ADVERTISEMENT

ರೈತರಿಗೆ ಹಾಲಿನ ದರ ₹1 ಹೆಚ್ಚಳ; ಒಕ್ಕೂಟ ಸಭೆಯಲ್ಲಿ ತೀರ್ಮಾನ: ನರಸಿಂಹಮೂರ್ತಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 2:23 IST
Last Updated 29 ಮಾರ್ಚ್ 2021, 2:23 IST
ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡಿದರು
ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡಿದರು   

ಮಾಗಡಿ: ‘ಬೆಂಗಳೂರು ಹಾಲು ಒಕ್ಕೂಟ ಕೊರೊನಾ ಸೋಂಕು ಸಂಕಟದ ಸಂದರ್ಭದಲ್ಲಿ ₹90 ಕೋಟಿ ನಷ್ಟದಲ್ಲಿದ್ದರೂ ರೈತರಿಂದ ಹಾಲು ಖರೀದಿ ನಿಲ್ಲಿಸಿರಲಿಲ್ಲ. ಈಗ ಒಕ್ಕೂಟ ಮಹಾಮಂಡಳಿ ಸಭೆಯಲ್ಲಿ ರೈತರಿಗೆ ₹1 ಹಾಲಿನ ದರ ಹೆಚ್ಚಿಸಲು ತೀರ್ಮಾನಿಸಲಾಗಿದೆ’ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಪಟ್ಟಣದ ಬಮೂಲ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಏ.1ರಿಂದ ಒಂದು ಲೀಟರ್‌ ಹಾಲಿಗೆ ₹1.50 ಹೆಚ್ಚಾಗಲಿದೆ. ಫ್ಯಾಟ್ ಹೆಚ್ಚಾದಂತೆ 22 ಪೈಸೆಯಂತೆ ಹೆಚ್ಚಿಸಲಾಗುತ್ತದೆ. ಇದರಿಂದ ರೈತರಿಗೆ ಅಧಿಕ ಹಣ ಸಿಗಲಿದೆ. ಜೊತೆಗೆ ಎಂಪಿಸಿಎಸ್‌ಗೆ ₹1.5 ನಿರ್ವಹಣಾ ವೆಚ್ಚ, ಕಾರ್ಯನಿರ್ವಾಹಕ ಅಧಿಕಾರಿಗೆ 40 ಪೈಸೆ ಇನ್ಸೆಂಟಿವ್ ಕೂಡ ನೀಡಲಿದ್ದೇವೆ’ ಎಂದರು.

ಉತ್ಪನ್ನಗಳ ಹೆಚ್ಚಳ: ‘ಹಾಲು ಒಕ್ಕೂಟಕ್ಕೆ ಬೇಡಿಕೆಗಿಂತಲೂ ಹೆಚ್ಚಿನ ಹಾಲು ಬರುತ್ತಿರುವುದರಿಂದ ಕನಕಪುರ ಮೆಗಾ ಡೇರಿಯಲ್ಲಿ 60 ಮೆಟ್ರಿಕ್ ಟನ್ ಪೌಡರ್ ಉತ್ಪಾದನೆ ಹೆಚ್ಚಿಸಲಾಗುತ್ತದೆ. ಜೊತೆಗೆ ಟೆಟ್ರಾ ಪ್ಯಾಕ್‌ಗೆ ಹೆಚ್ಚು ಬೇಡಿಕೆಯಿರುವುದರಿಂದ ದೊಡ್ಡಬಳ್ಳಾಪುರದಲ್ಲಿ ಟೆಟ್ರಾ ಪ್ಯಾಕ್ ಘಟಕವನ್ನು ಆರಂಭಿಸಲಾಗುತ್ತದೆ. ಇದರ ಜೊತೆಗೆ ಹೊಸಕೋಟೆ, ಆನೇಕಲ್‌ನಲ್ಲಿ ಪೌಡರ್ ಮತ್ತು ಬೆಣ್ಣೆ ಸಂರಕ್ಷಿಸಲು ಗೋಡೋನ್ ಕಟ್ಟಿಸಲಾಗುತ್ತದೆ’ ಎಂದು ನರಸಿಂಹಮೂರ್ತಿ ತಿಳಿಸಿದರು.

ಗ್ರಾಹಕರ ಹಾಲಿನ ದರ ಹೆಚ್ಚಿಸಲು ಬೇಡಿಕೆ: ‘ರಾಜ್ಯದಲ್ಲಿ ನಂದಿನಿ ಹಾಲು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಸಿಗುತ್ತಿದೆ. ಈಗ ಪೆಟ್ರೋಲ್, ಡೀಸೆಲ್‌ ಹಾಗೂ ಇತರ ವಸ್ತುಗಳು ಕೂಡ ಹೆಚ್ಚಾಗಿರುವುದರಿಂದ ಎಲ್ಲಾ ಒಕ್ಕೂಟದವರು ಕೆಎಂಎಫ್‌ನವರಿಗೆ ಗ್ರಾಹಕರು ತೆಗೆದುಕೊಳ್ಳುವ ಹಾಲಿಗೆ ₹5 ಹೆಚ್ಚಿಸುವಂತೆ ಬೇಡಿಕೆ ಇಟ್ಟಿವೆ. ದರ ಹೆಚ್ಚಾದರೆ ರೈತರಿಗೆ ಹೆಚ್ಚಿನ ಹಣ ಕೊಡಬಹುದು’ ಎಂದರು.

‘ಪಟ್ಟಣದ ಹೊಸಪೇಟೆಯಲ್ಲಿ ಟಿಎಪಿಸಿಎಂಎಸ್ ವತಿಯಿಂದ 9 ಗುಂಟೆ ಜಾಗವನ್ನು ಖರೀದಿ ಮಾಡಿ ಬಮೂಲ್‌ ಕಚೇರಿ ಕಟ್ಟಡ ಕಟ್ಟಲು ಶೀಘ್ರದಲ್ಲೇ ಭೂಮಿ ಪೂಜೆ ಮಾಡಲಾಗುತ್ತದೆ. ನನಗೆ ಇನ್ನು 3 ವರ್ಷದ ಅವಧಿಯಿರುವುದರಿಂದ ಶಾಸಕ ಎ.ಮಂಜುನಾಥ್ ಅವರು ಮಾಗಡಿ ತಾಲ್ಲೂಕಿನಲ್ಲಿ 10 ರಿಂದ 15 ಎಕರೆ ಜಾಗ ಕೊಡಿಸಿದರೆ ಮಾಗಡಿಯಲ್ಲಿ ಚಾಕಲೇಟು ಘಟಕ ಆರಂಭಿಸಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.