ADVERTISEMENT

ಹೊಂಡ ತಪ್ಪಿಸಲು ಚಾಲಕರ ಪರದಾಟ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 9:13 IST
Last Updated 24 ಅಕ್ಟೋಬರ್ 2017, 9:13 IST
ರಾಷ್ಟ್ರೀಯ ಹೆದ್ದಾರಿ 209 ರಸ್ತೆಯ ದೊಡ್ಡ ಗುಂಡಿ ತಪ್ಪಿಸಲು ವಾಹನ ಚಾಲಕರು ಪರದಾಡುತ್ತಿದ್ದಾರೆ
ರಾಷ್ಟ್ರೀಯ ಹೆದ್ದಾರಿ 209 ರಸ್ತೆಯ ದೊಡ್ಡ ಗುಂಡಿ ತಪ್ಪಿಸಲು ವಾಹನ ಚಾಲಕರು ಪರದಾಡುತ್ತಿದ್ದಾರೆ   

ಸಾತನೂರು (ಕನಕಪುರ): ರಸ್ತೆಯಲ್ಲಿ ಗುಂಡಿಯಿರುವುದು ಗೊತ್ತಾಗದೆ ವೇಗವಾಗಿ ಚಲಿಸಿ ಗುಂಡಿ ನೋಡಿದ ತಕ್ಷಣ ವಾಹನವನ್ನು ಒಂದೇ ಸಾರಿ ನಿಯಂತ್ರಿಸಲು ಹೋಗಿ ಅಪಘಾತಕ್ಕೆ ಸಿಲುಕುವ ಪರಿಸ್ಥಿತಿ ರಾಷ್ಟ್ರೀಯ ಹೆದ್ದಾರಿ 209ರ ರಸ್ತೆಯಲ್ಲಿ ವಾಹನ ಸವಾರರಿಗೆ ಎದುರಾಗಿದೆ.

ತಾಲ್ಲೂಕಿನ ಸಾತನೂರು ಹೋಬಳಿಯ ಜಕ್ಕೇಗೌಡನದೊಡ್ಡಿ ತಿರುವಿನ ರಾಷ್ಟ್ರೀಯ ಹೆದ್ದಾರಿ 209ರ ರಸ್ತೆಯಲ್ಲಿ 2 ಅಡಿಗೂ ಹೆಚ್ಚು ಆಳವಾದ ಗುಂಡಿ ಬಿದ್ದು ಅಪಘಾತದ ಪರಿಸ್ಥಿತಿ ಎದುರಾಗಿದೆ. ಒಂದು ತಿಂಗಳಿನಿಂದ ರಸ್ತೆಯಲ್ಲಿ ಗುಂಡಿಗಳಾಗಿ ದಿನಕ್ಕೆ ಒಬ್ಬರಾದರೂ ದ್ವಿಚಕ್ರವಾಹನ ಸವಾರರು ಬೀಳುತ್ತಿದ್ದಾರೆ. ಕಾರು ಬಸ್ಸು ಲಾರಿಗಳೂ ಅತಿ ವೇಗವಾಗಿ ಬಂದು ಗುಂಡಿ ನೋಡಿದ ತಕ್ಷಣ ಬ್ರೇಕ್‌ ಹಾಕುವುದರಿಂದ ಹಿಂದೆ ಬರುವ ವಾಹನಗಳು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿವೆ. ನಂತರ ಎರಡು ವಾಹನಗಳ ಮಾಲಿಕರು ಜಗಳವಾಡುವಂತಾಗಿದೆ ಎಂದು ವಾಹನ ಸವಾರ ರಮೇಶ್‌ ತಿಳಿಸಿದ್ದಾರೆ.

ಕನಕಪುರ ಕಡೆಯಿಂದ ಮತ್ತು ಸಾತನೂರು ಕಡೆಯಿಂದ ಬರುವ ವಾಹನಗಳಿಗೆ ಇಲ್ಲೊಂದು ತಿರುವು ಇದೆ, ತಿರುವಿನಲ್ಲಿ ಗುಂಡಿಯಿದೆ ಎನ್ನುವುದೇ ಗೊತ್ತಾಗದೆ ಅಪಘಾತಕ್ಕೆ ಒಳಗಾಗುತ್ತಿದ್ದಾರೆ.

ADVERTISEMENT

ಅಚ್ಚಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ರಸ್ತೆ ಇದ್ದು, ಪಂಚಾಯಿತಿಯವರು ಗುಂಡಿ ಮುಚ್ಚುವ ಪ್ರಯತ್ನ ಮಾಡುತ್ತಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಎಷ್ಟೋ ಬಾರಿ ಗುಂಡಿಯನ್ನು ತಪ್ಪಿಸಲು ವಾಹನಗಳು ರಸ್ತೆಯ ಬದಿಯಲ್ಲಿ ಹೋಗುವುದರಿಂದ ಬದಿಯಲ್ಲಿ ನಡೆದು ಬರುವ ಪಾದಚಾರಿಗಳಿಗೆ ಗುಂಡಿಯಲ್ಲಿನ ನೀರು ಮೈಮೇಲೆ ಚಿಮ್ಮುತ್ತದೆ, ಇದರಿಂದ ಸಾಕಷ್ಟು ಜನ ಸಮಸ್ಯೆಗೆ ಒಳಗಾಗಿದ್ದಾರೆಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಜಕ್ಕೇಗೌಡನದೊಡ್ಡಿ ಗ್ರಾಮದಿಂದ ಹರಿದು ಬರುವ ನೀರು ರಸ್ತೆ ಬದಿಯಲ್ಲಿರುವ ಚರಂಡಿಯಲ್ಲಿ ಮುಂದೆ ಹೋಗಬೇಕು, ಆದರೆ ಹೆದ್ದಾರಿ ರಸ್ತೆಯು ತಿರುವು ಮತ್ತು ಒಂದು ಕಡೆ ತಗ್ಗಾಗಿ ಇರುವುದರಿಂದ ಚರಂಡಿಯಲ್ಲಿ ನೀರು ಮುಂದೆ ಹೋಗದೆ ರಸ್ತೆಗೆ ಹರಿಯುತ್ತದೆ.

ನೀರು ನಿರಂತರವಾಗಿ ಹರಿಯುವುದರಿಂದ ರಸ್ತೆಯಲ್ಲಿ ಆಳವಾದ ಗುಂಡಿಗಳಾಗುತ್ತಿವೆ ಎಂದು ಜಕ್ಕೇಗೌಡ ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಳೆಗಾಲ ಹೆಚ್ಚಾಗಿರುವುದರಿಂದ ಮೋರಿಯಲ್ಲಿ ಜೋರಾಗಿ ಹರಿಯುವ ನೀರು ಮುಂದೆ ರಸ್ತೆಗೆ ಬರುತ್ತಿದ್ದು ಗುಂಡಿಯನ್ನು ಮತ್ತಷ್ಟು ಗುಂಡಿಯಾಗುವಂತೆ ಮಾಡಿದೆ ಎಂದಿದ್ದಾರೆ.

ಒಂದು ವರ್ಷದಿಂದ ಹೆದ್ದಾರಿ ರಸ್ತೆ ಅಭಿವೃದ್ಧಿಯಾಗುತ್ತದೆ ಎಂದೇ ಹೇಳಿಕೊಂಡು ಬರಲಾಗುತ್ತಿದೆ, ಒಂದು ವರ್ಷ ಕಳೆದಿದ್ದು ಮುಂದೆ ಯಾವಾಗ ಆಗುತ್ತದೆ ಎಂದು ಗೊತ್ತಿಲ್ಲ. ಅಲ್ಲಿಯ ತನಕ ಗುಂಡಿಯಲ್ಲಿ ಬಿದ್ದು ಜನತೆ ಪ್ರಾಣ ಕಳೆದುಕೊಳ್ಳಬೇಕು, ಅಪಘಾತ ಸಂಭವಿಸಿ ನೋವು ಅನುಭವಿಸಬೇಕಿದೆ ಎಂದು ಸಾರ್ವಜನಿಕರು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.