ADVERTISEMENT

2023ರ ಚುನಾವಣೆ ನನ್ನ ಕೊನೆಯ ಹೋರಾಟ; ಎಚ್.‌ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 15:02 IST
Last Updated 11 ಜನವರಿ 2021, 15:02 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ರಾಮನಗರ: ‘ರಾಜ್ಯದಲ್ಲಿ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯು ನನ್ನ ಜೀವನದ ಕೊನೆಯ ರಾಜಕೀಯ ಹೋರಾಟ ಆಗಿರಲಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾವುಕರಾಗಿ ನುಡಿದರು.

ನಗರದ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಸೋಮವಾರ ಗ್ರಾ.ಪಂ. ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಜತೆ ಕೈ ಜೋಡಿಸಿ ಮೈತ್ರಿ ಸರ್ಕಾರ ರಚನೆ ಮಾಡಿದ್ದರಿಂದ ಆದ ತಪ್ಪಿನ ಅರಿವಾಗಿದೆ. ದೋಸ್ತಿ ಸರ್ಕಾರಕ್ಕೆ ಬಂಡೆ ರೀತಿ ಆಸರೆಯಾಗಿ ನಿಂತಿದ್ದೇವೆ ಎಂದು ಪರೋಪಕಾರ ಮಾಡಿದವರಂತೆ ಪ್ರಚಾರ ಪಡೆದವರೇ ನನ್ನ ಮೇಲೆ ಕಲ್ಲು ಚಪ್ಪಡಿ ಎಳೆದರು’ ಎಂದು ಟೀಕಿಸಿದರು.

ADVERTISEMENT

‘ದೋಸ್ತಿ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ನಾನು ವೇದಿಕೆಯಲ್ಲಿ ಸಾರ್ವಜನಿಕವಾಗಿ ಕಣ್ಣೀರು ಹಾಕುವ ಸನ್ನಿವೇಶ ಬಂದಿತು. ಬಹುಶಃ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿಯಾದ ಒಂದೇ ತಿಂಗಳಲ್ಲಿ ಕಣ್ಣೀರು ಹಾಕಿದವನು ನಾನೊಬ್ಬನೇ ಇರಬೇಕು’ ಎಂದು ಹೇಳಿದರು.

ಮೈತ್ರಿ ಸರ್ಕಾರದ ಅವಧಿಯನ್ನು ದುರುಪಯೋಗ ಪಡಿಸಿಕೊಂಡ ಕಾಂಗ್ರೆಸ್ ಮುಖಂಡರು ಜೆಡಿಎಸ್ ಬಲಿಷ್ಠವಾಗಿದ್ದ ಕ್ಷೇತ್ರಗಳಲ್ಲಿಯೇ ತಮ್ಮ ಪ್ರಾಬಲ್ಯ ಕಂಡುಕೊಳ್ಳಲು ವೇದಿಕೆ ಸಿದ್ಧಪಡಿಸಿಕೊಂಡರು. ಇದರಿಂದಾಗಿ ಪಕ್ಷಕ್ಕೆ ಈಚಿನ ಚುನಾವಣೆಗಳಲ್ಲಿ ಹಿನ್ನಡೆ ಆಗುತ್ತಿದೆ. ನಾವುಗಳು ಮಾಡಿದ ಲೋಪಗಳಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ದೋಷಿಗಳಿಲ್ಲ. ನನ್ನಿಂದಾಗಿರುವ ತಪ್ಪಿನ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೇನೆ’ ಎಂದರು.

ಶಾಸಕಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.