ADVERTISEMENT

ಕನಕಪುರ ನಗರಸಭೆ: ₹3.61 ಕೋಟಿ ಉಳಿತಾಯ ಬಜೆಟ್‌ ಮಂಡನೆ

ಆದಾಯ ಹೆಚ್ಚಿನ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 15:24 IST
Last Updated 15 ಮಾರ್ಚ್ 2024, 15:24 IST
ಕನಕಪುರ ನಗರಸಭೆಯಲ್ಲಿ ಬಜೆಟ್‌ ಮಂಡಿಸಲಾಯಿತು
ಕನಕಪುರ ನಗರಸಭೆಯಲ್ಲಿ ಬಜೆಟ್‌ ಮಂಡಿಸಲಾಯಿತು    

ಕನಕಪುರ: ನಗರಸಭೆಯ 2024-25ನೇ ಸಾಲಿಗೆ ₹3 ಕೋಟಿಗೂ ಹೆಚ್ಚು ಉಳಿತಾಯದ ಬಜೆಟ್‌ ಅನ್ನು ಜಿಲ್ಲಾಧಿಕಾರಿ, ನಗರಸಭೆ ಆಡಳಿತಾಧಿಕಾರಿ ಅವಿನಾಶ್‌ ಮೆನನ್‌‌ ರಾಜೇಂದ್ರನ್‌ ಮಂಡಿಸಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಬಜೆಟ್‌ ಮಂಡನೆಯ ಸಭೆಯಲ್ಲಿ ಬಜೆಟ್‌ ಮೇಲೆ ಚರ್ಚೆ ನಡೆಸಿ ಸರ್ವ ಸದಸ್ಯರಿಂದ ಅನುಮೋದನೆ ಪಡೆದುಕೊಂಡರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಸದಸ್ಯರು ಮಾತನಾಡಿ, ನಗರಸಭೆಗೆ ಹೆಚ್ಚಿನ ಆದಾಯ ಬರುವಂತೆ ಮಾಡಿ, ಖರ್ಚಿನ ಪ್ರಮಾಣವನ್ನು ಕಡಿಮೆ ಮಾಡಬೇಕಿದೆ. ಕೆಲವೊಂದು ಕೆಲಸಗಳಿಗೆ ಹಚ್ಚಿನ ಹಣ ವ್ಯಯವಾಗುತ್ತಿದ್ದು ಅದನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಈಗ ನಗರಸಭೆಯಲ್ಲಿ ಬಳಸುತ್ತಿರುವ ಇಂಟರ್‌ನೆಟ್‌ನಿಂದ ಹೆಚ್ಚಿನ ಬಿಲ್‌ ಬರುತ್ತಿದೆ. ಅಷ್ಟು ಇಂಟರ್‌ನೆಟ್‌‌ ಅವಶ್ಯಕತೆಯಿಲ್ಲ ಎಂದರು.

ನಗರಸಭೆ ವ್ಯಾಪ್ತಿಯಲ್ಲಿ ಅನುಮತಿ ಪಡೆದು ನಿರ್ಮಾಣ ಮಾಡುವ ಕಟ್ಟಡಗಳಿಗೆ ಪ್ಲ್ಯಾನಿಂಗ್‌ನಿಂದ ಸ್ವಲ್ಪ ವ್ಯತ್ಯಾಸವಾದರೂ ಇಡೀ ಕಟ್ಟಡಕ್ಕೆ ದುಪ್ಪಟ್ಟು ದಂಡ ವಿಧಿಸಲಾಗುತ್ತಿದೆ. ಕಂದಾಯ ಜಾಗದಲ್ಲಿ ನಿರ್ಮಾಣ ಮಾಡುವ ಕಟ್ಟಡಗಳಿಗೆ ಯಾವುದೇ ರೀತಿಯ ಕಂದಾಯ ವಿಧಿಸುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ರಾಜಸ್ವ, ಬಂಡವಾಳ, ಅಸಾಧಾರಣ, ನಿರೀಕ್ಷಿತ ಆದಾಯ, ವೆಚ್ಚ ಸೇರಿ ಆದಾಯ ಮತ್ತು ಖರ್ಚುಗಳ ನಂತರದ ₹3.61 ಕೋಟಿ ಉಳಿತಾಯ ಬಜೆಟ್‌ನ್ನು ಜಿಲ್ಲಾಧಿಕಾರಿ ಘೋಷಿಸಿದರು.

ಸಭೆಯಲ್ಲಿ ಚಿರಶಾಂತಿ ವಾಹನದ ದುರಸ್ತಿಗೆ ಒಪ್ಪಿಗೆ ಸೂಚಿಸಲಾಯಿತು. ನಗರಸಭೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಯೋ ಕಲ್ಚರ್ ದ್ರಾವಣ ಪೂರೈಸುವ ಟೆಂಡರ್‌ಗೆ ಮಂಜೂರಾತಿ ಪಡೆಯುವ ವಿಷಯಕ್ಕೆ ಸದಸ್ಯರು ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಮುಂದೆ ಟೆಂಡರ್‌ ಮಾಡುವುದಕ್ಕೂ ಮುಂಚೆ ಸದಸ್ಯರ ಗಮನಕ್ಕೆ ತರಬೇಕು ಎಂದು ಸದಸ್ಯರು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಪೌರಕಾರ್ಮಿಕರು, ಯುಜಿಡಿ ಕಾರ್ಮಿಕರಿಗೆ ಬೆಳಗಿನ ಉಪಹಾರ ಪೂರೈಸುವ ಮರು ಟೆಂಡರ್ ಮಾಡುವಂತೆ ತಿಳಿಸಲಾಯಿತು. ಗುತ್ತಿಗೆ ಆಧಾರದ ಸಿಬ್ಬಂದಿ ಸೇರಿದಂತೆ ಪೌರಕಾರ್ಮಿಕರು ಅಕಾಲಿಕ ಮರಣಕ್ಕೆ ತುತ್ತಾದಾಗ, ದಿಢೀರ್‌ ಆಸ್ಪತ್ರೆಗೆ ಸೇರಿದಂತೆ ಅನುಕೂಲ ಆಗುವಂತೆ ವಿಮೆಯನ್ನು ಮಾಡಿಸಬೇಕು ಎಂದು ಸದಸ್ಯರು ನೀಡಿದ ಸಲಹೆಗೆ ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸಿದರು.

ನಗರಸಭೆ ಬ್ಲಾಕ್‌ಸ್ಪಾಟ್‌ಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ವಿಷಯಕ್ಕೆ ಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು. ಸಭೆಯಲ್ಲಿ ಸದಸ್ಯರ ವಾರ್ಡ್‌ಗಳ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅದರ ಪರಿಹಾರಕ್ಕೆ ಒಪ್ಪಿಗೆ ಪಡೆಯಲಾಯಿತು.

ರಾಮನಗರ ಜಿಲ್ಲಾ ಯೋಜನಾಧಿಕಾರಿ ರಮೇಶ್, ನಗರಸಭೆ ಆಯುಕ್ತ ಎಂ.ಎಸ್‌.ಮಹದೇವ್, ಲೆಕ್ಕ ಅಧಿಕ್ಷಕ ಸೇರಿದಂತೆ ನಗರಸಭೆ ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.