ, `ನನ್ನ ಮೂರು ಎಕರೆಯಲ್ಲಿ ಬೆಳೆದಿರುವ ಮಾವಿನಿಂದ ಪ್ರತಿ ವರ್ಷ ಒಳ್ಳೆಯ ಬೆಳೆ ಆಗುತ್ತದೆ. ಈ ಬಾರಿ ಮೂರು ಲಕ್ಷ ರೂಪಾಯಿಗೆ ಮಧ್ಯವರ್ತಿಗಳು ಕೇಳಿದ್ದರು. ಕೊಡದೇ ನಾನೇ ಹಣ್ಣು ಮಾಡಿ, ಮಾರಾಟ ಮಾಡಿದ್ದರಿಂದ ಆರು ಲಕ್ಷ ರೂಪಾಯಿ ಆದಾಯ ಬಂದಿದೆ' ಎಂದು ವಿವರಿಸಿದರು.

ಮಾವು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕಬೈರೇಗೌಡ ಮಾತನಾಡಿ, ಜಿಲ್ಲೆಯ ಮಾವು ಬೆಳೆಗಾರರಿಗೆ ಸರ್ಕಾರದ ಕಡೆಯಿಂದ ಇನ್ನಷ್ಟು ಪ್ರೋತ್ಸಾಹ ಮತ್ತು ಸಹಕಾರ ದೊರೆಯಬೇಕು. ಪ್ರತಿ ಬೆಳೆಗಾರರಿಗೆ ಕಡಿಮೆ ಬೆಲೆ ಅಥವಾ ಉಚಿತವಾಗಿ `ಕ್ರೇಟ್'ಗಳನ್ನು ನೀಡಿದರೆ ಗುಣಮಟ್ಟದ ಹಣ್ಣನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದರು.

ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಸುಮಾ, ರೂಪಾ, ಲತಾ, ಹಿಂದೂ, ಸಹಾಯಕ ಅಧಿಕಾರಿಯಾದ ಶಂಕರ್, ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.