ADVERTISEMENT

ಕನಕಪುರ: ಫಲಪುಷ್ಪ ಪ್ರದರ್ಶನ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 5:28 IST
Last Updated 9 ಜನವರಿ 2018, 5:28 IST
ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಜೆ. ಗುಣವಂತ ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಜೆ. ಗುಣವಂತ ಮಾತನಾಡಿದರು   

ರಾಮನಗರ: ಕನಕೋತ್ಸವ ಅಂಗವಾಗಿ ಇದೇ 10ರಿಂದ 12ರವರೆಗೆ ಕನಕಪುರದಲ್ಲಿ ಫಲ–ಪುಷ್ಪ ಹಾಗೂ ಕೃಷಿ ವಸ್ತು ಪ್ರದರ್ಶನವು ನಡೆಯಲಿದೆ. ಹೂವುಗಳಿಂದ ಅಲಂಕೃತವಾದ ಕಬ್ಬಾಳಮ್ಮ ದೇವಸ್ಥಾನ ಗೋಪುರ ಮಾದರಿಯು ಈ ಬಾರಿಯ ಆಕರ್ಷಣೆ ಆಗಲಿದೆ.

ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಸಹಯೋಗದಲ್ಲಿ ಪ್ರತಿ ವರ್ಷ ಈ ಪ್ರದರ್ಶನವನ್ನು ಆಯೋಜಿಸುತ್ತಾ ಬರಲಾಗಿದೆ. ಕನಕಪುರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ 10ರಂದು ಬೆಳಿಗ್ಗೆ 11ಕ್ಕೆ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದು, ತೋಟಗಾರಿಕೆ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್‌ ಹಾಗೂ ಸಂಸದ ಡಿ,ಕೆ. ಸುರೇಶ್‌ ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಕಾರ್ಯಕ್ರಮವು ಹತ್ತು ಹಲವು ವಿಶೇಷಗಳನ್ನು ಒಳಗೊಂಡಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಜೆ. ಗುಣವಂತ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರದರ್ಶನದ ಅಂಗವಾಗಿ 18 ಅಡಿ ಅಗಲ ಹಾಗೂ 20 ಅಡಿ ಎತ್ತರದ ಕಬ್ಬಾಳಮ್ಮ ದೇವಸ್ಥಾನ ಗೋಪುರ ಮಾದರಿ ನಿರ್ಮಾಣಗೊಳ್ಳುತ್ತಿದ್ದು, ಇದನ್ನು ಎರಡು ಲಕ್ಷದಷ್ಟು ಸೇವಂತಿಗೆ ಹಾಗೂ ಗುಲಾಬಿ ಹೂವುಗಳಿಂದ ಸಿಂಗರಿಸಲಾಗುವುದು. ಜೊತೆಗೆ ಕಲಾವಿದರು ಮರಳಿನಲ್ಲಿ ಕಬ್ಬಾಳಮ್ಮ ದೇವಿಯ ಕಲಾಕೃತಿಯನ್ನು ರಚಿಸಿಕೊಡಲಿದ್ದಾರೆ ಎಂದರು.

ADVERTISEMENT

ಬಾಳೆದಿಂಡು, ತೆಂಗಿನ ಗರಿಗಳಿಂದ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ ಮಾದರಿಯ ಮೆಟ್ಟಿಲುಗಳ ನಿರ್ಮಾಣ, ಹೂವುಗಳಿಂದ ಮಾವು, ಸೇಬು ಹಣ್ಣುಗಳ ಕಲಾಕೃತಿಗಳ ನಿರ್ಮಾಣ, ಆಟಿಕೆಗಳ ವಿನ್ಯಾಸ, ದೊಣ್ಣೆ ಮೆಣಸಿನಕಾಯಿಯಿಂದ ಕರ್ನಾಟಕ ಭೂಪಟದ ಅಲಂಕಾರಗಳು ಪ್ರದರ್ಶನಗಳ ಗಮನ ಸೆಳೆಯಲಿವೆ. ರಂಗೋಲಿಯಿಂದ ಭಾವಚಿತ್ರಗಳ ರಚನೆ, ಹೂವುಗಳಿಂದ ಕೋನ್‌, ಗೋಮಾತೆಯ ವಿನ್ಯಾಸವೂ ಇರಲಿದೆ ಎಂದು ವಿವರಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಸ್‌.ಎಂ. ದೀಪಜಾ ಮಾತನಾಡಿ ‘ಸಿರಿಧಾನ್ಯ ಬೆಳೆಗಳು ಹಾಗೂ ಅವುಗಳ ಬಳಕೆಯ ಮಹತ್ವ, ಮಣ್ಣು ಸಂರಕ್ಷಣೆಯ ವಿಧಾನಗಳ ಕುರಿತು ರೈತರಲ್ಲಿ ಅರಿವು ಮೂಡಿಸಲಾಗುವುದು’ ಎಂದರು. ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್‌.ಆರ್. ಗುರುದತ್‌, ನಾಗರಾಜು, ಹರೀಶ್, ಪ್ರದೀಪ್‌, ತೋಟಗಾರಿಕೆ ಸಂಘದ ನಿರ್ದೇಶಕರಾದ ಕೃಷ್ಣಮೂರ್ತಿ, ಗಂಗಣ್ಣ ಇದ್ದರು.

ರೈತರಿಗೆ ಮಾಹಿತಿ

ರೈತರಿಗೆ ಉಪಯುಕ್ತವಾಗುವ ಹಲವು ಮಾಹಿತಿಗಳನ್ನು ಮಳಿಗೆಗಳಲ್ಲಿ ನೀಡಲಾಗುವುದು ಎಂದು ಜೆ. ಗುಣವಂತ ಹೇಳಿದರು.ಅಣಬೆ ಕೃಷಿ, ಜೇನು ಸಾಕಾಣಿಕೆ, ಕೈ ತೋಟ, ತಾರಸಿ ತೋಟ, ವೈನ್‌ ತಯಾರಿಕೆ ಮೊದಲಾದ ಪ್ರಾತ್ಯಕ್ಷಿಕೆಗಳು ಇರಲಿವೆ. ಇದಲ್ಲದೆ ಜಿಲ್ಲೆಯ ಪ್ರಮುಖ ಬೆಳೆಗಳು, ಯಂತ್ರೋಪರಣಗಳನ್ನೂ ಪ್ರದರ್ಶನಕ್ಕೆ ಇಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.