ADVERTISEMENT

ಕನ್ನಡ, ಸಂಸ್ಕೃತಿ ಇಲಾಖೆ ಕಾರ್ಯವೈಖರಿಗೆ ಕಿಡಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 7:07 IST
Last Updated 30 ಜನವರಿ 2018, 7:07 IST
ಕಾಲೇಜು ರಂಗೋತ್ಸವದ ಜನಪದ ನೃತ್ಯ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಡೊಳ್ಳು ನೃತ್ಯ ಪ್ರದರ್ಶನ ನೀಡಿದರು
ಕಾಲೇಜು ರಂಗೋತ್ಸವದ ಜನಪದ ನೃತ್ಯ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಡೊಳ್ಳು ನೃತ್ಯ ಪ್ರದರ್ಶನ ನೀಡಿದರು   

ರಾಮನಗರ: ಕಲಾವಿದೆ ಉಮಾಶ್ರೀ ಸಚಿವರಾದ ಮೇಲೆಯೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯವೈಖರಿ ಹಾಗೆಯೇ ಇದೆ. ಲೋಕೋಪಯೋಗಿ ಇಲಾಖೆಯ ಕೆಲಸಗಳಿಗೂ, ಸರ್ಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವ್ಯತ್ಯಾಸವೇ ಇಲ್ಲದಂತೆ ಆಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ. ಜಯಪ್ರಕಾಶ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಜಾನಪದ ಲೋಕದ ಆವರಣದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಶಿವಮೊಗ್ಗ ರಂಗಾಯಣದ ಸಹಯೋಗದಲ್ಲಿ ನಡೆದ ‘ಕಾಲೇಜು ರಂಗೋತ್ಸವ -2018’ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಂದು ನಾಟಕ, ಜನಪದ ಕಾರ್ಯಕ್ರಮ ಸಂವೇಧನಾಶೀಲವಾಗಿ ನಡೆಯಬೇಕಾದರೆ ಇಂತಿಷ್ಟು ಸಮಯ ಬೇಕು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೇಗೋ ಕಾರ್ಯಕ್ರಮ ಮುಗಿಸಿದರಾಯಿತು ಎಂದು ಧೋರಣೆ ತಾಳಿದೆ. ಜನವರಿಯಲ್ಲಿ ಯೋಜನೆ ರೂಪಿಸಿ, ಫೆಬ್ರುವರಿ–ಮಾರ್ಚ್‌ನಲ್ಲಿ ತರಾತುರಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಏಪ್ರಿಲ್‌ನಲ್ಲಿ ಹಣ ನೀಡುತ್ತಿದೆ. ಬಿಲ್ ಪಡೆಯಬೇಕಾದರೆ ಕಲಾವಿದರನ್ನು ಭಿಕ್ಷುಕರಂತೆ ಕಾಣಲಾಗುತ್ತದೆ ಎಂದು ದೂರಿದರು. ಇಂತಹ ಕಾರ್ಯಕ್ರಮಗಳಿಗೆ ಅನುದಾನವನ್ನೇ ನೀಡಬೇಡಿ. ಶಕ್ತಿ ಇದ್ದವರು ಕಾರ್ಯಕ್ರಮ ಮಾಡಿಕೊಳ್ಳುತ್ತಾರೆ ಎಂದರು.

ADVERTISEMENT

ಕಲಾವಿದರಿಗೂ ಸರ್ಕಾರಿ ನೌಕರ ನೀಡಲು ಸರ್ಕಾರ ಚಿಂತನೆ ನಡೆಸುವಂತೆ ಸಲಹೆ ನೀಡಿದರು. ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿ, ಭಾರತದ ಕಲೆ ಮತ್ತು ಸಂಸ್ಕತಿ ಶ್ರೇಷ್ಠವಾಗಿದೆ. ಇದನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವಂತಹ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕಿದೆ ಎಂದರು.

ಸರ್ಕಾರವು ಜನಪದ ಕಲಾವಿದರನ್ನು ಗುರುತಿಸಿ ಅವರಿಗೆ ಮಾಶಾಸನ ನೀಡುವ ಕೆಲಸವನ್ನು ತ್ವರಿತವಾಗಿ ಮಾಡಬೇಕು. ಪಠ್ಯದಲ್ಲಿ ಜನಪದ ಸಾಹಿತ್ಯವನ್ನು ಸೇರ್ಪಡೆಗೊಳಿಸಬೇಕು ಎಂದು ಕೋರಿದರು.

ಸಾಹಿತಿ ಡಾ.ಎಂ. ಬೈರೇಗೌಡ ಮಾತನಾಡಿ, ‘ಶಿಕ್ಷಣದ ಅವಿಭಾಜ್ಯ ಅಂಗವಾಗಿ, ಅಧ್ಯಯನದ ಆಸಕ್ತಿ ವಿಚಾರವಾಗಬೇಕಿದ್ದ ರಂಗಭೂಮಿ ಕ್ಷೇತ್ರ ಇಂದು ಹಲವು ಚಡಪಡಿಕೆ ಮೂಲಕ ಅನ್ಯದಾರಿ ತುಳಿಯುವಂತೆ ಮಾಡಿದೆ. ನಮ್ಮ ನೆಲದ ಬೇರಾದ ಜನಪದ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನವಾಗಬೇಕಿದೆ’ ಎಂದರು.

ಜಾನಪದ ಲೋಕದ ಆಡಳಿತಾಧಿಕಾರಿ ಡಾ.ಕುರುವ ಬಸವರಾಜು, ಕಾಲೇಜು ರಂಗೋತ್ಸವದ ಜಿಲ್ಲಾ ಸಂಚಾಲಕ ನರೇಶ್ ಮಯ್ಯ ಮಾತನಾಡಿದರು. ತೀರ್ಪುಗಾರರಾಗಿ ಡಾ.ಗೋವಿಂದಸ್ವಾಮಿ, ಎಂ.ಸಿ.ನಾಗರಾಜು, ಛಾಯ, ಸಿದ್ದರಾಜು ಪಾಲ್ಗೊಂಡಿದ್ದರು.

ವಿಭಾಗ ಮಟ್ಟಕ್ಕೆ ಆಯ್ಕೆ

ಕಾಲೇಜು ರಂಗೋತ್ಸವದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಸ್ಪರ್ಧೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನಾಟಕ ವಿಭಾಗದಲ್ಲಿ ಕೇವಲ ಎರಡು ತಂಡಗಳಷ್ಟೇ ಪಾಲ್ಗೊಂಡವು. ಇದರಲ್ಲಿ ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಶಾಂತಿನಿಕೇತನ ಪದವಿ ಕಾಲೇಜು ದ್ವಿತೀಯ ಸ್ಥಾನ ಪಡೆದವು.

ಜನಪದ ನೃತ್ಯ ವಿಭಾಗದಲ್ಲಿ ಐದು ತಂಡಗಳು ಪಾಲ್ಗೊಂಡಿದ್ದವು. ಶಾಂತಿ ನಿಕೇತನ ಕಾಲೇಜು ತಂಡ ಪ್ರಥಮ ಹಾಗೂ ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದು ಫೆಬ್ರುವರಿ 2ರಂದು ನಡೆಯಲಿರುವ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.