ADVERTISEMENT

ರಕ್ತಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯ ರಕ್ಷಣೆ

ಪ್ರಜಾವಾಣಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2013, 9:19 IST
Last Updated 7 ಆಗಸ್ಟ್ 2013, 9:19 IST

ರಾಮನಗರ:  ಜಿಲ್ಲೆಯ ಗೀತಾ ಮಂದಿರದಲ್ಲಿ ರಕ್ತ ಹೀನತೆಯಿಂದ ಬಳಲುತ್ತಿರುವ ಗರ್ಭಿಣಿ ಸುಶೀಲಮ್ಮ ಅವರನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕೆ.ರಾಧಾ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಆರ್.ಸಿ.ಎಚ್ ಅಧಿಕಾರಿ ಡಾ. ಸುಲೋಚನಾ, ರಕ್ಷಣಾಧಿಕಾರಿ ತಾಜುದ್ದೀನ್ ಅವರು ಭೇಟಿ ಮಾಡಿ ವೈದ್ಯಕೀಯ ಚಿಕಿತ್ಸೆ ಒದಗಿಸಿದ್ದಾರೆ.

ಇಲ್ಲಿನ ಫೀಲೇಚರಿಯಲ್ಲಿ ಹಗಲಿರುಳು ಕೂಲಿ ಮಾಡುತ್ತ ಜೀವನ ಸಾಗಿಸುತ್ತಿರುವ ಸುಶೀಲಮ್ಮ ಅವರನ್ನು ಅಧಿಕಾರಿಗಳು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ರಕ್ತ ಪರೀಕ್ಷೆಗೆ ಒಳಪಡಿಸಿದ್ದಾರೆ. ಟಿ.ಟಿ ಇಂಜೆಕ್ಷನ್ ಕೊಟ್ಟು ತಪಾಸಣೆ ನಡೆಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕೆ.ರಾಧಾ  ತಿಳಿಸಿದ್ದಾರೆ.

ಸುಶೀಲಮ್ಮ ಅವರ ಹೆರಿಗೆ ದಿನಾಂಕ ತಿಳಿಯಲು ಸ್ಕ್ಯಾನಿಂಗ್ ಮಾಡಲಾಗಿದೆ. ಈ ಮಹಿಳೆ ಗರ್ಭಿಣಿಯಾಗಿದ್ದರೂ ಇಲ್ಲಿಯತನಕ ಯಾವುದೇ ಚಿಕಿತ್ಸೆ ಪಡೆದಿಲ್ಲ. ಅಲ್ಲದೆ ಅಂಗನವಾಡಿ ಕೇಂದ್ರದಲ್ಲಿ ವಿತರಿಸುವ ಪೌಷ್ಟಿಕ ಆಹಾರವನ್ನು ತೆಗೆದುಕೊಂಡಿಲ್ಲ. ಹಾಗಾಗಿ ರಕ್ತ ಹೀನತೆ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಸುಶೀಲಮ್ಮ ಅವರ ಬಳಿ ನಾಲ್ಕು ಮಕ್ಕಳು ಇದ್ದು, ಅವು ಅಪೌಷ್ಠಿಕತೆಯಿಂದ ಬಳಲುತ್ತಿವೆ. ಇಬ್ಬರು ಮಕ್ಕಳನ್ನು ಚನ್ನಪಟ್ಟಣದಲ್ಲಿರುವ ಮಕ್ಕಳ ಆರೋಗ್ಯ ಪುನಶ್ಚೇತನ ಕೇಂದ್ರಕ್ಕೆ ದಾಖಲಿಸಲು ಹಾಗೂ ಇನ್ನಿಬ್ಬರು ಮಕ್ಕಳನ್ನು ವಸತಿ ಶಾಲೆಗೆ ಸೇರಿಸಲು ತಾಯಿಯಾದ ಸುಶೀಲಮ್ಮ ಒಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸುಶೀಲಮ್ಮಗೆ ತಾಯಿ ಕಾರ್ಡ್ ಅನ್ನು ಸ್ಥಳದಲ್ಲಿಯೇ ವಿತರಿಸಲಾಗಿದೆ. ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಿಂದ ಫಿಲೇಚೇರಿಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿ, ವಿಶ್ರಾಂತಿ ಪಡೆಯುವಂತೆ ತಿಳಿಸಲಾಗಿದೆ. ಈ ಕುಟುಂಬದವರನ್ನು ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಹಾಜರುಪಡಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಗೀತಾಮಂದಿರದ ಸುಶೀಲಮ್ಮ ಮತ್ತು ಅವರ ಮಕ್ಕಳು ಅಪೌಷ್ಟಿಕತೆ ಕೊರತೆಯಿಂದ ದಯಾನೀಯ ಸ್ಥಿತಿಯಲ್ಲಿ ಇರುವುದರ ಕುರಿತು `ಪ್ರಜಾವಾಣಿ' ಜುಲೈ 31ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.