ADVERTISEMENT

ಉಯ್ಯಂಬಳ್ಳಿ, ನಲ್ಲಹಳ್ಳಿ ಗ್ರಾ.ಪಂ ಚುನಾವಣೆ: ಕಣದಲ್ಲಿ 53 ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 2:28 IST
Last Updated 29 ಮಾರ್ಚ್ 2021, 2:28 IST
ಕನಕಪುರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಚುನಾವಣೆ ಸಿಬ್ಬಂದಿಗೆ ಚುನಾವಣಾ ನಿಯಮಗಳನ್ನು ತಹಶೀಲ್ದಾರ್‌ ನೇತೃತ್ವದಲ್ಲಿ ತಿಳಿಸಲಾಯಿತು
ಕನಕಪುರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಚುನಾವಣೆ ಸಿಬ್ಬಂದಿಗೆ ಚುನಾವಣಾ ನಿಯಮಗಳನ್ನು ತಹಶೀಲ್ದಾರ್‌ ನೇತೃತ್ವದಲ್ಲಿ ತಿಳಿಸಲಾಯಿತು   

ಕನಕಪುರ: ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ನಲ್ಲಹಳ್ಳಿ ಮತ್ತು ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಸೋಮವಾರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೂ ನಡೆಯಲಿದೆ. ಮಾರ್ಚ್‌ 31 ರಂದು ಮತ ಎಣಿಕೆ ನಡೆಯಲಿದೆ ಎಂದು ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್ ತಿಳಿಸಿದರು.

ಮಿನಿ ವಿಧಾನಸೌಧದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಚುನಾವಣಾ ಸಿಬ್ಬಂದಿಗೆ ಚುನಾವಣಾ ಸಾಮಾಗ್ರಿಗಳನ್ನು ನೀಡಿ ಅವರು ಮಾತನಾಡಿದರು.

ನಲ್ಲಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 12 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದ್ದು, ಅದರಲ್ಲಿ 3 ಸ್ಥಾನಗಳಿಗೆ ಈಗಾಗಲೆ ಅವಿರೋಧ ಆಯ್ಕೆಯಾಗಿದೆ. ಉಯ್ಯಂಬಳ್ಳಿ ಗ್ರಾಮದಲ್ಲಿ 22 ಸ್ಥಾನಗಳಲ್ಲಿ 9 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 13 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ ಎಂದರು.

ADVERTISEMENT

2 ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 22 ಸದಸ್ಯರ ಆಯ್ಕೆಗಾಗಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಒಟ್ಟು 53 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 10,121 ಮತದಾರರಿದ್ದು ಅದರಲ್ಲಿ 5,084 ಮಹಿಳಾ ಮತದಾರರು, 5,035 ಪುರುಷ ಮತದಾರರು, ಒಬ್ಬರು ತೃತೀಯ ಲಿಂಗ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ಎರಡು ಪಂಚಾಯ್ತಿಯಲ್ಲಿ ಏಳಗಳ್ಳಿ, ನಲ್ಲಹಳ್ಳಿ, ಹಾರೋಬಲೆ ಪ್ರೋಜೆಕ್ಟ್‌, ಹಾರೋಬೆಲೆ ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತದಾನ ಮಾಡಲು ಬರುವವರು ಕಡ್ಡಾಯವಾಗಿ ಚುನಾವಣಾ ಇಲಾಖೆ ತಿಳಿಸಿರುವ ಗುರುತಿನ ಚೀಟಿಯನ್ನು ತರಬೇಕಿದೆ. ಕೊರೊನಾ ಸೋಂಕು ತಡೆಗಾಗಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಪಾಡಬೇಕು, ಕೊರೊನಾ ಸೋಂಕು ದೃಢಪಟ್ಟಿರುವವರಿಗೆ 4 ಗಂಟೆಯ ನಂತರ ಮತದಾನಕ್ಕೆ ಅವಕಾಶ ಕಲ್ಪಿಸಿರುವುದಾಗಿ ಹೇಳಿದರು.

ಚುನಾವಣಾ ಶಾಖೆಯ ಶಿರಸ್ತೇದಾರ ಕೆ.ವಿ.ಸುನಿಲ್‌ ಉಪಸ್ಥಿತರಿದ್ದರು.

ಅವಿರೋಧವಾಗಿ ಆಯ್ಕೆಯಾದವರು: ಉಯ್ಯಂಬಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಚೀಲಂದವಾಡಿ ಕ್ಷೇತ್ರ ಮಂಜುಳಾ, ಕಾಡುಶಿವನಹಳ್ಳಿದೊಡ್ಡಿ ಕ್ಷೇತ್ರ ಲಕ್ಷ್ಮೀಬಾಯಿ, ನಲ್ಲಹಳ್ಳಿದೊಡ್ಡಿ ಕ್ಷೇತ್ರ ಸಿ.ಮಂಜು, ಬೆಂಡಗೋಡು ಕ್ಷೇತ್ರ ಬಿ.ಆರ್‌.ರಮೇಶ್‌ನಾಯ್ಕ್‌, ಕೊಗ್ಗೆದೊಡ್ಡಿ ಕ್ಷೇತ್ರ ಮುತ್ತುರಾಜಮ್ಮ, ಕುಪ್ಪೆದೊಡ್ಡಿ ಕ್ಷೇತ್ರ ಮರಿಯಪ್ಪ, ಹಾರೋಶಿವನಹಳ್ಳಿ ಕ್ಷೇತ್ರ ಎಚ್‌.ಎಸ್‌. ಶಿವನೇಗೌಡ, ಏಳಗಳ್ಳಿ ಕ್ಷೇತ್ರ ವಿ.ಡಿ.ಚಂದ್ರ, ಹೊಸದೊಡ್ಡಿ ಕ್ಷೇತ್ರ ಪಲ್ಲವಿ.

ನಲ್ಲಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಹಾರೋಬೆಲೆ ಪ್ರೋಜೆಕ್ಟ್‌ ಕ್ಷೇತ್ರ ಮುನಿಸಿದ್ದ, ಜ್ಯೋತಿಕಾಲೋನಿ ಕ್ಷೇತ್ರ ರಾಣಿ ರಮೇಶ್‌, ಹಾರೋಬೆಲೆ ಕ್ಷೇತ್ರದಿಂದ ಪ್ರೇಮ ರಮೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.