ADVERTISEMENT

ರಾಜ್ಯಮಟ್ಟದ ಅಂಧರ ಟೂರ್ನಿ

`ಟ್ವೆಂಟಿ-20' ಕ್ರಿಕೆಟ್‌ಗೆ ಚಾಲನೆ * ಮೂರು ದಿನಗಳವರೆಗೆ ಪಂದ್ಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 9:09 IST
Last Updated 2 ಸೆಪ್ಟೆಂಬರ್ 2013, 9:09 IST
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ರಾಜ್ಯಮಟ್ಟದ ಅಂಧರ `ಟ್ವೆಂಟಿ-20' ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡ ರಾಜ್ಯದ ವಿವಿಧ ಜಿಲ್ಲೆಗಳ ತಂಡದ ಸದಸ್ಯರು
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ರಾಜ್ಯಮಟ್ಟದ ಅಂಧರ `ಟ್ವೆಂಟಿ-20' ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡ ರಾಜ್ಯದ ವಿವಿಧ ಜಿಲ್ಲೆಗಳ ತಂಡದ ಸದಸ್ಯರು   

ರಾಮನಗರ: `ಸಮರ್ಥನಂ' ಅಂಗವಿಕಲರ ಸಂಸ್ಥೆ ಮತ್ತು ಭಾರತ ಅಂಧರ ಕ್ರಿಕೆಟ್ ಸಂಸ್ಥೆ ಜಂಟಿಯಾಗಿ ಆಯೋಜಿಸಿರುವ ರಾಜ್ಯಮಟ್ಟದ ಅಂಧರ `ಟ್ವೆಂಟಿ-20' (ಎಎಸ್‌ಬಿ ಕಪ್) ಕ್ರಿಕೆಟ್ ಟೂರ್ನಿಗೆ ರಾಮನಗರದಲ್ಲಿ ಭಾನುವಾರ ಚಾಲನೆ ದೊರೆಯಿತು.

ಮೂರು ದಿನಗಳವರೆಗೆ ನಡೆಯುವ ಈ ಟೂರ್ನಿ ರಾಮನಗರದ ಜಿಲ್ಲಾ ಕ್ರೀಡಾಂಗಣ ಮತ್ತು ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಜರುಗಲಿದೆ.

ಬೆಂಗಳೂರಿನ ಎರಡು ತಂಡಗಳು, ಚಿಕ್ಕಮಗಳೂರು, ಚಿತ್ರದುರ್ಗ, ಗದಗ, ಹುಬ್ಬಳ್ಳಿ, ಮುಂಡಗೋಡ, ಬೆಳಗಾವಿ, ಧಾರವಾಡ, ರಾಮನಗರ ಮತ್ತು ಮೈಸೂರು ತಂಡಗಳು ಟೂರ್ನಿಯಲ್ಲಿ ಚಾಂಪಿಯನ್‌ಶಿಪ್‌ಗಾಗಿ ಸೆಣೆಸಾಟ ನಡೆಸಲಿವೆ.

ಟೂರ್ನಿ ಉದ್ಘಾಟಿಸಿದ ಎಎಸ್‌ಬಿ ಡೆವಲಪರ್ಸ್‌ನ ಮುಖ್ಯಸ್ಥ ಎಸ್.ಭಗೀರಥ ಮಾತನಾಡಿ, ರಾಮನಗರದಲ್ಲಿ ಇಂತಹ ಪಂದ್ಯಾವಳಿ ನಡೆಯುತ್ತಿರುವುದು ಸಂತಸ ತರಿಸಿದೆ. ಟೂರ್ನಿಗೆ ಅಗತ್ಯ ನೆರವು ನೀಡುವುದಾಗಿ' ತಿಳಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಮಹಂತೇಶ್, ಅವಕಾಶ ಕೊಟ್ಟರೆ ಅಂಧರು, ದೃಷ್ಟಿ ದೋಷ ಉಳ್ಳವರು ಎಂತಹ ಸಾಧನೆಯನ್ನಾದರೂ ಮಾಡಬಲ್ಲರು. ಅವರಿಗೆ ಅನುಕಂಪದ ಬದಲಿಗೆ ಅವಕಾಶ ಕಲ್ಪಿಸಿಕೊಡಿ' ಎಂದು ಹೇಳಿದರು.

`ರಾಜ್ಯಮಟ್ಟದಲ್ಲಿ ಚೆನ್ನಾಗಿ ಪ್ರದರ್ಶನ ತೋರಿದವರನ್ನು ವಲಯ ಮತ್ತು ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆ ಮಾಡಲಾಗುವುದು. ಅಲ್ಲದೆ ಫೆಬ್ರುವರಿಯಲ್ಲಿ ಪಾಕಿಸ್ತಾನಕ್ಕೆ ತೆರಳಲಿರುವ ಭಾರತ ತಂಡದಲ್ಲಿ ರಾಜ್ಯದ ಹೆಚ್ಚು ಆಟಗಾರರು ಪಾಲ್ಗೊಳ್ಳುವಂತೆ ಮಾಡಬೇಕು ಎಂಬ ಮಹತ್ವದ ಉದ್ದೇಶವನ್ನು ಹೊಂದಲಾಗಿದೆ' ಎಂದು ಅವರು ತಿಳಿಸಿದರು.

ಆದಿಚುಂಚನಗಿರಿಯ ರಾಮನಗರದ ಶಾಖಾಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಮಾತನಾಡಿ, `ಅಂಧರಿಗೆ ಅಂತರಂಗದ ಕಣ್ಣು ಇರುತ್ತದೆ. ಆದ್ದರಿಂದ ಅವರು ಮಹತ್ವದ ಸಾಧನೆಯನ್ನು ಮಾಡಬಲ್ಲರು. ಅವರಿಗೆ ಅಗತ್ಯವಿರುವುದು ಪ್ರೋತ್ಸಾಹ ಮತ್ತು ಅವಕಾಶ ಅಷ್ಟೇ' ಎಂದರು.

ಸಂಸ್ಥೆಯ ಅಧ್ಯಕ್ಷ ಎಸ್.ಪಿ.ನಾಗೇಶ್ ಸ್ವಾಗತಿಸಿದರು. ನಟಿ ಶುಭಾ ಪೂಂಜ, ಬಸವೇಶ್ವರನಗರದ ಲಯನ್ಸ್ ಕ್ಲಬ್‌ನ ನಾಗರಾಜ್, ಪುರುಷೋತ್ತಮ್, ನಿರಂಜನ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.