ADVERTISEMENT

ಸಭೆ ಬಹಿಷ್ಕರಿಸಿ ಪ್ರತಿಭಟನೆ

ಬಿಲ್ಲಿದೊಡ್ಡಿ: ಸಂಘದ ಸಿಇಒ ವಿರುದ್ಧ ಹಣ ದುರಪಯೋಗ ಆರೋಪ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 4:01 IST
Last Updated 30 ಸೆಪ್ಟೆಂಬರ್ 2022, 4:01 IST
ಗೋಪಹಳ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲಿದೊಡ್ಡಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಸಭೆ ಬಹಿಷ್ಕರಿಸಿ ಸದಸ್ಯರು ಪ್ರತಿಭಟನೆ ನಡೆಸಿದರು
ಗೋಪಹಳ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲಿದೊಡ್ಡಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಸಭೆ ಬಹಿಷ್ಕರಿಸಿ ಸದಸ್ಯರು ಪ್ರತಿಭಟನೆ ನಡೆಸಿದರು   

ಬಿಡದಿ: ಗೋಪಹಳ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲಿದೊಡ್ಡಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಭೆ ಆರೋಪ– ಪ್ರತ್ಯಾರೋಪದಿಂದ ಗೊಂದಮಯವಾಗಿತ್ತು.

ಗಂಗಾಧರ ಶಾಸ್ತ್ರಿ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆ ಆಯೋಜಿಸಲಾಗಿತ್ತು. ಸಂಘದ ಕಾರ್ಯನಿರ್ವಾಹಕರಾದ ನಾಗರಾಜು ಹಾಲು ಉತ್ಪಾದಕರ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪಿಸಿ ಸರ್ವ ಸದಸ್ಯರ ಸಭೆ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು.

ಸಭೆಯ ಆರಂಭದಲ್ಲ್ಲಿ ಹಾಲು ಉತ್ಪಾದಕ ಸದಸ್ಯರು ತಮಗೆ ಆಗಿರುವ ಅನ್ಯಾಯ ಸರಿಪಡಿಸಿ, ಸಂಘದ ಲೋಪದೋಷ ಸರಿಪಡಿಸಿ ನಂತರ ಸಭೆ ನಡೆಸಿ ಎಂದು ಪ್ರತಿಭಟನೆಗಿಳಿದರು.

ADVERTISEMENT

ಗ್ರಾಮದ ಮುಖಂಡ ಧನಂಜಯ್ಯ ಮಾತನಾಡಿ, ‘ಹಾಲು ಉತ್ಪಾದಕರಿಗೆ ಅನ್ಯಾಯವಾಗುತ್ತಿದೆ. ಉತ್ಪಾದಕರಲ್ಲದವರ ಹೆಸರಿಗೆ ಎರಡು ಬಾರಿ ಹಣ ಬಟವಾಡೆ ಮಾಡಲಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಸಂಘಕ್ಕೆ ಸರಬರಾಜಾಗಿದ್ದ ಹಾಲನ್ನು ಕಾರ್ಯನಿರ್ವಾಹಕ ಗ್ರಾಮದ ಮನೆಗಳ ಮುಂದೆ ಸುರಿದ ಘಟನೆ ನಡೆದಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕಾರಿಗಳು ಆತ್ಮವಂಚನೆ ಮಾಡಿಕೊಂಡು ಕೆಲಸ ಮಾಡಬೇಡಿ ತಪ್ಪಿತಸ್ಥರ ವಿರುದ್ದ ಕ್ರಮ ವಹಿಸಿ ಹಾಲು ಉತ್ಪಾದಕರಿಗೆ ನ್ಯಾಯ ಕೊಡಿಸಿ’ ಎಂದು ಒಕ್ಕೂಟದ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

‘ಹಾಲು ಉತ್ಪಾದಕ 2013-14 ರಿಂದ ಇದುವರೆಗೆ ಆಡಿಟ್ ಮಾಡಿರುವ ಬಗ್ಗೆ ಮಾಹಿತಿ ನೀಡಿ, ಸಂಘಕ್ಕೆ ಪಶು ಆಹಾರ ಖರೀದಿ ಮಾಡಿರುವ ಮಾಹಿತಿ ನೀಡಿ, ಪ್ರತಿನಿತ್ಯ ಕಾರ್ಯದರ್ಶಿ ಎರಡು ಲೀಟರ್ ಹಾಲು ಮನೆಗೆ ಕೊಂಡೊಯ್ಯುತ್ತಾರೆ. ಒಂದು ವಾರದ ಮುಂಚೆ ಅರ್ಜಿ ನೀಡಿ ಕೇಳಿರುವ ಪ್ರಶ್ನೆಗೆ ಒಂದಕ್ಕೂ ಉತ್ತರಿಸದ ಪರಿಸ್ಥಿತಿಯಲ್ಲಿರುವ ಕಾರ್ಯನಿರ್ವಾಹಕ ನಾಗರಾಜು ಅವರಿಗೆ ನೋಟಿಸ್ ನೀಡಿ, ಶಿಸ್ತು ಕ್ರಮಕ್ಕೆ ಕೈಗೊಂಡು ವಜಾಗೊಳಿಸಿ’ ಎಂದು ಸದಸ್ಯ ಪಾರ್ಥ ಮನವಿ ಮಾಡಿದರು.

ವ್ಯವಸ್ಥಾಪಕ ಗಣೇಶ್ ಮಧ್ಯಪ್ರವೇಶಿಸಿ, ‘ಹಾಲು ಉತ್ಪಾದಕರು ಹಲವು ಸಮಸ್ಯೆಗಳ ಬಗ್ಗೆ ದೂರುಗಳು ನೀಡಿದ್ದಾರೆ. ಅವರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಬೇಕಾದ ಜವಾಬ್ದಾರಿ ಆಡಳಿತ ಮಂಡಳಿಯ ಕರ್ತವ್ಯವಾಗಿದೆ. ಧನಂಜಯ್ಯ ಅವರು ನಿಮ್ಮ ಮೇಲೆ ಮಾಡುತ್ತಿರುವ ಆರೋಪ ರುಜುವತ್ತಾಗಿದೆ. ಕೂಡಲೇ ಪ್ರತಿ ಲೀಟರ್‌ ಗೆ 42 ರೂ ದರದಲ್ಲಿ ನಷ್ಟವಾದ ಒಟ್ಟು ಲೀಟರ್ ಹಾಲಿನ ಸಂಪೂರ್ಣವಾದ ಹಣವನ್ನು ಶುಕ್ರವಾರ ಸಂಜೆಯೊಳಗೆ ಸಂಘದ ಖಾತೆಗೆ ಹಣ ಪಾವತಿಸಿ’ ನಾಗರಾಜು ಅವರಿಗೆ ಸೂಚನೆ ನೀಡಿದರು.

ಪೇಚಿಗೆ ಸಿಲುಕಿದ ಅಧಿಕಾರಿಗಳು

ಸಂಘದಲ್ಲಿನ ಅವ್ಯವಹಾರಗಳ ಬಗ್ಗೆ ಸದಸ್ಯರ ಪ್ರಶ್ನೆಗಳಿಗೆ ಕಾರ್ಯನಿರ್ವಾಹಕ ಉತ್ತರಿಸಲಾಗದೆ ಅಸಹಾಯಕತೆ ತೋರಿದರು. ಇದರಿಂದ ಸಭೆಗೆ ಆಗಮಿಸಿದ್ದ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ಅಧಿಕಾರಿಗಳು ಪೆಚ್ಚಿಗೆ ಸಿಲುಕಿದರು. ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮಹಿಳಾ ಸಂಘದ ಕಾರ್ಯನಿರ್ವಾಹಕ ಅವರಿಂದ ಅನ್ಯಾಯವಾಗುತ್ತಿದೆ ನಮಗೆ ನ್ಯಾಯ ಕೊಡಿಸಿ ಎಂದು ಅಧಿಕಾರಿಗಳತ್ತ ಕೈ ಮುಗಿದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.