ADVERTISEMENT

ವೃತ್ತಿ ಶಿಕ್ಷಣ: ಸರ್ಕಾರಿ ಕೋಟಾ ರದ್ಧತಿಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 10:04 IST
Last Updated 20 ಡಿಸೆಂಬರ್ 2013, 10:04 IST

ಚನ್ನಪಟ್ಟಣ: ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಖಾಸಗಿ ವೃತ್ತಿಪರ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ರದ್ದುಪಡಿಸಿರುವ ಕ್ರಮವನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಗುರುವಾರ ಪಟ್ಟಣ ದಲ್ಲಿ ರಸ್ತೆ ತಡೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಗಾಂಧಿ ಭವನದಿಂದ ಹೊರಟು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಖಾಸಗಿ ಬಸ್ ನಿಲ್ದಾಣದ ಬಳಿ ರಸ್ತೆತಡೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ವೇದಿಕೆಯ ತಾಲ್ಲೂಕು ಅಧ್ಯಕ್ಷ ಯೋಗೀ ಶ್‌ಗೌಡ ಮಾತನಾಡಿ, ‘ಕೆಇಎ ವತಿ ಯಿಂದ ನಡೆಸುತ್ತಿದ್ದ ಸಿಇಟಿ ಪರೀಕ್ಷೆ ಯಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳ ಆಧಾರದಲ್ಲಿ ಖಾಸಗಿ ಕಾಲೇ ಜುಗಳಲ್ಲಿ ಸರ್ಕಾರಿ ಕೋಟಾದಡಿ ಸೀಟು ಸಿಗುತ್ತಿತ್ತು. ಈಗ ಸರ್ಕಾರ ಜಾರಿಗೆ ತಂದಿರುವ ನೂತನ ಕಾಯ್ದೆಯಿಂದಾಗಿ ಸರ್ಕಾರಿ ಸೀಟುಗಳು ರದ್ದಾಗಲಿವೆ. ಇದರಿಂದ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಮುಂತಾದ ವೃತ್ತಿಪರ ಶಿಕ್ಷಣ ಮಾಡುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ’ ಎಂದರು.

‘ಈ ಹಿಂದೆ ಇದ್ದ ಸರ್ಕಾರಿ ಕೋಟಾದ ಸೀಟುಗಳಿಂದಾಗಿ  ಅದೆಷ್ಟೋ ಗ್ರಾಮೀಣ ಪ್ರದೇಶದ  ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣ ಪಡೆಯುವಂತಾಗಿತ್ತು. ಸರ್ಕಾ ರದ ಹೊಸ ನೀತಿಯಿಂದಾಗಿ ಬಡ ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ದುಬಾರಿ ಶುಲ್ಕ ನೀಡಿ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವುದು ಕಷ್ಟಕರ ವಾಗಿದ್ದು, ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಿ ಹೊಸ ಕಾಯ್ದೆಯನ್ನು ರದ್ದುಪಡಿಸಬೇಕು. ಶೀಘ್ರ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಯೋಗೀಶ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ಖಾಸಗಿ ವೃತ್ತಿಪರ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ರದ್ದಾಗಿರುವುದರಿಂದ ಬಡವರು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿ ಗಳಿಗೆ ತೊಂದರೆಯಾಗಲಿದೆ. ಸರ್ಕಾರ ಈ ನೀತಿಯನ್ನು ರದ್ದುಗೊಳಿಸಿ ಗ್ರಾಮೀಣ ಪ್ರದೇಶದ ಬಡ ವಿದ್ಯಾ ರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಮಂಗ ಳಮ್ಮ, ರಾಜ್ಯ ಉಪಾಧ್ಯಕ್ಷ ಮರಂಕೇ ಗೌಡ, ಪದಾಧಿಕಾರಿಗಳಾದ ಶಂಕರ್, ನಿಂಗೇಗೌಡ, ಕೃಷ್ಣೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಧರಣೀಶ್ ಹಾಗೂ ವಿದ್ಯಾರ್ಥಿಗಳು ಭಾಗವಹಿ ಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.