ADVERTISEMENT

ರಾಮನಗರಕ್ಕೆ ಗಾಂಧಿ ಬಂದು ಹೋಗಲು ಕಾರಣರಾದ ಗಾಂಧೀ ಕೃಷ್ಣಯ್ಯನವರನ್ನು ಮರೆತ ಜನತೆ !

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 10:19 IST
Last Updated 1 ಅಕ್ಟೋಬರ್ 2017, 10:19 IST
ರಾಮನಗರದ ಗಾಂಧೀ ಎಂದು ಖ್ಯಾತಿಯಾಗಿದ್ದ ಕೃಷ್ಣಯ್ಯ
ರಾಮನಗರದ ಗಾಂಧೀ ಎಂದು ಖ್ಯಾತಿಯಾಗಿದ್ದ ಕೃಷ್ಣಯ್ಯ   

ರಾಮನಗರ: ನಗರದಲ್ಲಿ ಒಂದು ಮಹಾತ್ಮಗಾಂಧೀ ರಸ್ತೆ (ಎಂಜಿ ರಸ್ತೆ) ಇದೆ. ಈ ರಸ್ತೆಗೆ ಈ ಹೆಸರನ್ನು ಏಕೆ ಇಟ್ಟರು ಎಂಬುದನ್ನು ಹುಡುಕುತ್ತಾ ಹೋದರೆ, ಇಲ್ಲಿ ಒಬ್ಬ ವ್ಯಕ್ತಿಯ ಹೆಸರು ಕೇಳಿ ಬರುತ್ತದೆ. ಆ ಹೆಸರು ಗಾಂಧಿ ಕೃಷ್ಣಯ್ಯ.

ಗಾಂಧಿ ಕೃಷ್ಣಯ್ಯ ಅವರು ಗಾಂಧೀ ಸಂಬಂಧಿ ಅಲ್ಲ. ಆದರೆ ಗಾಂಧೀ ಹಾಗೂ ಕೃಷ್ಣಯ್ಯ ಅವರಲ್ಲಿ ಸ್ನೇಹ ಸಂಬಂಧ ಇತ್ತು. ಗಾಂಧೀ ಕ್ಲೋಸ್‌ಪೇಟೆ (ಇಂದಿನ ರಾಮನಗರ) ಬರುವ ಮೊದಲು ಜನ ಇವರನ್ನು ಕೃಷ್ಣಯ್ಯ ಅಂತಲೆ ಕರೆಯುತ್ತಿದ್ದರು. ಗಾಂಧೀ ಬಂದು ಹೋದ ಮೇಲೆ ಇವರು ಗಾಂಧಿಕೃಷ್ಣಯ್ಯರಾದರು.

ಗಾಂಧೀ ರಾಮನಗರಕ್ಕೆ ಬರಲು ಇವರೇ ಕಾರಣಕರ್ತರು. ಆದರೆ ಇವತ್ತು ಇತಿಹಾಸದಲ್ಲಿ ಮಾತ್ರ ಕೃಷ್ಣಯ್ಯನವರಿದ್ದಾರೆ ಹೊರತು, ರಾಮನಗರದಲ್ಲಿ ಇವರನ್ನು ಗುರುತಿಸುವ ಯಾವ ಕುರುಹುಗಳೂ ಇಲ್ಲ. ಗಾಂಧಿ ಉಳಿದುಕೊಂಡಿದ್ದ ಕೃಷ್ಣಯ್ಯನವರ ಮನೆ ಇವತ್ತು ಮಂಗಳೂರು ನರ್ಸಿಂಗ್‌ ಹೋಂ ಆಗಿ ಮಾರ್ಪಾಟಾಗಿದೆ.

ADVERTISEMENT

ಪರಿಚಯ: ಕೃಷ್ಣಯ್ಯನವರು ವೃತ್ತಿಯಲ್ಲಿ ಶಿಕ್ಷಕರು. ಗಾಂಧೀವಾದದಲ್ಲಿ ನಂಬಿಕೆ ಇಟ್ಟಿದ್ದರು. ಗಾಂಧೀಯಂತೆಯೇ ಬದುಕುತ್ತಿದ್ದರು. ಅನಿಬೆಸೆಂಟರ ಹೋಂ ರೋಲ್‌ ಚಳವಳಿಯಲ್ಲಿ ಭಾಗವಹಿಸಿದ್ದರು. ಹೆಡ್‌ಮಾಸ್ಟರ್‌ ಆಗಿದ್ದ ಕೃಷ್ಣಯ್ಯ ವೃತ್ತಿಗೆ ರಾಜೀನಾಮೆ ನೀಡಿ ಚಳವಳಿಯಲ್ಲಿ ಭಾಗವಹಿಸಿದರು. ಅಂದಿನಿಂದ ಇವರನ್ನು ಗಾಂಧೀ ಕೃಷ್ಣಯ್ಯ ಅಂತ ಹೆಸರಾದರು.

ಚಳವಳಿ ಬದುಕಿನ ತಿರುವಾಯಿತು. 1923ರಿಂದ ಮಹತ್ಮಾಗಾಂಧೀ, ಮೊಹಮದಾಲಿ ಜಿನ್ನ, ಶೌಕತ್‌ ಆಲಿ (ಮೊಹಮದಾಲಿ ಜಿನ್ನ, ಶೌಕತ್‌ ಆಲಿ)ಸಹೋದರರು ಇವರ ಮನೆಗೆ ಬಂದು ಹೋದರು. ಮಹಮದಾಲಿ ಜಿನ್ನ ಎರಡು ಸಲ ಇವರ ಮನೆಗೆ ವಾಸ್ತವ್ಯ ಹೂಡಿದ್ದಾರೆ. ಗಾಂಧೀಜಿ ಇಲ್ಲಿಗೆ ಬಂದಾಗ ಅವರ ಜತೆ ಇಡೀ ಕರ್ನಾಟಕ ಸುತ್ತಿದವರು ಕೃಷ್ಣಯ್ಯ.

ಕ್ಲೋಸ್‌ಪೇಟೆಯಲ್ಲಿ ನೂಲುದಾರರ ಸಂಘ ಮತ್ತು ವಾಚಕಶಾಲೆಯ ಸಮಾರಂಭದಲ್ಲಿ ಗಾಂಧೀಜಿ ಭಾಗವಹಿಸಿದ್ದರು. ಮಂದಿರವೊಂದನ್ನು ಕೃಷ್ಣಯ್ಯನವರು ನೂಲುದಾರರಿಗೆ ಕೊಡುಗೆಯಾಗಿ ಕೊಟ್ಟರು. ಈ ಬಗ್ಗೆ ಕ್ಲೋಸ್‌ಪೇಟೆಯ ನಿವಾಸಿಗಳು ಗಾಂಧೀಜಿಯವರಿಗೆ ಪತ್ರದ ಕೃಷ್ಣಯ್ಯನವರ ಉದಾರತೆಯ ಬಗ್ಗೆ ಗಾಂಧೀಜಿಯವರಿಗೆ ತಿಳಿಸಿದ್ದಾರೆ.

ಗಾಂಧೀಜಿಯ ಒಡನಾಟ ದೊರಕಿದ ಮೇಲೆ ಅವರ ಪ್ರಭಾವ ಹೆಚ್ಚಾಗುತ್ತಾ ಹೋಯಿತು. ರಾಮನಗರದ ಮನೆಯಲ್ಲಿ ಚರಕ ಇಟ್ಟು ನೇಯಲು ಶುರುಮಾಡಿದರು. ಖಾದಿ ಬಟ್ಟೆ ಧರಿಸುತ್ತಿದ್ದರು. ಜನತಾ ಸಮಾಜವಾದದ ಅನುಯಾಯಿಗಳಾದರು.

ಅನಾರೋಗ್ಯದ ನಿಮ್ಮಿತ್ತ ಇಹಲೋಕ ತ್ಯಜಿಸಿದ ಮೇಲೆ ಇವರ ಮಗ ವಿ.ಕೆ. ಮೋಹನ್‌ರಾಜ್‌ ತಂದೆಯ ಹಾದಿ ತುಳಿದರು. ರಾಷ್ಟ್ರೀಯ ಆಂದೋಲನದಲ್ಲಿ ಭಾಗವಹಿಸಿದರು. ಮೋಹನ್‌ ರಾಜ್‌ ಇವರು ಸಂವಿಧಾನ ರಚನೆಯ ಸಂದರ್ಭದಲ್ಲಿ ಅನೇಕ ಸಲಹೆಗಳನ್ನು ನೀಡಿದ್ದಾರೆ. ಅನೇಕ ಸಲಹೆಗಳು ಜಾರಿಯಾಗಿದೆ ಕೂಡ. ಈಗ ಇವರ ವಂಶದಲ್ಲಿ ಉಳಿದಿರುವವರು ಒಬ್ಬರೇ ಅವರೇ ಟಿ.ಎನ್‌. ಧ್ರುವಕುಮಾರ್‌, ಗೋವಾ ಮತ್ತು ಕರ್ನಾಟಕ ವಿಧಾನಸಭೆ ನಿವೃತ್ತ ಕಾರ್ಯದರ್ಶಿಯಾಗಿದ್ದರು.

ಇಷ್ಟಾದರೂ ಈ ತಲೆಮಾರಿಗೆ ಗಾಂಧೀ ಕೃಷ್ಣಯ್ಯನವರ ಬಗ್ಗೆಯಾಗಲೀ, ಗಾಂಧೀಜಿಯವರು ಅವರ ಮನೆಗೆ ಬಂದು ಹೋದ ಬಗ್ಗೆಯಾಗಲೀ ಯಾರಿಗೂ ತಿಳಿದಿಲ್ಲ. ತಿಳಿಸುವ ಪ್ರಯತ್ನ ಮಾಡಿಲ್ಲ. ಕ್ಲೋಸ್‌ಪೇಟ್‌ಗೆ ಗಾಂಧೀಜಿ ಬಂದು ಹೋದ ಮೇಲೆ ಅಲ್ಲಿ ಮಹಾತ್ಮ ಗಾಂಧೀಜಿ ರಸ್ತೆ (ಎಂ.ಜಿ ರಸ್ತೆ) ಹೆಸರು ಇಟ್ಟಿದ್ದಾರೆ.

‘ರಾಮನಗರಕ್ಕೆ ಗಾಂಧಿ ಬಂದು ಹೋಗಲು ಮೂಲ ಕಾರಣ ಕರ್ತರಾದ ಗಾಂಧೀ ಕೃಷ್ಣಯ್ಯನವರ ಹೆಸರನ್ನು ಹೇಳುವ ಯಾವುದೇ ಕೆಲಸ ನಗರದಲ್ಲಿ ಆಗಿಲ್ಲ. ಕನಿಷ್ಟ ಒಂದು ರಸ್ತೆಗಾದರೂ ಇವರ ಹೆಸರನ್ನು ಇಡಬಹುದಿತ್ತಲ್ಲವೆ’ ಎಂದು ಸಂಗೀತ ವಿದ್ವಾನ್‌ ಶಿವಾಜಿರಾವ್‌ ಪ್ರಶ್ನಿಸುತ್ತಾರೆ.

‘ಮೊದಲು ಎಂ.ಜಿ. ರಸ್ತೆಯೆ ಮೈಸೂರಿಗೆ ಹೋಗುವ ರಸ್ತೆಯಾಗಿತ್ತು. ನಮ್ಮ ತಾತ ಸಿಪಾಯಿರಾಮ್‌ರಾವ್‌ ಅವರು ಗಾಂಧೀಜಿ ರಾಮನಗರಕ್ಕೆ ಭೇಟಿ, ಭಾಷಣ ಮಾಡಿದ್ದನ್ನು ಹೇಳುತ್ತಿದ್ದರು. ಗಾಂಧಿ ಅವರು ಭಾಷಣ ಮಾಡಿದ ಜಾಗ ಇಂದು ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರವಾಗಿದೆ. ಇನ್ನೊಂದು ಸ್ಥಳ ಈಗ ನಗರಸಭೆ ವಾಣಿಜ್ಯ ಸಂಕೀರ್ಣ (ಮೊದಲು ಗಾಂಧೀ ಪಾರ್ಕ್‌)ವಾಗಿದೆ’. ನಗರ ವ್ಯಾಪ್ತಿಯಲ್ಲಿ ಗಾಂಧೀಕೃಷ್ಣಯ್ಯ ಅವರನ್ನು ನೆನಪಿಸಿಕೊಳ್ಳುವ ಆಗೆ ರಸ್ತೆಗೆ, ಇಲ್ಲವೆ ವೃತ್ತಕ್ಕೆ ಹೆಸರಿಡಬೇಕು’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.