ADVERTISEMENT

ವಿವಿಧ ಪ್ರಕರಣಗಳ ಪತ್ತೆ 12 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2012, 12:35 IST
Last Updated 1 ನವೆಂಬರ್ 2012, 12:35 IST

ರಾಮನಗರ: ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ವರದಿಯಾಗಿದ್ದ ಒಂದು ಕೊಲೆ ಪ್ರಕರಣ ಸೇರಿದಂತೆ ಆರು ಪ್ರಮುಖ ಪ್ರಕರಣಗಳನ್ನು ಪತ್ತೆ ಮಾಡಿ, 12 ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ ಅವರಿಂದ ಸುಮಾರು 12 ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಾಂಜನೇಯ ಬಡಾವಣೆಯಲ್ಲಿ ಸೆಪ್ಟೆಂಬರ್ 3ರಂದು ನಡೆದಿದ್ದ ಅರುಣ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸುದೇವ ಉರುಫ್ ವಾಸು, ಸ್ವಾಮಿ ಹಾಗೂ ಪೃಥ್ವಿಕೃಷ್ಣ ಉರುಫ್ ಪೃಥ್ವಿಯನ್ನು ಬಂಧಿಸಲಾಗಿತ್ತು. ಇವರನ್ನು ವಿಚಾರಣೆ ನಡೆಸಿದ ನಂತರ ವಿನಯ್ ಮತ್ತು ಅಭಿ ಎಂಬ ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದ್ದು, ಅವರಿಂದ ಕೃತ್ಯಕ್ಕೆ ಬಳಿಸಿದ್ದ ಎರಡು ಲಾಂಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಈ ಕೃತ್ಯದಲ್ಲಿ ಪಾಲ್ಗೊಂಡಿದ್ದ ಶ್ರೀಧರ್ ಎಂಬ ಆರೋಪಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಜಾಲ ಬೀಸಲಾಗಿದೆ ಎಂದರು.

ಇದೇ ಠಾಣಾ ವ್ಯಾಪ್ತಿಯಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಕಾಪರ್ ವೈರ್‌ಗಳು ಕಳುವಾಗುತ್ತಿವೆ ಎಂಬ ದೂರು ಆಗಸ್ಟ್‌ನಲ್ಲಿ ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸಿ ಶಿವರಾಜ್, ವೆಂಕಟೇಶ್ ಅವರನ್ನು ಬಂಧಿಸಲಾಗಿತ್ತು. ಇದೀಗ ಮಣಿಕಂಠ, ಮಂಜುನಾಥ್, ಸಂತೋಷ್, ರಾಜೇಶ್ ಅವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 152 ತಾಮ್ರದ ಗಟ್ಟಿ ಪೀಸುಗಳ (ಸುಮಾರು 800 ಕೆ.ಜಿ) ತಾಮ್ರವನ್ನು (ಅಂದಾಜು ರೂ 5 ಲಕ್ಷ) ಹಾಗೂ ಈ ಕೃತ್ಯಗಳಿಗೆ ಅವರು ಬಳಸುತ್ತಿದ್ದ ಟಾಟಾ ಇಂಡಿಕಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 22ರಂದು ಮಧ್ಯಾಹ್ನ ನಡೆದಿದ್ದ ಚೈನು ಕಳವು ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. ಆರೋಪಿಗಳಾದ ಪ್ರತಾಪ್ ರೆಡ್ಡಿ, ರವಿ ಎಂಬುವರನ್ನು ಬಂಧಿಸಿ 46 ಗ್ರಾಂ ಚಿನ್ನದ ಚೈನ್ ಹಾಗೂ ಮೋಟಾರು ಬೈಕ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಕಳೆದ 25ರಂದು ರಷ್ಯಾದ ಲ್ಯೂಡ್‌ಮಿಲಾ ಮತ್ತು ಕ್ಸೆನಿಯಾ ಅವರನ್ನು ರವಿಶಂಕರ್ ಗುರೂಜಿ ಆಶ್ರಮದ ಬಳಿ ದುಷ್ಕರ್ಮಿಗಳು ದಾಳಿ ಮಾಡಿ, ಕೆನನ್ ಡಿಜಿಟಲ್ ಕ್ಯಾಮೆರಾ, ವಜ್ರದ ಹರಳಿನ ಚಿನ್ನದ ಉಂಗುರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣವನ್ನು ಪತ್ತೆ ಹಚ್ಚಲಾಗಿದ್ದು, ಶಿವಕುಮಾರ್ ಮತ್ತು ಮಾಸ್ತೀಗೌಡ ಎಂಬ ಆರೋಪಿಗಳನ್ನು ಬಂಧಿಸಿ, ಕ್ಯಾಮೆರಾ ಮತ್ತು ವಜ್ರದ ಹರಳಿನ ಚಿನ್ನದ ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅನುಪಮ್ ಅಗ್ರವಾಲ್ ಹೇಳಿದರು. ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಳೆದ 22ರಂದು ಬೈಕ್‌ನಲ್ಲಿ ಸಾಗುತ್ತಿದ್ದ ದಂಪತಿಗಳನ್ನು ಅಡ್ಡ ಹಾಕಿ, ಕಣ್ಣಿಗೆ ಕಾರದ ಪುಡಿ ಎರಚಿ, ಚಾಕು ತೋರಿಸಿ ಬೆದರಿಸಿ ಅವರಿಂದ ಚಿನ್ನದ ಮಾಂಗಲ್ಯ ಸರ, ಮೊಬೈಲ್ ಅನ್ನು ಕಿತ್ತು ಪರಾರಿಯಾಗಿದ್ದ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಈ ಸಂಬಂಧ ನವೀನ್, ಚೇತನ್ ಮತ್ತು ರವೀಶ್ ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.

ಇದೇ ಠಾಣಾ ವ್ಯಾಪ್ತಿಯಲ್ಲಿ ಜುಲೈನಲ್ಲಿ ನಡೆದಿದ್ದ ಆ್ಯಸಿಡ್ ಪ್ರಕರಣವನ್ನು ಪತ್ತೆ ಮಾಡಲಾಗಿದೆ. ಕನಕಪುರದ ರತ್ನಮ್ಮ ಎಂಬವವರಿಗೆ ನೀಡಬೇಕಾದ ಸಾಲದ ಹಣ ನೀಡುವುದಾಗಿ ಹೇಳಿ ಬಿಳಿಕಲ್ ಬೆಟ್ಟದ ಬಳಿ ರತ್ನಮ್ಮ ಅವರಿಗೆ ಆ್ಯಸಿಡ್ ಎರಚಿ, ಚಿನ್ನದ ಚೈನು, ಕಾಸಿನ ಸರ, ತಾಳಿ ಕಿತ್ತುಕೊಂಡು ಪರಾರಿಯಾಗಿದ್ದ ಮಂಜುನಾಥ್‌ನನ್ನು ಬುಧವಾರ ಬಂಧಿಸಲಾಗಿದೆ. ಆತನಿಂದ 90 ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ಎಸ್.ಪಿ ಮಾಹಿತಿ ನೀಡಿದರು. ಪ್ರಕರಣ ಭೇದಿಸಿದ ಪೊಲೀಸರಿಗೆ ಬಹುಮಾನ ನೀಡಲಾಗುವುದು ಎಂದು ಎಸ್.ಪಿ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.