ADVERTISEMENT

ರಾಮನಗರ: 5 ವರ್ಷದಲ್ಲಿ 109 ಸರ್ಕಾರಿ ಶಾಲೆಗಳಿಗೆ ಬೀಗ!

ಓದೇಶ ಸಕಲೇಶಪುರ
Published 10 ಜುಲೈ 2025, 2:13 IST
Last Updated 10 ಜುಲೈ 2025, 2:13 IST
ಬಾಗಿಲು ಮುಚ್ಚಿರುವ ರಾಮನಗರ ತಾಲ್ಲೂಕಿನ ಕುಂಬಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 
ಬಾಗಿಲು ಮುಚ್ಚಿರುವ ರಾಮನಗರ ತಾಲ್ಲೂಕಿನ ಕುಂಬಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ    

ರಾಮನಗರ: ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬೇಕು ಎಂಬ ಮಾತುಗಳು ಒಂದೆಡೆ ಬಲವಾಗಿ ಕೇಳಿ ಬರುತ್ತಿದ್ದರೆ, ಮತ್ತೊಂದೆಡೆ ಶೂನ್ಯ ದಾಖಲಾತಿ ಕಾರಣಕ್ಕೆ ಶಿಕ್ಷಣ ಇಲಾಖೆಯು ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳಿಗೆ ಬೀಗ ಜಡಿಯುತ್ತಿದೆ. ಈ ರೀತಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 109 ಶಾಲೆಗಳು ಬಂದ್ ಆಗಿವೆ.

ವಿದ್ಯಾರ್ಥಿಗಳ ಕೊರತೆ ಕಾರಣಕ್ಕೆ ಬಾಗಿಲು ಮುಚ್ಚುತ್ತಿರುವ ಶಾಲೆಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳು ಹೆಚ್ಚು ಎಂಬುದು ಗಮನಾರ್ಹ. ತಮ್ಮೂರಿನ ಶಾಲೆಗೆ ಬೀಗ ಬಿದ್ದಿರುವುದರಿಂದ ಪೋಷಕರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ವಿಧಿ ಇಲ್ಲದೆ ತಮ್ಮ ಮಕ್ಕಳನ್ನು ಅಕ್ಕಪಕ್ಕದ ಊರಿನ ಸರ್ಕಾರಿ ಅಥವಾ ಖಾಸಗಿ ಶಾಲೆಗೆ ಕಳಿಸುತ್ತಿದ್ದಾರೆ.

ಈ ವರ್ಷ 37:

ಪ್ರತಿ ವರ್ಷ ಮುಚ್ಚುತ್ತಿದ್ದ ಶಾಲೆಗಳ ಸಂಖ್ಯೆ ಆರಂಭದಲ್ಲಿ ಒಂದಂಕಿ ಇದ್ದದ್ದು, ಕಳೆದ ಮೂರು ವರ್ಷಗಳಿಂದ ಎರಡಂಕಿಗೆ ಬಂದು ತಲುಪಿದೆ. ಈ ವರ್ಷವೇ 37 ಶಾಲೆಗಳು ಬಂದ್ ಆಗಿವೆ. ಇದರಲ್ಲಿ 35 ಕಿರಿಯ ಹಾಗೂ 2 ಹಿರಿಯ ಪ್ರಾಥಮಿಕ ಶಾಲೆಗಳು ಸೇರಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕನಕಪುರ ತಾಲ್ಲೂಕಿನ ವಾಡೆದೊಡ್ಡಿ ಶಾಲೆಯ ಬಂದ್ ಆಗಿದೆ

ಇತ್ತೀಚೆಗೆ ಸರ್ಕಾರ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲೂ ಶಾಲೆಗಳನ್ನು ತೆರೆಯುತ್ತಿದೆ. ಕೆಲವೆಡೆ ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಸಹ ಆರಂಭವಾಗಿದೆ. ಹಾಗಾಗಿ, ಪೋಷಕರು ಇಂಗ್ಲಿಷ್ ಮಾಧ್ಯಮತ್ತ ಒಲವು ತೋರಿ ತಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸುತ್ತಿದ್ದಾರೆ. ಹೀಗಾಗಿ, ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗಿದೆ. ವಿಧಿ ಇಲ್ಲದೆ ನಾವು ಅವುಗಳನ್ನು ಸ್ಥಗಿತಗೊಳಿಸಿದ್ದೇವೆ ಎಂದು ಹೇಳಿದರು.

ಇಲಾಖೆ ವೈಫಲ್ಯ:

ವರ್ಷದಿಂದ ವರ್ಷಕ್ಕೆ ಶಾಲೆಗಳು ಮುಚ್ಚುತ್ತಿರುವುದು ಶಿಕ್ಷಣ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿ. ಶಾಲೆಗಳು ಮುಚ್ಚುವುದರಿಂದ ಹಳ್ಳಿಗಾಡಿನ ಬಡ ಮಕ್ಕಳು ಶಿಕ್ಷಣದಿಂದಲೇ ವಂಚಿತರಾಗುವ ಸಾಧ್ಯತೆ ಹೆಚ್ಚು. ಶಕ್ತಿ ಇರುವ ಪೋಷಕರು ಬೇರೆ ಶಾಲೆಗೆ ಕಳಿಸುತ್ತಾರೆ. ಇಲ್ಲದವರು ಮಕ್ಕಳನ್ನು ಶಾಲೆ‌ಗೆ ಕಳಿಸುವುದೇ ಇಲ್ಲ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ ಉಮೇಶ್ ದೊಡ್ಡಗಂಗವಾಡಿ ಆತಂಕ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳು ಮೂಲಸೌಕರ್ಯದ ಜೊತೆಗೆ ಶಿಕ್ಷಕರ ಕೊರತೆಯಿಂದಲೂ ಬಳಲುತ್ತಿವೆ. ಜೈಲಿನ ಕೈದಿಗಳಿಗಿಂತಲೂ ಕಡಿಮೆ ಸಂಬಳ ಕೊಡುವ ಅತಿಥಿ ಶಿಕ್ಷಕರ ಹುದ್ದೆಗಳನ್ನು ಕೇಳುವವರೇ ಇಲ್ಲವಾಗಿದೆ. ಹಲವೆಡೆ ಕಟ್ಟಡಗಳು ಸಹ ಶಿಥಿಲಾವಸ್ಥೆ ತಲುಪಿವೆ. ಹೀಗಾಗಿ, ಪೋಷಕರು ಬೇರೆ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಇಲಾಖೆಯು ಈ ಕೊರತೆಯನ್ನು ನೀಗಿಸಿಕೊಂಡರೆ ಸರ್ಕಾರಿ ಶಾಲೆಗಳು ಉಳಿಯುತ್ತವೆ ಎಂದು ಹೇಳಿದರು.

ಶಾಲೆಗೆ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆಯದೇ ಇದ್ದಾಗ ಅಂತಹ ಶಾಲೆಗಳನ್ನು ಶೂನ್ಯ ಪ್ರವೇಶ ಶಾಲೆಗಳೆಂದು ಪರಿಗಣಿಸಿ ಸ್ಥಗಿತಗೊಳಿಸಲಾಗಿದೆ. ಸದ್ಯ ಸ್ಥಗಿತಗೊಂಡಿರುವ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಿದರೆ ಮತ್ತೆ ಶುರು ಮಾಡಲಾಗುವುದು
– ವಿ.ಸಿ. ಬಸವರಾಜೇಗೌಡ ಉಪ ನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ

ಈ ವರ್ಷ ಮುಚ್ಚಿರುವ ಶಾಲೆಗಳು

  • ಚನ್ನಪಟ್ಟಣ: ತೊರೆಹೊಸೂರು l ಕನಕಪುರ: ಕಾಳೇಗೌಡನದೊಡ್ಡಿ, ಹೊನ್ನಿಗನದೊಡ್ಡಿ, ಮೇದಾರದೊಡ್ಡಿ, ವಾಡೆದೊಡ್ಡಿ, ಡಿ.ಕೆ.ಶಿ ನಗರ, ಚಿಕ್ಕೇಗೌಡನದೊಡ್ಡಿ, ತಾವರೆಗಟ್ಟೆ, ಹಂಚಿಪುರದೊಡ್ಡಿ, ಬಸವನಹಳ್ಳಿ, ಮುರಕಣಿ, ಉದಾರಹಳ್ಳಿ

  • ಮಾಗಡಿ: ಹುಲುವನಹಳ್ಳಿ, ಮದಲರಾಯನಪಾಳ್ಯ, ಮಲ್ಲಸಂದ್ರ, ಕಣನೂರು, ತ್ಯಾಗದೆರೆಪಾಳ್ಯ, ಪ್ರಸಾದನಗರ ಕಾಲೊನಿ

  • ರಾಮನಗರ: ಗೊಲ್ಲರದೊಡ್ಡಿ, ವಿರುಪಸಂದ್ರ, ಕೊಲಮರನಕುಪ್ಪೆ, ಡಣಾಯಕನಪುರ, ಕುಂಬಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.