ADVERTISEMENT

ವರ್ತನೆ ಹದ್ದು ಮೀರಿದರೆ ಪ್ರತಿಭಟನೆ: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:30 IST
Last Updated 14 ಫೆಬ್ರುವರಿ 2011, 18:30 IST

ಚನ್ನಪಟ್ಟಣ:  ಮತಿಭ್ರಮಣೆಯಾದವರಂತೆ ಕಾಂಗ್ರೆಸ್ ನಾಯಕರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ವರ್ತನೆಗೆ ಕಡಿವಾಣ ಹಾಕಿಕೊಳ್ಳದಿದ್ದಲ್ಲಿ ಉಗ್ರಹೋರಾಟ ನಡೆಸ ಬೇಕಾಗುತ್ತದೆ ಎಂದು ಇಲ್ಲಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಎಚ್ಚರಿಸಿದೆ.

ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕುಮಾರಸ್ವಾಮಿ ಅವರು ‘ದಾರಿತಪ್ಪಿದ ಮಗ’ ಎಂದು ಕರೆದಿರುವುದು ಅವರ ಹತಾಶ ಮನಸ್ಥಿತಿ ಸೂಚಿಸುತ್ತದೆ. ಅಧಿಕಾರ ಹಿಡಿಯುವ ಸಲುವಾಗಿ ಈ ಹಿಂದೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ನಂತರ ಕೈಕೊಟ್ಟರು. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲು ಅನುಕೂಲವಾಯಿತು.

ಇಂತಹ ಪಾಪದ ಕೊಡುಗೆಯನ್ನು ರಾಜ್ಯದ ಜನತೆಗೆ ನೀಡಿರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಜಿಯಾವುಲ್ಲಾ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎ.ಮಂಜುನಾಥ್, ಮಹಿಳಾ ಅಧ್ಯಕ್ಷೆ ಪದ್ಮ ಕೃಷ್ಣಯ್ಯ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿಯಾಗಿದ್ದಾಗ ರಾಮನಗರ ಜಿಲ್ಲೆಯಲ್ಲಿ ಅಕ್ರಮವಾಗಿ 25,000 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿ ರೈತರ ಬದುಕಿನ ಮೇಲೆ ಬಂಡೆ ಎಳೆದಿದ್ದ ಕುಮಾರಸ್ವಾಮಿ, ಕಟ್ಟಾಸುಬ್ರಮಣ್ಯ ನಾಯ್ಡು ಅವರೊಂದಿಗೆ ಷಾಮೀಲಾಗಿ 150 ಎಕರೆ ಜಮೀನನ್ನು ಪ್ರಭಾವಿ ಬಿಲ್ಡರ್‌ರೊಬ್ಬರಿಗೆ ಅನುಕೂಲ ಮಾಡಿಕೊಡಲು ಡಿನೋಟಿಫೈ ಮಾಡಿದ್ದರು.

ಗೌಡರ ಕುಟುಂಬದವರಿಗೆ ಅಧಿಕಾರದ ದಾಹ ಹೆಚ್ಚಿದ್ದು ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರದ ಖಾಲಿ ಸ್ಥಾನವನ್ನು ಆಕ್ರಮಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ. ಚುಂಚನಗಿರಿ ಮಠದಲ್ಲೂ ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಪೀಠದಲ್ಲಿ ಕೂರಿಸುವ ಕುತಂತ್ರವೂ ಅವರುಗಳಿಂದ ನಡೆಯುತ್ತಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎ.ಮಂಜುನಾಥ್ ಆರೋಪಿಸಿದರು.

ದೇವೇಗೌಡರ ಕುಟುಂಬದವರು ಸ್ವಾರ್ಥಕ್ಕಾಗಿ ಯಾವುದೇ ರೀತಿಯ ಕುತಂತ್ರಗಳನ್ನು ಮಾಡಲು ಹಿಂಜರಿಯುವುದಿಲ್ಲ.ಈಗ ಅಣ್ಣ ಎಂದು ಕರೆಯುತ್ತಿರುವ ಪಿ.ಜಿ.ಆರ್.ಸಿಂಧ್ಯಾ ಅವರಿಗೆ ಎಂತಹ ದ್ರೋಹ ಎಸಗಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಅಪ್ಪ-ಮಕ್ಕಳನ್ನು ಶಾಶ್ವತವಾಗಿ ಮನೆಗೆ ಕಳುಹಿಸಲು ರಾಜ್ಯದ ಜನತೆ ಈಗಾಗಲೇ ತೀರ್ಮಾನಿಸಿದ್ದಾರೆ ಎಂದು ಅವರು ಹೇಳಿದರು.

ಜಾತ್ಯತೀತೆಯ ಬಗ್ಗೆ ಮಾತನಾಡುತ್ತಲೇ ಜನಾಂಗಗಳಲ್ಲಿ ಬಿರುಕು ಮೂಡಿಸುವುದು ಜೆಡಿಎಸ್ ಧುರೀಣರ ಚಟವಾಗಿದೆ.ಬೆಟ್ಟದೆತ್ತರದ ತಪ್ಪುಗಳನ್ನು ಮಾಡಿ, ಇದೀಗ ಕಾಂಗ್ರೆಸ್ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಕುಮಾರಸ್ವಾಮಿ ಮಾತನಾಡುತ್ತಿರುವುದು ಅವರ ಘನತೆಗೆ ತಕ್ಕುದಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಜಿಯಾವುಲ್ಲಾ ತಿಳಿಸಿದರು.

ಒಂದೆಡೆ ಬಿಜೆಪಿ ಹಾಗೂ ಮುಖ್ಯಮಂತ್ರಿ ಅವರ ಮೇಲೆ ಆರೋಪ ಮಾಡುತ್ತಾ, ಇನ್ನೊಂದೆಡೆ ಮೈಸೂರು ಜಿ.ಪಂ.ನಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್‌ನವರು ಒಳಒಪ್ಪಂದ ಮಾಡಿಕೊಂಡಿರುವುದೇ ಆ ಪಕ್ಷದ ಡಬಲ್ ಗೇಮ್ ನೀತಿಗೆ ಸಾಕ್ಷಿ ಎಂದು ಅವರು ಹೇಳಿದರು. ಮಂಗಳವಾರದಿಂದ ಜಿಲ್ಲೆಯಾದ್ಯಂತ ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಆರ್.ಎಂ.ಮಲವೇಗೌಡ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ.ರಾಜು, ತಾ.ಪಂ.ಮಾಜಿ ಅಧ್ಯಕ್ಷರಾದ ಎ.ಸಿ.ವೀರೇಗೌಡ, ಶಿವಮಾದು, ಕಾಂಗ್ರೆಸ್ ಮುಖಂಡರಾದ ಚಂದ್ರಕಾಂತ್, ಡಿ.ಕೆ. ಕಾಂತರಾಜು ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.