ರಾಮನಗರ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ 8 ಶಾಸಕರನ್ನು ಪಕ್ಷದಿಂದ ಉಚ್ಚಾಟಿಸುವುದು ಖಚಿತ. ಯಾವುದೇ ಕಾರಣಕ್ಕೂ ಅವರನ್ನು ವಾಪಸ್ ಜೆಡಿಎಸ್‌ಗೆ ಸೇರಿಸಿಕೊಳ್ಳುವುದಿಲ್ಲ’ ಎಂದು ಜಾತ್ಯತೀತ ಜನತಾದಳದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ತಾಲ್ಲೂಕಿನ ರಾಂಪುರ ದೊಡ್ಡಿ ಗ್ರಾಮದಲ್ಲಿ ಬುಧವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು. ‘ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಏಕಾಏಕಿ ತೆಗೆದುಹಾಕಲಾಗದು. ಹೀಗಾಗಿಯೇ ಸದ್ಯ ಅವರಿಗೆ ನೋಟಿಸ್ ನೀಡಿ ಅಮಾನತುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಅಧ್ಯಕ್ಷರು ಈ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ. ಅದಕ್ಕೂ ಮುನ್ನ ಎಂಟೂ ಕ್ಷೇತ್ರಗಳ ಜನತೆಯೇ ಅವರನ್ನು ಉಚ್ಚಾಟಿಸುತ್ತಾರೆ’ ಎಂದರು.
‘50 ವರ್ಷಗಳಿಂದ ರಾಜಕಾರಣದಲ್ಲಿದ್ದು, ಪ್ರಧಾನ ಮಂತ್ರಿಯೂ ಆದ ಎಚ್.ಡಿ. ದೇವೇಗೌಡರ ಬಗ್ಗೆ ಆ ಎಂಟು ಮಂದಿ ಆಡಿರುವ ಮಾತುಗಳನ್ನು ಸಹಿಸಲಾಗದು. ಅವರಿಗೆ ನಮ್ಮ ಸಖ್ಯ ಬೇಡವಾಗಿರುವಾಗ ದೂರ ಹೋಗುವುದು ಒಳಿತು’ ಎಂದು ಅಭಿಪ್ರಾಯಪಟ್ಟರು.
‘ಕಾಂಗ್ರೆಸ್ ಅಭ್ಯರ್ಥಿಗೆ ವೋಟು ಹಾಕಿದ ಈ ಎಂಟು ಮಂದಿ ದುಡ್ಡಿಗಾಗಿ, ತಮ್ಮ ಕಷ್ಟ ತೀರಿಸಿಕೊಳ್ಳುವ ಸಲುವಾಗಿ ಹೀಗೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ನಾನು ಅವರಿಗೆ ಹಣ ಕೊಟ್ಟು ಸಾಕುವಷ್ಟು ಶ್ರೀಮಂತನಲ್ಲ. ಪಾಪ ನನ್ನಿಂದ ಇವರು ಸಾಲಗಾರರಾಗುವುದು ಬೇಡ. ತಮಗೆ ಬೇಕಾದ ಕಡೆ ಹೋಗಿ ಶ್ರೀಮಂತರಾಗಲಿ’ ಎಂದು ಮಾರ್ಮಿಕವಾಗಿ ನುಡಿದರು.
‘ರಾಜ್ಯದಲ್ಲಿ ಇವರಂತೆಯೇ ಲಕ್ಷಾಂತರ ಕಾರ್ಯಕರ್ತರು ಸಾಲಗಾರರಾಗಿಯೇ ಜೆಡಿಎಸ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಂತೆ ಎಲ್ಲರೂ ಹಣಕ್ಕೆ ಆಸೆ ಪಟ್ಟಿದ್ದರೆ ಪಕ್ಷ ಉಳಿಯುತ್ತಿತ್ತೇ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
‘ಕುಮಾರಸ್ವಾಮಿಗೆ ಕಿವಿ ಚುಚ್ಚುವವರು ಜಾಸ್ತಿಯಾಗಿದ್ದಾರೆ’ ಎಂಬ ಬಾಲಕೃಷ್ಣರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ‘ನಾನು ಯಾರ ಮಾತನ್ನೂ ಹೇಳಿ–ಕೇಳಿಕೊಂಡು ರಾಜಕಾರಣ ಮಾಡುತ್ತಿಲ್ಲ. ನನ್ನದೇನಿದ್ದರೂ ನೇರ ನಡೆ’ ಎಂದರು.
‘ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಆಗ ನಾನು ಮುಖ್ಯಮಂತ್ರಿಯಾಗಿ ಇವರನ್ನು ಸಚಿವರನ್ನಾಗಿ ಮಾಡಿದರೆ ಪ್ರಾಮಾಣಿಕರಾಗಿ ಇರುತ್ತಾರೆ ಎಂದು ಏನು ಗ್ಯಾರಂಟಿ’ ಎಂದು ಪ್ರಶ್ನಿಸಿದರು.ಬುಧವಾರ ಮಾಗಡಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ಬಾಲಕೃಷ್ಣರಿಗೆ ಆಹ್ವಾನ ನೀಡದ ಕುರಿತು ಪ್ರತಿಕ್ರಿಯಿಸಿ ‘ಅದೊಂದು ಖಾಸಗಿ ಕಾರ್ಯಕ್ರಮ. ನಾನು ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದೇನೆ ಅಷ್ಟೇ’ ಎಂದರು.
ಡಿಜಿ ವಿರುದ್ಧ ಕಿಡಿ: ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಹಾಗೂ ಡಿಜಿ ಓಂ ಪ್ರಕಾಶ್‌ರಾವ್ ನಡುವಿನ ಆಡಿಯೊ ಸಂಭಾಷಣೆ ಬಗ್ಗೆ ಮಾತನಾಡಿದ ಅವರು ‘ರಿವಾರ್ಡ್ ಪದದ ಅಸಲಿ ಅರ್ಥವಾದರೂ ಅವರಿಗೆ ಗೊತ್ತಿದೆಯೇ? ಅನುಪಮಾರಂತ ಪ್ರಾಮಾಣಿಕ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ನೀಡಿ ರಿವಾರ್ಡ್ ಎಂದು ಮೂದಲಿಸುವ ಅವರು, ನರಗುಂದ–ನವಲಗುಂದ ರೈತರ ಮೇಲೆ ಲಾಠಿ ದರ್ಪ ತೋರಿದ ಪೊಲೀಸರಿಗೆ ಅದೇ ‘ರಿವಾರ್ಡ್’ ನೀಡಲಿ’ ಎಂದು ಸವಾಲು ಹಾಕಿದರು.
ಮಹಾದಾಯಿಗೆ ಹೋರಾಡಿ: ‘ಬೆಂಗಳೂರಿನ ಕಾಲೇಜೊಂದರಲ್ಲಿ ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ, ಎಬಿವಿಪಿ ಕಾರ್ಯಕರ್ತರು ಅದನ್ನೇ ಬಂಡವಾಳ ಮಾಡಿಕೊಳ್ಳಬಾರದು. ಯಾರೋ ನಾಲ್ಕು ಮಂದಿ ಘೋಷಣೆ ಕೂಗಿದ ಮಾತ್ರಕ್ಕೆ ದೇಶದ ಹಿತಾಸಕ್ತಿಗೆ ಧಕ್ಕೆ ಆಗದು. ಅಥವಾ ಪ್ರತಿಭಟನೆ ಮಾಡಿದ ಮಾತ್ರಕ್ಕೆ ಕಾಶ್ಮೀರ ಸಮಸ್ಯೆ ಪರಿಹಾರವಾಗದು. ಎಬಿವಿಪಿಯವರಿಗೆ ನಿಜವಾದ ಕಾಳಜಿ ಇದ್ದರೆ ಕೇಂದ್ರದಲ್ಲಿರುವ ತಮ್ಮದೇ ನಾಯಕರ ಮನವೊಲಿಸಿ ಮಹಾದಾಯಿ ನದಿ ನೀರು ಬಿಡಿಸಲಿ’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.