ಚನ್ನಪಟ್ಟಣ (ರಾಮನಗರ): ಅಕ್ಷರ ಕಲಿಸಿದ ಸರ್ಕಾರಿ ಶಾಲೆಯ ಶಿಥಿಲಾವಸ್ಥೆ ಕಂಡ ವೈದ್ಯರೊಬ್ಬರು ₹14 ಕೋಟಿ ವೆಚ್ಚದಲ್ಲಿ ತಮ್ಮೂರಿನ ಶಾಲೆಗೆ ಹೈಟೆಕ್ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ.
ಅತ್ಯುತ್ತಮ ಸೌಲಭ್ಯಗಳಿರುವ ಹೊಂಗನೂರಿನ ಸರ್ಕಾರಿ ಶಾಲೆ ಸುಸಜ್ಜಿತ ಕಟ್ಟಡ ಯಾವ ಖಾಸಗಿ ಇಂಟರ್ ನ್ಯಾಷನಲ್ ಶಾಲೆಗಳ ಕಟ್ಟಡಗಳಿಗೂ ಕಡಿಮೆ ಇಲ್ಲ.
ಹೊಂಗನೂರಿನ ಡಾ. ಎಚ್.ಎಂ. ವೆಂಕಟಪ್ಪ ಅವರು ತಂದೆ–ತಾಯಿ ಸ್ಮರಣಾರ್ಥ ತಮ್ಮದೇ ಕಣ್ವ ಫೌಂಡೇಷನ್‌ನಿಂದ ಶಾಲೆಗೆ ಹೊಸ ರೂಪ ಕೊಟ್ಟಿದ್ದಾರೆ.
‘ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಸ್ಕೂಲ್’ಗೆ ಸುತ್ತಮುತ್ತಲಿನ ಗ್ರಾಮಗಳ ಹೆಚ್ಚಿನ ಪೋಷಕರು ಪೈಪೋಟಿಗೆ ಬಿದ್ದು ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ.
ಈ ವರ್ಷ ಬೇಸಿಗೆ ರಜೆ ಮುಗಿಯುವ ಹೊತ್ತಿಗೆ ಹಳೆ ಶಿಥಿಲ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಕ್ಕೆ ತರಗತಿಗಳನ್ನು ಸ್ಥಳಾಂತರಿಸಲಾಗಿದೆ. ಎರಡು ಪ್ರತ್ಯೇಕ ಕಟ್ಟಡಗಳ ಈ ಹೈಟೆಕ್ ಶಾಲೆ 1,500 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದೆ. ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣಕ್ಕೆ ವ್ಯವಸ್ಥೆ ಇದೆ. ಗ್ರಾಮದ ಸುತ್ತಲಿನ 12 ಹಳ್ಳಿಗಳ ಮಕ್ಕಳು ಇಲ್ಲಿ ಓದುತ್ತಿದ್ದಾರೆ.
ಸದ್ಯ ಪೂರ್ವ ಪ್ರಾಥಮಿಕ, ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಒಳಗೊಂಡಂತೆ ಸುಮಾರು 850 ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ಪ್ರಸಕ್ತ ಸಾಲಿನಿಂದ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ದ್ವಿತೀಯ ಪಿಯುವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಇಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ವರ್ಷ 150ಕ್ಕೂ ಅಧಿಕ ವಿದ್ಯಾರ್ಥಿಗಳ ದಾಖಲಾತಿಯಾಗಿದೆ.
‘ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲೂ ಕಾನ್ವೆಂಟ್ ಮಾದರಿ ಶಿಕ್ಷಣ ಸಿಗಬೇಕು ಎಂಬ ಆಶಯದೊಂದಿಗೆ ಶಾಲೆ ಕಟ್ಟಿಸಿದ್ದೇನೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಶಾಲೆ ನಿರ್ವಹಣೆಗಾಗಿ ಫೌಂಡೇಷನ್‌ನಿಂದ ಪ್ರತಿ ವರ್ಷ ₹10 ಲಕ್ಷ ನೀಡಲಾಗುವುದು. ಖಾಸಗಿ ಶಾಲೆ ಮಾದರಿಯಲ್ಲಿ ನಿರ್ವಹಣೆ ಮಾಡಿಕೊಂಡು ಹೋಗಬೇಕು. ಅಕ್ಕಪಕ್ಕದ 12 ಗ್ರಾಮಗಳ ಮಕ್ಕಳು ಎರಡ್ಮೂರು ಕಿಲೋಮೀಟರ್ ನಡೆದುಕೊಂಡು ಶಾಲೆಗೆ ಬರುತ್ತಾರೆ. ಅವರಿಗಾಗಿ ಎರಡು ಶಾಲಾ ಬಸ್ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಡಾ. ವೆಂಕಟಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶಾಲೆಯಲ್ಲಿ ಕೆಲ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಿಕೊಳ್ಳಲಾಗಿದೆ. ಸರ್ಕಾರ ಅವರಿಗೆ ನಿಗದಿಪಡಿಸಿರುವ ಸಂಬಳ ಕಡಿಮೆ ಇದೆ. ಹಾಗಾಗಿ, ನಮ್ಮ ಶಾಲೆಗೆ ನೇಮಕವಾಗಿರುವವರಿಗೆ ಫೌಂಡೇಷನ್‌ನಿಂದ ಹೆಚ್ಚುವರಿಯಾಗಿ ₹5 ಸಾವಿರ ಪಾವತಿಸಲಾಗುವುದು’ ಎಂದರು.
8ನೇ ತರಗತಿವರೆಗೆ ತಮ್ಮೂರಿನ ಈ ಸರ್ಕಾರಿ ಶಾಲೆಯಲ್ಲಿ ಕಲಿತ ವೆಂಕಟಪ್ಪ, ಮುಂದೆ ಸರ್ಕಾರಿ ವೈದ್ಯರಾದರು. ವಿವಿಧೆಡೆ 24 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ನಂತರ, ಬೆಂಗಳೂರಿನಲ್ಲಿ ಕಣ್ವ ಡಯಾಗ್ನಾಸ್ಟಿಕ್ ಕೇಂದ್ರ ಆರಂಭಿಸಿದ ಅವರು ಕಣ್ವ ಫೌಂಡೇಷನ್ ಆರಂಭಿಸಿ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ಇಷ್ಟು ಹಣ ಖರ್ಚು ಮಾಡಿ ಶಾಲೆ ಕಟ್ಟಿಸಿದ್ದರಿಂದ ನಿಮಗೇನು ಲಾಭ ಎಂದು ಕೆಲವರು ಕೇಳುತ್ತಾರೆ. ಈ ಶಾಲೆಯ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಹುದ್ದೆಗೆ ಹೋಗಬೇಕು. ಅದೇ ನನಗೆ ಸಿಗುವ ದೊಡ್ಡ ಲಾಭ. ಆಗಲೇ ನನ್ನ ಶ್ರಮ ಸಾರ್ಥಕವಾಗುತ್ತದೆಡಾ. ಎಚ್.ಎಂ.ವೆಂಕಟಪ್ಪ ಸಂಸ್ಥಾಪಕ ಕಣ್ವ ಫೌಂಡೇಷನ್
ಒಟ್ಟು 51 ಕೊಠಡಿಗಳ ಶಾಲೆಯಲ್ಲಿ 10 ಸಾವಿರ ಪುಸ್ತಕಗಳ ಸಾಮರ್ಥ್ಯದ ಗ್ರಂಥಾಲಯ ಇದೆ. 40 ಕಂಪ್ಯೂಟರ್ ಹೊಂದಿರುವ ಲ್ಯಾಬ್ ವಿಜ್ಞಾನ ಹಾಗೂ ಗಣಿತ ಪ್ರಯೋಗಾಲಯ ಸುಸಜ್ಜಿತ ಡೆಸ್ಕ್ ಹಾಗೂ ಡಿಜಿಟಲ್ ಬೋರ್ಡ್‌ಗಳಿವೆ. ಕಟ್ಟಡದ ಪ್ರತಿ ಅಂತಸ್ತಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಮಕ್ಕಳಿಗೆ ಆಟಿಕೆ ಸಭಾಂಗಣ ಬಾಸ್ಕೆಟ್‌ಬಾಲ್ ಮೈದಾನ ಸೇರಿದಂತೆ ವಿವಿಧ ಅಂಕಣಗಳನ್ನು ಒಳಗೊಂಡ ಮೈದಾನವಿದೆ. ಶುದ್ಧ ಕುಡಿಯುವ ನೀರಿಗಾಗಿ ಆರ್‌ಒ ಘಟಕ ಸೇರಿದಂತೆ ಖಾಸಗಿ ಶಾಲೆಗಳನ್ನು ಮೀರಿಸುವ ಸೌಲಭ್ಯಗಳನ್ನು ವೆಂಕಟಪ್ಪನವರು ಕಲ್ಪಿಸಿಕೊಟ್ಟಿದ್ದಾರೆ ಎಂದು ಪ್ರೌಢಶಾಲೆ ವಿಭಾಗದ ಮುಖ್ಯ ಶಿಕ್ಷಕಿ ಬಾಲಸರಸ್ವತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.