ADVERTISEMENT

ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿ: ಶಾಸಕರ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ರಾಮನಗರ: ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು, ಸಂಸ್ಕಾರವನ್ನು ರೂಢಿಸುವ ನಿಟ್ಟಿನಲ್ಲಿ ನಾಡಿನ ಕೆಲ ಖಾಸಗಿ ಶಾಲೆಗಳ ಶ್ರಮಪಡುತ್ತಿವೆ ಎಂದು ಶಾಸಕ ಕೆ.ರಾಜು ಶ್ಲಾಘಿಸಿದರು.

ನಗರದ ಹೋಲಿ ಕ್ರೆಸೆಂಟ್ ಆಂಗ್ಲ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಾಲೆಯ 20ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಪ್ರಪಂಚದ ಪೈಪೋಟಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿಯೂ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಪ್ರಹ್ಲಾದ ಗೌಡ ಮಾತನಾಡಿ, ಸಾಕ್ಷರತೆ ಸಾಧನೆಗೆ ಸರ್ಕಾರದ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಸಹಕರಿಸುತ್ತಿವೆ ಎಂದರು.

 ರಾಜ್ಯ ಅಲ್ಪಸಂಖ್ಯಾತ ಇಲಾಖೆಯ ಕಾರ್ಯದರ್ಶಿ ಸೈಯದ್ ಜಮೀರ್ ಪಾಷಾ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ಕ್ಷೇತ್ರಕ್ಕೆ ಖಾಸಗಿ ಶಾಲೆಗಳ ಕೊಡುಗೆ ಸ್ತುತ್ಯಾರ್ಹ,  ವಿದ್ಯೆ ಇಲ್ಲದಿದ್ದರೆ ಒಳ್ಳೆಯ ನಾಗರಿಕನಾಗಲು ಸಾಧ್ಯವಿಲ್ಲ.

ಆದ್ದರಿಂದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಬೇಕು ಎಂದರು. ಸರ್ವ ಶಿಕ್ಷಣ ಅಭಿಯಾನದ ಹಣದ ಸಂಪೂರ್ಣ ಬಳಕೆಗೆ ನಮ್ಮ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇನ್ನಷ್ಟು ಶ್ರಮಿಸಬೇಕಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಮರಿದೇವರು ಮಾತನಾಡಿದರು. ರಾಮನಗರ ಕ್ಷೇತ್ರ ಶಿಕ್ಷಣಧಿಕಾರಿ ಎಂ.ಪಿ.ಮಾದೇಗೌಡ, ನಗರಸಭಾ ಸದಸ್ಯ ಬಾಬು ಸೇಠ್, ಎಂ.ಎಂ.ಯು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೈಯದ್ ತಲ್ಹಾ ಉಪಸ್ಥಿತರಿದ್ದರು.

ಸ್ಟಾನ್ಲಿ ಪಾಲ್ ಸ್ವಾಗತಿಸಿದರು. ಆಡಳಿತಾಧಿಕಾರಿ ಷಾಜಿಯ ಮತ್ತು  ಮುಖ್ಯ ಶಿಕ್ಷಕಿ ಸವಿತಾ ಸುಬ್ರಹ್ಮಣ್ಯ ಶಾಲಾವರದಿ ಓದಿದರು. ಶಾಲೆಯ ಅಧ್ಯಕ್ಷೆ ದಿಲಷದ್ ಬೇಗಂ ಉಪಸ್ಥಿತರಿದ್ದರು.  ದೈಹಿಕ ಶಿಕ್ಷಕ ನಾರಾಯಣ್ ನಿರೂಪಿಸಿದರು. ಶಾಲೆಯ ಕಾರ್ಯದರ್ಶಿ ಅಲ್ತಾಫ್ ಆಹಮದ್ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.